Advertisement
ಇದು ತರಕಾರಿ-ಹಣ್ಣು ಹಂಪಲುಗಳ ಮತ್ತು ಸಾಂಬಾರು ಪದಾರ್ಥಗಳ ಸಗಟು ಮಾರು ಕಟ್ಟೆಯಾಗಿದ್ದು, ಬೈಕಂಪಾಡಿಯ ಎ.ಪಿ.ಎಂ.ಸಿ. ಯಾರ್ಡ್‌ನ 3.75 ಎಕರೆ ಜಾಗದಲ್ಲಿ 12 ಕೋ.ರೂ. ವೆಚ್ಚದಲ್ಲಿ ಮುಂದಿನ 6 ತಿಂಗಳುಗಳಲ್ಲಿ ತಲೆ ಎತ್ತಲಿದೆ. ಈ ಅತ್ಯಾಧುನಿಕ ಮಾರುಕಟ್ಟೆ ಯೋಜನೆಗೆ ಈಗಾಗಲೇ ಸರಕಾರದ ಅನುಮೋದನೆ ಲಭಿಸಿದ್ದು, ಇದೇ ಜುಲೈ 14 ರಂದು ಇದರ ಭೂಮಿ ಪೂಜೆ ನಡೆಸಲು ಎ.ಪಿ.ಎಂ.ಸಿ. ವತಿಯಿಂದ ಸಿದ್ಧತೆ ನಡೆದಿದೆ.
Related Articles
Advertisement
ಇಲ್ಲಿ ವ್ಯವಹಾರಕ್ಕೆ ಮೂಲ ಸೌಲಭ್ಯಗಳು ಇಲ್ಲ ಎಂಬುದಾಗಿ ಸಗಟು ವ್ಯಾಪಾರಿಗಳು ಪದೇ ಪದೇ ದೂರು ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ ಕುಮಾರ್ ಕಟೀಲು ಮತ್ತು ಶಾಸಕರು ಜಿಲ್ಲಾಧಿಕಾರಿಗಳನ್ನು ಸೇರಿಸಿಕೊಂಡು ಸಭೆ ನಡೆಸಿ ಸಗಟು ವ್ಯಾಪಾರಿಗಳಿಗೆ ಸುಸಜ್ಜಿತ ಮಾರ್ಕೆಟ್‌ನ್ನು ನಿರ್ಮಿಸಿ ಕೊಡಬೇಕೆಂದು ಅಭಿಪ್ರಾಯಪಟ್ಟಿದ್ದರು.
ಇದೇ ವೇಳೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಂಗಳೂರಿಗೆ ಭೇಟಿ ಸಂದರ್ಭದಲ್ಲಿ ಬೈಕಂಪಾಡಿ ಎಪಿಎಂಸಿಗೂ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಸಗಟು ವ್ಯಾಪಾರಿ ಗಳಿಗಾಗಿ ಎಪಿಎಂಸಿ ಯಾರ್ಡ್‌ನಲ್ಲಿ ಮಾರ್ಕೆಟ್ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿ ದ್ದರು. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಮಾರ್ಕೆಟ್ ನಿರ್ಮಾಣದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು ಎಂದು ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಉಪ ಸಮಿತಿ ರಚನೆ :
ಉತ್ತಮ ರಸ್ತೆ ಸಾರಿಗೆ ವ್ಯವಸ್ಥೆ, ವಿಮಾನ ನಿಲ್ದಾಣ, ಬಂದರು, ರೈಲು ನಿಲ್ದಾಣ ಸಹಿತ ಎಲ್ಲ ಸಂಪರ್ಕ ವ್ಯವಸ್ಥೆಗಳೂ ಇರುವ ತಾಣ ಮಂಗಳೂರು. ಹಾಗಾಗಿ ಇಲ್ಲಿನ ಎ.ಪಿ.ಎಂ.ಸಿ.ಯನ್ನು ದಕ್ಷಿಣ ಭಾರತಕ್ಕೇ ಮಾದರಿಯಾಗಿ ಅಭಿವೃದ್ಧಿಪಡಿಸಲು ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಲಾಗಿದೆ. ಶಾಸಕರಾದ ವೇದ ವ್ಯಾಸ ಕಾಮತ್, ಭರತ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಕೃಷ್ಣ ರಾಜ್ ಹೆಗ್ಡೆ, ನಿವೃತ್ತ ಅಧಿಕಾರಿ ಚಂದ್ರಮೋಹನ್, ಪ್ರವೀಣ್ ಕುಮಾರ್ ಅವರಿರುವ ಈ ಉಪ ಸಮಿತಿಯು ಎ.ಪಿ.ಎಂ.ಸಿ. ಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ವರದಿ ತಯಾರಿಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್‌ಮೆಂಟ್ (ಐಐಪಿಎಂ)ಗೆ ವಹಿಸಿ ಕೊಟ್ಟಿದೆ. ಐಐಪಿಎಂ ತನ್ನ ವರದಿ ತಯಾರಿಯ ಅಂತಿಮ ಹಂತದಲ್ಲಿದ್ದು, ಶೀಘ್ರ ಸಲ್ಲಿಸುವ ನಿರೀಕ್ಷೆ ಇದೆ.
ಹೊಸ ಮಾರ್ಕೆಟ್‌ನಲ್ಲಿ ಏನೇನಿದೆ? :
- ಈ ಅತ್ಯಾಧುನಿಕ ಮಾರ್ಕೆಟ್ ವರ್ತಕರಿಗೆ ವ್ಯವಹಾರ ನಡೆಸಲು ಬೇಕಾಗಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿರುತ್ತದೆ.
- ನೆಲ ಮಹಡಿಯಲ್ಲಿ ತರಕಾರಿ, ಹಣ್ಣುಗಳನ್ನು ಅನ್‌ಲೋಡ್ ಮತ್ತು ಲೋಡ್ ಮಾಡಲು ಸೂಕ್ತ ವ್ಯವಸ್ಥೆ ಹಾಗೂ ಮೇಲ್ಗಡೆ ಕಚೇರಿ ಸೌಲಭ್ಯ.
- ಎ ಮತ್ತು ಬಿ ಎಂಬ 2 ಬ್ಲಾಕ್‌ಗಳನ್ನು ಹೊಂದಿದ್ದು, ಒಟ್ಟು ಸುಮಾರು 100 ಮಳಿಗೆಗಳಿರುತ್ತವೆ
- ಹಣ್ಣು ಮತ್ತು ತರಕಾರಿಗಳು ಕೆಡದಂತೆ ಸಂರಕ್ಷಿಸಿ ಇಡಲು ಕೋಲ್ಡ್ ಸ್ಟೋರೇಜ್
- ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಗಾಳಿ ಮತ್ತು ಬೆಳಕಿಗೆ ಸೂಕ್ತ ಅವಕಾಶ
- ರೂಫ್ ಟಾಪ್‌ನಲ್ಲಿ ಸೌರ ವಿದ್ಯುತ್ ಪ್ಯಾನೆಲ್
- ವಾಹನಗಳ ಸಂಚಾರಕ್ಕೆ 80 ಅಡಿ ಅಗಲದ ರಸ್ತೆ
- 110 ವಾಹನಗಳಿಗೆ ಪಾರ್ಕಿಂಗ್ ಸವಲತ್ತು
- ತ್ಯಾಜ್ಯ ರಹಿತ ವಾತಾವರಣ: ತ್ಯಾಜ್ಯಗಳ ತ್ವರಿತ ನಿರ್ವಹಣೆ/ವಿಲೇವಾರಿ ವ್ಯವಸ್ಥೆ
- ಮಳೆ ನೀರು ಕೊಯ್ಲು ಸೌಕರ್ಯ