ಹೊಳೆನರಸೀಪುರ: ಹಾಸನದಿಂದ ಪಟ್ಟಣಕ್ಕೆ ಬರುವ ರೈಲ್ವೆಗೇಟ್ ಮೂಲಕ ಹಾದು ಹೋಗುವ ವಾಹನ ಗಳ ಸುಗಮ ಸಂಚಾರಕ್ಕಾಗಿ 36 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ನುಡಿದರು.
ಪಟ್ಟಣದ ರೈಲ್ವೆ ಗೇಟ್ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತ ನಾಡಿದ ಅವರು, ಈಗಿರುವ ಚನ್ನಾಂಬಿಕ ಪಕ್ಕದ ರೈಲ್ವೆ ಗೇಟ್ ಮತ್ತು, ಸೂರನಹಳ್ಳಿ ರೈಲ್ವೇಗೇಟ್ ಬಳಿ ಅಂಡರ್ ಪಾಸ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.
ವಾಹನ ಸಂಚಾರಕ್ಕೆ ಅನುಕೂಲ: ಈ ಮೇಲ್ಸೇತುವೆ ಹೇಮಾವತಿ ಸೇತುವೆಯಿಂದ ಆರಂಭಗೊಂಡು ಸೂರನಹಳ್ಳಿ ಗೇಟ್ ನಿಂದ ಮುಂದೆ ಡಬ್ಬಲ್ ಟ್ಯಾಂಕ್‌ವರೆಗೆ ಸೇತುವೆ ನಿರ್ಮಾಣವಾಗಲಿದೆ ಎಂದರು. ಈ ಮೇಲ್ಸೇತುವೆ ಬಿಡ್ಜ್ನಿಂದ ಪಟ್ಟಣದ ಹೊರ ಹೋಗುವ ದೊಡ್ಡ ವಾಹನಗಳು ನೇರವಾಗಿ ಮೇಲ್ಸೇತುವೆ ಮೇಲೆ ದಾಟಿ ಚಲಿಸಲಿದೆ. ಉಳಿದಂತೆ ಎರಡು ಅಂಡರ್ ಪಾಸ್ ರಸ್ತೆ ನಿಲ್ದಾಣದಿಂದ ದ್ವಿಚಕ್ರ ಮತ್ತು ಕಾರುಗಳು ಸಲೀಸಾಗಿ ಸಾಗಲು ಅನುಕೂಲ ವಾಗಲಿದೆ ಎಂದರು.
ವಿದ್ಯಾರ್ಥಿಗಳಿಗೆ ಅನುಕೂಲ: ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ರೈಲ್ವೆ ಹಳಿಗಳನ್ನು ದಾಟಿ ಹೋಗಬೇಕಾಗಿತ್ತು. ಮೇಲ್ಸೇತುವೆ ನಿರ್ಮಾಣದಿಂದ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಅನುಕೂಲವಾಗಲಿದೆ ಎಂದರು. ಪ್ರಸ್ತುತ ಹಾಸನ ಹಂಗರಹಳ್ಳಿ ಮತ್ತು ಹೊಳೆ ನರಸೀಪುರದ ಬಳಿಗೆ ಇಂದು ಗುದ್ದಲಿ ಪೂಜೆ ನಡೆದಿದೆ. ಮೈಸೂರು ಕಡೆಗೆ ತೆರಳುವ ಹಂಪಾಪುರದ ಬಳಿ ಯೊಂದು ಮೇಲ್ಸೇತುವೆ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಅದೂ ಸಧ್ಯದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದರು.
ಸಂಚಾರ ದಟ್ಟಣೆಗೆ ಮುಕ್ತಿ: ಇತ್ತೀಚಿನ ದಿನಗಳಲ್ಲಿ ರೈಲು ಬರುವ ವೇಳೆ ವಾಹನಗಳು ಬಹಳ ಹೊತ್ತು ನಿಂತು ಚಲಿಸಬೇಕಿತ್ತು. ಇದರಿಂದ ಕಾಲ ವಿಳಂಬವಾಗುತ್ತಿತ್ತು. ಈ ಯೋಜನೆ ಅನುಷ್ಠಾನಗೊಂಡರೆ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದರು.
ರಸ್ತೆ ಅಗಲೀಕರಣಕ್ಕೆ ಕ್ರಮ: ಮೇಲ್ಸೇತುವೆ ನಿರ್ಮಾಣದಿಂದ ಮುಂದೆ ಪಟ್ಟಣದ ಮಧ್ಯ ಭಾಗದಲ್ಲಿ ಸಾಗುವ ರಸ್ತೆ ಅಗಲೀಕರಣ ಆಗಲಿದೆಯೇ ಎಂದು ಸಾರ್ವಜನಿಕರಿಂದ ಬಂದ ಪ್ರಶ್ನೆಗೆ ಮೊದಲು ಈ ಮೇಲ್ಸೇತುವೆ ನಿರ್ಮಾಣವಾಗಲಿ. ಆಮೇಲೆ ಒಂದಡೆ ಕುಳಿತು ಅಗಲೀಕರಣದ ಬಗ್ಗೆ ಚರ್ಚಿಸಿ ತಿರ್ಮಾನಿ ಸೋಣ ಎಂದು ಹೇಳಿದರು.
ಮಹಿಳಾ ಕಾಲೇಜು ಅಭಿವೃದ್ಧಿಗೆ ಕ್ರಮ: ಪ್ರಸ್ತುತ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೇಲಂತಸ್ತು ನಿರ್ಮಾಣಕ್ಕೆ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜೊತೆಗೆ ಕಾಲೇಜಿಗೆ ಅವಶ್ಯ ವಾಗಿರುವ ಕಂಪ್ಯೂಟರ್, ಡೆಸ್ಕ್ಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಮತ್ತಷ್ಟು ಉತ್ಕೃಷ್ಟವಾ ಗಿಡಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.