ಕಠ್ಮಂಡು: ನೇಪಾಲದ ಒಂದಿಷ್ಟು ನೆಲವನ್ನು ಚೀನ ಈಗಾಗಲೇ ನುಂಗಿದೆ. ಆದರೂ ನೇಪಾಲಕ್ಕೆ ಬುದ್ಧಿ ಬಂದಿಲ್ಲ. ಈಗ ಚೀನದ ಲಾಭಕ್ಕಾಗಿಯೇ ತನ್ನ ನೆಲದಲ್ಲಿ ರಸ್ತೆಗಳನ್ನು ನಿರ್ಮಿಸಿ ಕೊಡುತ್ತಿದೆ. ಭಾರತದ ಗಡಿಯಲ್ಲಿ ಮಹಾಕಾಳಿ ಕಾರಿಡಾರ್‌ಯೋಜನೆಯಡಿ 134 ಕಿ.ಮೀ. ದೂರದ ರಸ್ತೆ ನಿರ್ಮಾಣಕ್ಕೆ ನೇಪಾಲ ಕೈಹಾಕಿದೆ.
“ಭಾರತದ ರಸ್ತೆಗಳ ಅವಲಂಬನೆ ಕಡಿಮೆ ಮಾಡಲು, ನೇಪಾಲಿ ಪ್ರಜೆಗಳ ಅನುಕೂಲಕ್ಕಾಗಿ ರಸ್ತೆ ನಿರ್ಮಿಸುತ್ತಿದ್ದೇವೆ’ ಎಂದು ನೇಪಾಲ ಹೇಳುತ್ತಿದ್ದರೂ ಇದರಲ್ಲಿ ಯಾವುದೇ ಹುರು ಳಿಲ್ಲ ಎನ್ನಲಾಗಿದೆ. ಏಕೆಂದರೆ, ಈಗ ನಿರ್ಮಾಣಗೊಳ್ಳುತ್ತಿರುವ ದಾರ್ಚುಲಾ- ಟಿಂಕಾರ್ ರಸ್ತೆ ಯೋಜನೆ ಹೆಚ್ಚು ಲಾಭವಾಗುವುದೇ ಚೀನಕ್ಕೆ. ಟಿಂಕಾರ್ ಮೂಲಕ ಚೀನ ಅಧಿಪತ್ಯವಿರುವ ಟಿಬೆಟ್ ಗಡಿಯನ್ನು ಈ ರಸ್ತೆಗಳು ಸಂಪರ್ಕಿಸಲಿವೆ.
ಭಾರತದ ಉತ್ತರಖಂಡದ ಫಿತೋರಗಢ್ ಜಿಲ್ಲೆಗೆ ಅತ್ಯಂತ ಸಮೀಪದಲ್ಲಿ ನೇಪಾಲ ರಸ್ತೆ ನಿರ್ಮಿಸುತ್ತಿದೆ. ಇಷ್ಟು ದಿನ ನೇಪಾಲದ ನಾಗರಿಕರು ತಮ್ಮ ಹೊಲ, ಮನೆಗಳಿಗೆ ತೆರಳಲು ಭಾರತದ ರಸ್ತೆಗಳನ್ನು ಬಳಸಿಕೊಳ್ಳುತ್ತಿದ್ದರು. ನೇಪಾಲ ಸೇನೆ ಕೂಡ ಗಸ್ತು ತಿರುಗುವಾಗಲೂ ನಮ್ಮ ಗಡಿ ರಸ್ತೆಗಳ ಮೂಲಕವೇ ಸಾಗುತ್ತಿತ್ತು. ಮಹಾಕಾಳಿ ಕಾರಿಡಾರ್ ರಸ್ತೆ ನಿರ್ಮಾಣದಿಂದಾಗಿ ಭವಿಷ್ಯದಲ್ಲಿ ನೇಪಾಲದ ಪ್ರಜೆಗಳಿಗೆ ಭಾರತದ ಗಡಿ ದಾಟುವ ಪ್ರಸಂಗ ಉದ್ಭವಿಸುವುದಿಲ್ಲ. ಅಲ್ಲದೆ, ಈ ರಸ್ತೆಗಳ ಮೂಲಕವೇ ನೇಪಾಲ ತನ್ನ ಪ್ರಜೆಗಳನ್ನು ಮಾನಸ ಸರೋವರ ಯಾತ್ರೆಗೂ ಕರೆದೊಯ್ಯಲಿದೆ.
“ಮೌರಿಬೇರ್ ಮತ್ತು ಘಂಟಿ ಪ್ರದೇಶಗಳನ್ನು ಸಂಪರ್ಕಿಸುವ 450 ಮೀಟರ್ ಉದ್ದದ ರಸ್ತೆ ನಿರ್ಮಾಣವಾದರೆ ಇಲ್ಲಿನ 182 ಮನೆಗಳಿಗೆ ಅನುಕೂಲವಾಗುತ್ತದೆ. ಅಂದಾಜು 1200 ನೇಪಾಳಿ ಪ್ರಜೆಗಳು ಭಾರತದ ರಸ್ತೆ ಬಳಸಿಕೊಳ್ಳದೆ ತಮ್ಮ ಹಳ್ಳಿ ಗಳಿಗೆ ತೆರಳುವುದು ಸುಲಭವಾಗುತ್ತದೆ’ ಎಂದು ನೇಪಾಲ ಸೇನೆ ಹೇಳಿದೆ.