Advertisement

ಸೆಂಟ್ರಲ್‌ ಮಾರ್ಕೆಟ್‌ ರಿಟೇಲ್‌ ವ್ಯಾಪಾರಸ್ಥರಿಗೆ ನೆಹರೂ ಮೈದಾನ ಬಳಿ ತಾತ್ಕಾಲಿಕ ಅವಕಾಶ

12:36 AM Apr 23, 2020 | Sriram |

ವಿಶೇಷ ವರದಿ- ಮಂಗಳೂರು: ನಗರದ ಸೆಂಟ್ರಲ್‌ ಮಾರ್ಕೆಟ್‌ ಪ್ರದೇಶದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಹೊಸ ಕಟ್ಟಡ ನಿರ್ಮಾಣ ಆಗಲಿರುವುದರಿಂದ ಅಲ್ಲಿರುವ ರಿಟೇಲ್‌ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ವ್ಯವಹಾರ ನಡೆಸಲು ನೆಹರೂ ಮೈದಾನದ ಬಳಿ ಇರುವ 2.16 ಎಕರೆ ಜಾಗದಲ್ಲಿ 5.25 ಕೋಟಿ ರೂ. ವೆಚ್ಚದ ತಾತ್ಕಾಲಿಕ ಕಟ್ಟಡ 3 ತಿಂಗಳೊಳಗೆ ನಿರ್ಮಾಣವಾಗಲಿದೆ. ಕಾಮಗಾರಿಗೆ ಸೋಮವಾರ ಸಂಸದ ನಳಿನ್‌ ಕುಮಾರ್‌ ಕಟೀಲು ಚಾಲನೆ ನೀಡಿದ್ದಾರೆ.

Advertisement

ನೆಹರೂ ಮೈದಾನದ ಬಳಿ 350 ಮಳಿಗೆಗಳನ್ನು ಒಳಗೊಂಡಿರುವ ತಾತ್ಕಾಲಿಕ ಮಾರ್ಕೆಟ್‌ ನಿರ್ಮಾಣ ಮಾಡಲಾಗುತ್ತದೆ. ಇದು ಶೀಟ್‌ ಛಾವಣಿ ಮತ್ತು ಶಟರ್‌ ಬಾಗಿಲು ಹೊಂದಿರಲಿದೆ. ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಸುಮಾರು 317 ಮಂದಿ ರಿಟೇಲ್‌ ವ್ಯಾಪಾರಸ್ಥರಿದ್ದು, ಅವರೆಲ್ಲರಿಗೂ ತಾತ್ಕಾಲಿಕ ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.

ಶಿಥಿಲಗೊಂಡ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡವನ್ನು ಕೆಡವಿ ಅಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಹೊಸ ಕಟ್ಟಡ ನಿರ್ಮಿಸಲು ಮತ್ತು ಅಲ್ಲಿದ್ದ ರಿಟೇಲ್‌ ವ್ಯಾಪಾರಸ್ಥರಿಗೆ ತಾತ್ಕಾಲಿಕ ವ್ಯವಸ್ಥೆಯನ್ನು ನೆಹರೂ ಮೈದಾನದ ಬಳಿ ಮಾಡಿಕೊಡಲು ನಿರ್ಣಯಿಸಲಾಗಿತ್ತು. ಈ ತಾತ್ಕಾಲಿಕ ಮಾರ್ಕೆಟ್‌ ನಿರ್ಮಾಣಕ್ಕೆ ಎ. 20ರಂದು ಚಾಲನೆ ನೀಡಲಾಗಿದೆ. 3 ತಿಂಗಳುಗಳ‌ಲ್ಲಿ ತಾತ್ಕಾಲಿಕ ಕಟ್ಟಡ ಮತ್ತು 4 ವರ್ಷಗಳಲ್ಲಿ ಹೊಸ ಮಾರ್ಕೆಟ್‌ ಕಟ್ಟಡ ಪೂರ್ತಿಗೊಳಿಸುವ ಉದ್ದೇಶ ಹೊಂದಲಾಗಿದೆ.

2-3 ಕಡೆ ತಾತ್ಕಾಲಿಕ ಶೆಡ್‌
ತಾತ್ಕಾಲಿಕ ಮಾರ್ಕೆಟ್‌ ಕಟ್ಟಡ ನಿರ್ಮಾಣಕ್ಕೂ 3 ತಿಂಗಳ ಕಾಲಾವಕಾಶ ಬೇಕಾಗಿರುವ ಕಾರಣ ಅಷ್ಟರ ತನಕ ತರಕಾರಿ ಮಾರುವವರಿಗೆ ನಗರದ 2- 3 ಕಡೆ ತಾತ್ಕಾಲಿಕ ಶೆಡ್‌ಗಳನ್ನು 10 ದಿನಗಳೊಳಗೆ ನಿರ್ಮಿಸಿಕೊಟ್ಟು ವ್ಯಾಪಾರಕ್ಕೆ ಅನುವು ಮಾಡಿ ಕೊಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್‌ ಉದಯವಾಣಿಗೆ ತಿಳಿಸಿದ್ದಾರೆ.

ಹಲವಾರು ವರ್ಷಗಳ ಕನಸು
ಸುಸಜ್ಜಿತ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡ ನಿರ್ಮಾಣ ಹಲವಾರು ವರ್ಷಗಳ ಕನಸು. ಈಗ ಅದು ಈಡೇರುವ ಕಾಲ ಬಂದಿದೆ. ಸಗಟು ವ್ಯಾಪಾರಸ್ಥರಿಗೆ ಬೈಕಂಪಾಡಿಯಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸುವ ಮಾರ್ಕೆಟ್‌ ಕಟ್ಟಡದಲ್ಲಿ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಹಾಲಿ ಇರುವ ಎಲ್ಲ ರಿಟೇಲ್‌ ವ್ಯಾಪಾರಸ್ಥರಿಗೂ ಅವಕಾಶ ಕಲ್ಪಿಸಲಾಗುವುದು.
– ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

ಎಲ್ಲ ವ್ಯಾಪಾರಿಗಳಿಗೆ ಅವಕಾಶ
ತಾತ್ಕಾಲಿಕ ಕಟ್ಟಡ 3 ತಿಂಗಳಲ್ಲಿ ನಿರ್ಮಾಣವಾಗಲಿದೆ. ಸೆಂಟ್ರಲ್‌ ಮಾರ್ಕೆಟ್‌ನಲ್ಲಿದ್ದ ಎಲ್ಲ ತರಕಾರಿ, ಹಣ್ಣು ಹಂಪಲು ಮತ್ತು ಇತರ ವ್ಯಾಪಾರಿಗಳಿಗೆ ಇಲ್ಲಿ ಅವಕಾಶ ನೀಡಲಾಗುವುದು.
 - ಮೊಹಮದ್‌ ನಝೀರ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next