Advertisement

20 ಲಕ್ಷ ಕೋಟಿ ರೂ.ಗಳ ಮೂಲಕ ನವಭಾರತ ನಿರ್ಮಾಣ: ನಳಿನ್‌

01:53 AM May 14, 2020 | Sriram |

ಮಂಗಳೂರು: ಕೋವಿಡ್- 19ದಿಂದ ಸಂಕಷ್ಟದಲ್ಲಿರುವ ಜನ ಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಬೆಂಬಲದ ಮೂಲಕ ನವಭಾರತ ನಿರ್ಮಾಣ ಸಾಧ್ಯ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅಭಿಪ್ರಾಯಪಟ್ಟಿದ್ದಾರೆ.

Advertisement

ಮಂಗಳೂರಿನ ಸಂಸದರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೊದಲಿಗೆ 1ಲಕ್ಷ 70 ಸಾವಿರ ಕೋಟಿ ರೂ. ಪ್ರಧಾನ ಮಂತ್ರಿ ಗರೀಬ್‌ ರಥ್‌ ಯೋಜನೆ, ಲಾಕ್‌ಡೌನ್‌ ಬಳಿಕ 20 ಲಕ್ಷಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್‌ನಿಂದಾಗಿ ಇಂದಿನ ಸಂಕಷ್ಟ ಕಾಲದಲ್ಲಿ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ ಎಂದರು.

ಕೇಂದ್ರ ಸರಕಾರ ಕಾರ್ಪೊರೇಟ್‌, ಉದ್ಯಮಿಗಳ ಪರವಾಗಿದೆ ಎನ್ನುವ ಬಗ್ಗೆ ಈ ಹಿಂದೆ ಕೆಲವು ಟೀಕೆಗಳು ಬಂದಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಂತ್ಯೋದಯ ಕಲ್ಪನೆಯ ಮೂಲಕ ಜನ್‌ಧನ್‌ ಯೋಜನೆ, ಉಜ್ವಲ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮೂಲಕ ಇದು ಜನಸಾಮಾನ್ಯರ ಸರಕಾರ, ಜನರ ಭಾವನೆಗಳ ಸರಕಾರ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಸ್ವದೇಶಿ ಚಿಂತನೆಯ ಯೋಜನೆಗಳಿಂದ ದೇಶದಲ್ಲಿ ಉದ್ಯಮಶೀಲತೆ, ಸ್ವದೇಶಿ ಉದ್ಯಮದ ನಿರ್ಮಾಣ, ಉದ್ಯೋಗ ಸೃಷ್ಟಿಯಾಗುವುದರಿಂದ ದೇಶ ನವಭಾರತವಾಗಿ ಹೊರಬರುತ್ತದೆ. ಕೊರೊನಾದಂತಹ ಕಠಿನ ಪರಿಸ್ಥಿತಿಯಲ್ಲಿ ಜನರ ವಿಶ್ವಾಸವನ್ನು ಇಮ್ಮಡಿ ಮಾಡುವ ಕಾರ್ಯವಾಗಿದೆ ಎಂದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಕಾರ್ಪೊರೇಟರ್‌ ಸುಧೀರ್‌ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.

ವಿವಿಧ ದೇಶಗಳಿಂದ ವಿಮಾನ: ನಳಿನ್‌
ವಿದೇಶದಲ್ಲಿರುವ ಅನಿವಾಸಿ ಭಾರತೀಯರನ್ನು ಕರೆತರುವ ಪ್ರಯತ್ನಗಳು ಸಾಗಿದೆ. ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್‌ ಜೋಶಿ ಅವರ ನೇತೃತ್ವದ ಸಮಿತಿ ಇದರ ಉಸ್ತುವಾರಿ ನೋಡಿಕೊಳ್ಳು ತ್ತಿದೆ. ಈಗ ಜಿಲ್ಲೆಗೆ ಒಂದು ವಿಮಾನ ಮಾತ್ರ ಬಂದಿದೆ. ಇನ್ನು ಕೆಲವು ವಿಮಾನಗಳು ಬರಲು ಬಾಕಿ ಉಳಿದಿದೆ. ಮೊದಲು ಗರ್ಭಿಣಿಯರು, ಬಾಣಂತಿಯರು, ವೀಸಾದ ಸಮಸ್ಯೆ ಇರುವ ಮಂದಿ, ಉದ್ಯೋಗ ಕಳೆದುಕೊಂಡವರು ಎನ್ನುವ ಪಟ್ಟಿಯ ಆಧಾರದಲ್ಲಿ ಕರೆತರಲಾಗುತ್ತಿದೆ’ ಎಂದು ಸಂಸದ ನಳಿನ್‌ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next