Advertisement

ಪ್ರೌಢಶಾಲಾ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಕ್ರೀಡಾ ಹಾಸ್ಟೆಲ್‌ ನಿರ್ಮಾಣ

01:12 PM Jul 14, 2022 | Team Udayavani |

ಮಹಾನಗರ: ಗ್ರಾಮೀಣ ಮತ್ತು ನಗರದ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಲು ನಿಟ್ಟಿನಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣ ಬಳಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗಾಗಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಕ್ರೀಡಾ ಹಾಸ್ಟೆಲ್‌ ನಿರ್ಮಾಣವಾಗುತ್ತಿದೆ.

Advertisement

ಕ್ರೀಡಾ ಚಟುವಟಿಕೆ ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯ ಸರಕಾರವು ಮಂಗಳೂರು ಸಹಿತ 10 ಜಿಲ್ಲೆಗಳಲ್ಲಿ ಮಹಿಳಾ ವಸತಿ ನಿಲಯ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಅದರಂತೆ ದ.ಕ. ಜಿಲ್ಲಾ ಮಟ್ಟದ ವಸತಿ ನಿಲಯ ಮಂಗಳೂರು ನಗರದಲ್ಲಿ ನಿರ್ಮಾಣವಾಗ ಲಿದೆ. ಸದ್ಯ ಕಾಮಗಾರಿ ಆರಂಭಗೊಂಡಿದ್ದು, ಈ ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಮಂಗಳೂರು ಮಂಗಳಾ ಕ್ರೀಡಾಂಗಣ ಬಳಿ ಈಗಾಗಲೇ ಎರಡು ಮಹಡಿಯ ಕ್ರೀಡಾ ವಸತಿ ನಿಲಯವಿದೆ. ಇದರ ಒಂದು ಮಹಡಿಯಲ್ಲಿ ಪ್ರೌಢಶಾಲಾ ಬಾಲಕರು ಮತ್ತು ಮತ್ತೂಂದು ಮಹಡಿಯಲ್ಲಿ ಪ್ರೌಢಶಾಲಾ ಬಾಲಕಿಯರು ವಾಸವಿದ್ದಾರೆ. ಆದರೆ ಸರಕಾರದ ನಿಯಮದಂತೆ ಬಾಲಕರು- ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯ ಇರಬೇಕು. ಈ ನಿಟ್ಟಿನಲ್ಲಿ ಈಗಿರುವ ಹಾಸ್ಟೆಲ್‌ ಪಕ್ಕದಲ್ಲಿಯೇ ಮತ್ತೂಂದು ವಸತಿ ನಿಲಯ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ತಾಲೂಕು, ಜಿಲ್ಲಾಮಟ್ಟದ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಅತ್ಯುತ್ತಮ ಕ್ರೀಡಾ ಪ್ರದರ್ಶನ ನೀಡುವ ಬಾಲಕಿಯರಿಗೆ ಹೆಚ್ಚಿನ ತರಬೇತಿ, ಸರಕಾರದ ಸ್ಪಂದನೆ ಹಿನ್ನೆಲೆಯಲ್ಲಿ ಹಾಸ್ಟೆಲ್‌ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಇರುವಂತಹ ಹಾಸ್ಟೆಲ್‌ನಲ್ಲಿ ದ.ಕ. ಜಿಲ್ಲೆಯಿಂದ ವಿದ್ಯಾರ್ಥಿ ಗಳ ಸಂಖ್ಯೆ ಕಡಿಮೆ ಇದ್ದರೂ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಉಳಿದು ಕೊಳ್ಳುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಹಾಸ್ಟೆಲ್‌ ಸೌಲಭ್ಯ ಪಡೆಯಲು ನಿರಾಸಕ್ತಿ ತೋರುತ್ತಿದ್ದು, ಮನೆಯಿಂದಲೇ ಆಗಮಿಸಿ ತರಬೇತಿ ಪಡೆದು ವಾಪಸಾಗುವವರ ಸಂಖ್ಯೆ ಅಧಿಕ.

ಆಯ್ಕೆ ಪ್ರಕ್ರಿಯೆ

Advertisement

ಮಂಗಳಾ ಕ್ರೀಡಾಂಗಣ ಬಳಿ ಈಗಿರುವ ಹಳೆ ಕ್ರೀಡಾ ವಸತಿ ನಿಲಯದಲ್ಲಿ ಐದನೇ ತರಗತಿಯಿಂದ 10ನೇ ತರಗತಿವರೆಗಿನ ಒಟ್ಟು 23 ಮಂದಿ ವಿದ್ಯಾರ್ಥಿಗಳು ವಾಸ್ತವ್ಯವಿದ್ದಾರೆ. ಇದರಲ್ಲಿ 17 ಮಂದಿ ಬಾಲಕರು, 6 ಮಂದಿ ಬಾಲಕಿಯರು. ಸದ್ಯ ನೂತನ ಕ್ರೀಡಾ ವಸತಿ ನಿಲಯ ನಿರ್ಮಾಣವಾಗುತ್ತಿದ್ದು, ಬಳಿಕ ಬಾಲಕಿಯರನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ಮತ್ತಷ್ಟು ಕ್ರೀಡಾಸಕ್ತರನ್ನು ಸೆಳೆಯುವ ನಿಟ್ಟಿನಲ್ಲಿ ಯುವ ಜನ ಕ್ರೀಡಾ ಇಲಾಖೆಯಿಂದ ಸದ್ಯದಲ್ಲೇ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ.

ವರ್ಷಾಂತ್ಯದೊಳಗೆ ಪೂರ್ಣ: ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಗರದ ಮಂಗಳಾ ಕ್ರೀಡಾಂಗಣ ಬಳಿ ಯುವ ಜನ ಕ್ರೀಡಾ ಇಲಾಖೆಯಿಂದ ಕ್ರೀಡಾ ಹಾಸ್ಟೆಲ್‌ ನಿರ್ಮಾಣವಾಗುತ್ತಿದೆ. ಜಿಲ್ಲಾ ಮಟ್ಟ ಸೇರಿದಂತೆ ಬೇರೆ ಜಿಲ್ಲೆಯ ಕ್ರೀಡಾಪಟುಗಳಿಗೆ ಇದು ಸಹಕಾರಿಯಾಗಲಿದೆ. ಸುಮಾರು 50 ಮಂದಿ ವಿದ್ಯಾರ್ಥಿನಿಯರ ವಾಸ್ತವ್ಯಕ್ಕೆ ಈ ವಸತಿ ನಿಲಯ ಉಪಯೋಗವಾಗಲಿದೆ. ಸದ್ಯ ಕಾಮಗಾರಿ ಆರಂಭಗೊಂಡಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. – ಡಿ. ವೇದವ್ಯಾಸ ಕಾಮತ್‌, ಶಾಸಕರು

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next