Advertisement

ಕಾನೂನು ಉಲ್ಲಂಘಿಸಿ ಮಾಲ್‌ ನಿರ್ಮಾಣ

12:26 PM May 05, 2017 | |

ದಾವಣಗೆರೆ: ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ವಿವಾದಿತ ಜಾಗದಲ್ಲೇ ಮಾಲ್‌ ನಿರ್ಮಿಸಲು ಅನುಮತಿ ನೀಡಿರುವ ಕ್ರಮ ಹಾಗೂ ಕಾನೂನು ಉಲ್ಲಂಘಿಸಿ ನಿರ್ಮಿಸಿರುವ ಮಾಲ್‌ ಉದ್ಘಾಟನೆ ವಿರೋಧಿಸಿ ಮೇ 8ರಂದು ಮಹಾನಗರ ಪಾಲಿಕೆ ಮುಂದಿರುವ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದ್ದಾರೆ. 

Advertisement

ಶಾಸಕ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್‌.ಎಸ್‌. ಗಣೇಶ್‌ ನಿರ್ಮಿಸಿರುವ ಕನ್ವೆನ್‌ಶನ್‌ ಹಾಲ್‌, ಮಾಲ್‌, ಮಿನಿಛತ್ರಕ್ಕೆ ಸಂಬಂಧಿಸಿದ ಜಾಗದ ವಿವಾದ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ (ರಿಟ್‌ ಪಿಟಿಷನ್‌ ನಂಬರ್‌: 10599) ನಡೆಯುತ್ತಿದೆ. ಉಚ್ಚ ನ್ಯಾಯಾಲಯ ಈಗಾಗಲೇ ಮಹಾನಗರ ಪಾಲಿಕೆ, ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕಟ್ಟಡದ ಮಾಲಿಕರಿಗೆ ನೋಟಿಸ್‌ ಜಾರಿ ಮಾಡಿದೆ.

ಜಾಗದ ಬಗ್ಗೆ ವಿವಾದವಿದ್ದರೂ ಕಟ್ಟಡ ನಿರ್ಮಿಸಲು ನಗರಪಾಲಿಕೆ ಅನುಮತಿ ನೀಡಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಾಸಕ ಶಾಮನೂರು ಶಿವಶಂಕರಪ್ಪನವರೇ ನೇರ ಕಾರಣ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ದಾವಣಗೆರೆ ತಾಲೂಕು ಶಾಬನೂರು ಗ್ರಾಮದ ಸರ್ವೇ ನಂಬರ್‌ 73/1(21 ಗುಂಟೆ), 76/1(1 ಎಕರೆ), 76/2(30 ಗುಂಟೆ) ಒಟ್ಟು 2 ಎಕರೆ 11 ಗುಂಟೆ ಜಾಗದ ಬಗ್ಗೆ ವಿವಾದ ಇದೆ.

ಈಗ ಕಟ್ಟಿರುವ ಮಾಲ್‌ ಜಾಗದಲ್ಲಿ ಮಾಜಿ ಶಾಸಕ ಗಾಂಜಿ ವೀರಪ್ಪನವರ ಸಮಾಧಿ, 9.14 ಮೀಟರ್‌ನ ಎರಡು ಸಾರ್ವಜನಿಕ ರಸ್ತೆ ಹಾಗೂ ಸಾರ್ವಜನಿಕ ಉದ್ಯಾನವನವಿದೆ. ಸಾರ್ವಜನಿಕರ ಆಸ್ತಿಯನ್ನು ಮಾಲ್‌, ಕನ್ವೆನ್‌ಶನ್‌ ಹಾಲ್‌, ಮಾಲ್‌, ಮಿನಿಛತ್ರ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎಂದು ದಾಖಲೆ ಸಮೇತ ಆರೋಪಿಸಿದರು. ವಿವಾದಿತ ಜಾಗದಲ್ಲಿದ್ದ ನಿವೇಶನಗಳನ್ನು ಖರೀದಿಸಿರುವ ಎಸ್‌.ಎಸ್‌. ಗಣೇಶ್‌, ನಿವೇಶನಗಳ ಪಕ್ಕದಲ್ಲಿದ್ದ ಸಾರ್ವಜನಿಕ ಜಾಗವನ್ನು ತಮ್ಮ ಕಟ್ಟಡಕ್ಕೆ ಬಳಸಿಕೊಂಡಿರುವುದು ಕಾನೂನುಬಾಹಿರ.

ವಿವಾದಿತ ಜಾಗಕ್ಕೆ ಮಹಾನಗರ ಪಾಲಿಕೆ ಅನುಮತಿ ನೀಡುವಲ್ಲಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಾಸಕ ಶಾಮನೂರು ಶಿವಶಂಕರಪ್ಪ ಹಸ್ತಕ್ಷೇಪ ನಡೆಸಿದ್ದಾರೆ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದರು.  ಮಾಲ್‌, ಕನ್ವೆನ್‌ಶನ್‌ ಹಾಲ್‌, ಮಿನಿಛತ್ರ ಸ್ಮಾರ್ಟ್‌ಧಿ ಸಿಟಿ ದಾವಣಗೆರೆಗೆ ಕೊಡುಗೆಗಳು ಎಂಬುದಾಗಿ ಪ್ರಚಾರ ಮಾಡಲಾಗುತ್ತಿದೆ. ಅವೆಲ್ಲವೂ ಸ್ಮಾರ್ಟ್‌ಸಿಟಿಗೆ ಕೊಡುಗೆಗಳಲ್ಲ.

Advertisement

ದಾವಣಗೆರೆಯ ಜನತೆಗೆ ಮಾಡಿರುವ ಸ್ಮಾರ್ಟ್‌ ಮೋಸ. ದಾನಶೂರಕರ್ಣ, ಕೊಡುಗೈ ದಾನಿ ಎಂಬೆಲ್ಲಾ ಬಿರುದಾವಳಿ ಹೊಂದಿದವರು ಸಾರ್ವಜನಿಕರ ಆಸ್ತಿ ಕಬಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಮಲ್ಲಿಕಾರ್ಜುನ್‌ಗೆ ನಿಜವಾಗಿಯೂ ಸಾರ್ವಜನಿಕ ಕಾಳಜಿ ಇದ್ದಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಮಾಜಿ ಶಾಸಕ ಗಾಂಜಿ ವೀರಪ್ಪನವರ ಸಮಾಧಿ, ರಸ್ತೆ, ಉದ್ಯಾನವನದ ಜಾಗವನ್ನು ಸಾರ್ವಜನಿಕರಿಗೇ ಬಿಟ್ಟು ಕೊಡಬೇಕು ಎಂದು ಒತ್ತಾಯಿಸಿದರು. 

ಮೇ. 8 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಸ್ವಾಮೀಜಿಯವರು, ಮಾಜಿ ಪ್ರಧಾನಿ ದೇವೇಗೌಡರು ಒಳಗೊಂಡಂತೆ ಎಲ್ಲರಿಗೂ ಜಾಗದ ವಿವಾದ, ನ್ಯಾಯಾಲಯದ ವಿಚಾರಣೆಯ ಬಗ್ಗೆ ಸವಿವರವಾಗಿ ಪತ್ರ ಬರೆದು ವಿವರಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ. ಉದ್ಘಾಟನಾ ಸಮಾರಂಭದ ಸ್ಥಳದಲ್ಲೇ ಧರಣಿ ಮಾಡಬಹುದಿತ್ತು. ಹೊಸ ರೀತಿಯ ಸಮಸ್ಯೆ ಉಂಟು ಮಾಡುವ ಇರಾದೆ ತಮಗೆ ಇಲ್ಲವೇ ಇಲ್ಲ.

ಹಾಗಾಗಿ ವಿವಾದಿತ ಜಾಗದಲ್ಲಿ ಮಾಲ್‌ ಕಟ್ಟಲು ಅನುಮತಿ ನೀಡಿರುವ ಕ್ರಮ ವಿರೋಧಿಸಿ ಅದೇ ನಗರಪಾಲಿಕೆ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಹಾನಗರ ಪಾಲಿಕೆ ಸದಸ್ಯ ಡಿ.ಎನ್‌. ಕುಮಾರ್‌, ಜಿಲ್ಲಾ ಮುಖಂಡರಾದ ಎಚ್‌.ಎನ್‌. ಶಿವಕುಮಾರ್‌, ಎನ್‌. ರಾಜಶೇಖರ್‌, ಕೊಂಡಜ್ಜಿ ಜಯಪ್ರಕಾಶ್‌, ಕೆ.ಎನ್‌. ಓಂಕಾರಪ್ಪ, ಸಿ. ರಮೇಶ್‌ನಾಯ್ಕ, ಪ್ರಭು ಕಲಬುರುಗಿ, ಎಲ್‌.ಡಿ. ಗೋಣೆಪ್ಪ, ರಾಜನಹಳ್ಳಿ ಶಿವಕುಮಾರ್‌, ಎಚ್‌. ಎಸ್‌. ಲಿಂಗರಾಜ್‌, ಪ್ರವೀಣ್‌ ಜಾಧವ್‌, ಬೇತೂರು ಮಹಾದೇವ್‌, ಬಾಲರಾಜ್‌ ಎರೇಸೀಮೆ, ಧನುಶ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next