Advertisement

ಶಾಂತಿಮೊಗರು ಕಿಂಡಿ ಅಣೆಕಟ್ಟು ನಿರ್ಮಾಣ ಕುಂಠಿತ

11:36 PM Mar 18, 2020 | mahesh |

ಶಾಂತಿಮೊಗರಿನಲ್ಲಿ ಕುಮಾರಧಾರಾ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣವಾದರೆ ನೀರಿನ ಸಮಸ್ಯೆ ಪರಿಹಾರ ವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ.

Advertisement

ಬೆಳಂದೂರು: ಕುಮಾರಧಾರಾ ನದಿಗೆ ಶಾಂತಿಮೊಗರು ಎಂಬಲ್ಲಿ ಬೃಹತ್‌ ಕಿಂಡಿ ಅಣೆಕಟ್ಟು ನಿರ್ಮಾಣವಾಗಿ ಮೂರು ದಶಕಗಳ ಬೇಡಿಕೆ ಸಾಕಾರಗೊಂಡು ಬಿರು ಬೇಸಗೆಯಲ್ಲಿ ನೀರಿನ ಸಮಸ್ಯೆ ದೂರವಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಕಿಂಡಿ ಅಣೆಕಟ್ಟಿನ ನಿಧಾನಗತಿಯ ಕಾಮಗಾರಿ ನಿರಾಶೆ ಮೂಡಿಸಿದೆ.

ಸುಳ್ಯ ಶಾಸಕ ಎಸ್‌. ಅಂಗಾರ ವಿಶೇಷ ಮುತುವರ್ಜಿಯಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖಾಂತರ 7.5 ಕೋಟಿ ರೂ. ಅನುದಾನದ ಕಾಮಗಾರಿ ಪಶ್ಚಿಮವಾಹಿನಿ ಯೋಜನೆಯಲ್ಲಿ ಅನುಷ್ಠಾನವಾಗುತ್ತಿದೆ.

ಕುಮಾರಧಾರಾ ನದಿಗೆ ಸುಬ್ರಹ್ಮಣ್ಯದಲ್ಲಿ ಹಾಗೂ ಉಪ್ಪಿನಂಗಡಿ ಬಳಿ ಎರಡು ಕಿಂಡಿ ಅಣೆಕಟ್ಟುಗಳು ಕುಡಿಯುವ ನೀರಿನ ಬಳಕೆಗೆ ಉಪಯೋಗವಾಗುತ್ತಿದ್ದು, ಶಾಂತಿಮೊಗರುವಿನಲ್ಲಿ ಮೂರನೇ ಹಾಗೂ ಅತಿದೊಡ್ಡ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು.

ಈ ಅಣೆಕಟ್ಟು ನಿರ್ಮಾಣ ಮಾಡಿ ಕುಡಿಯುವ ನೀರಿಗೆ ಬಳಕೆ ಮಾಡುವ ಉದ್ದೇಶವಿದ್ದರೂ ಕೃಷಿ ಬಳಕೆ ಪ್ರಮುಖ ಉದ್ದೇಶವಾಗಿತ್ತು. ಪಶ್ಚಿಮವಾಹಿನಿ ಯೋಜನೆಯಲ್ಲಿ ಜಿಲ್ಲೆಯ ಹಲವೆಡೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡುತ್ತಿದ್ದರೂ ಕೃಷಿ ಬಳಕೆಗೆ ಎಂದು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಅಣೆಕಟ್ಟು ನಿರ್ಮಾಣವಾಗುತ್ತಿದೆ ಎಂದು ಇಲಾಖಾಧಿಕಾರಿಗಳು ಅಂದು ತಿಳಿಸಿದ್ದರು.

Advertisement

7.5 ಕೋಟಿ ರೂ. ಯೋಜನೆ
ಕುಡಿಯುವ ನೀರಿನ ಬವಣೆ ನೀಗಿಸಬೇಕೆನ್ನುವ ಉದ್ದೇಶದಿಂದ ಸುಳ್ಯ ಶಾಸಕ ಎಸ್‌. ಅಂಗಾರ ಶಿಪಾರಸಿನಂತೆ ಈ ಕಿಂಡಿ ಅಣೆಕಟ್ಟು ಯೋಜನೆಗೆ 7.5 ಕೋಟಿ ರೂ. ಮಂಜೂರುಗೊಂಡು ವ್ಯಯಮಾಡಲಾಗುತ್ತಿದೆ. ನದಿಯ ತಳಮಟ್ಟದಿಂದ ನಾಲ್ಕು ಮೀಟರ್‌ ಎತ್ತರದಲ್ಲಿ ನಿರ್ಮಾಣವಾಗುವ ಈ ಅಣೆಕಟ್ಟು 221 ಮೀಟರ್‌ ಉದ್ದ ಹಾಗೂ ಮೂರು ಮೀಟರ್‌ ಅಗಲವಿರುತ್ತದೆ. ಐವತ್ತಾರು ಕಿಂಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಸುಮಾರು 18.56 ಎಂಸಿಎಫ್‌ಟಿ ನೀರು ಶೇಖರಣೆಯಾಗಲಿದೆ. ಡಿಸೆಂಬರ್‌ ಆರಂಭದಿಂದ ನದಿಯ ನೀರಿನ ಮಟ್ಟವನ್ನು ನೋಡಿಕೊಂಡು ಹಲಗೆಗಳನ್ನು ಕಿಂಡಿಗಳಿಗೆ ಜೋಡಣೆ ಮಾಡಲಾಗುತ್ತದೆ, ಯಥಾಪ್ರಕಾರ ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದಂತೆ ಹಲಗೆಗಳನ್ನು ತೆಗೆದು ಬಿಡಲಾಗುತ್ತದೆ. ಮಳೆಗಾಲದಲ್ಲಿ ನದಿಯ ನೀರನ್ನು ಯಾವುದೇ ಅಡೆತಡೆಗಳಿಲ್ಲದೆ ಹರಿಯಬಿಡಲಾಗುತ್ತದೆ. ಇದು ಯೋಜನೆಯ ಕಾಮಗಾರಿ ಮುಗಿದ ಬಳಿಕ ಆಗಲಿರುವ ವಿಧಾನ.

ಈ ಕಿಂಡಿ ಅಣೆಕಟ್ಟೆ ನಿರ್ಮಾಣವಾದರೆ ನದಿಯ ಇಕ್ಕೆಳೆಗಳಲ್ಲಿ ಸುಮಾರು ಎರಡರಿಂದ ಮೂರು ಕಿ.ಮೀ. ಸುತ್ತಳತೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ, ಕೃಷಿಕರ ಕೊಳವೆಬಾವಿ, ಕುಡಿಯುವ ನೀರಿನ ಬಾವಿ ಹಾಗೂ ಕೆರೆಗಳಲ್ಲಿ ಬಿರು ಬೇಸಗೆಯಲ್ಲೂ ಸಾಕಷ್ಟು ನೀರು ತುಂಬಿ ತುಳುಕಲಿದೆ. ಕೃಷಿ ಭೂಮಿಗೆ ನೀರುಣಿಸಲು ಪರದಾಡುತ್ತಿರುವ ಈ ಭಾಗದ ರೈತರಿಗೆ ಜಲನಿಧಿ ಒಲಿಯಲಿದೆ.

ಈಡೇರದ ಭರವಸೆ
ಈ ಅಣೆಕಟ್ಟಿನಿಂದ ಪೈಪ್‌ಲೈನ್‌ ಮೂಲಕ ಶಾಂತಿಮೊಗರು ಆಸುಪಾಸಿನ ಕುದ್ಮಾರು, ಸವಣೂರು, ಬೆಳಂದೂರು, ಕಾಣಿಯೂರು, ಪುಣcಪ್ಪಾಡಿ, ಪಾಲ್ತಾಡಿ, ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡುವುದು ಇದರ ಉದ್ದೇಶ.

ಆದರೆ ಕಳೆದ ಬೇಸಗೆಯಲ್ಲಿ ಕಾಮಗಾರಿ ಆರಂಭಿಸಿ ಹೋದ ಗುತ್ತಿಗೆದಾರ ಈವರೆಗೂ ಸ್ಥಳಕ್ಕೆ ಬಂದಿಲ್ಲ. ಕಳೆದ ಬಾರಿ ಕಾಮಗಾರಿ ಆರಂಭಿಸಿ ಪಿಲ್ಲರ್‌ಗಾಗಿ ಕಬ್ಬಿಣವನ್ನು ಅಳವಡಿಸಿ ಹೋಗಿದ್ದಾರೆ. ಈ ಬಾರಿ ನದಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿ ಕಬ್ಬಿಣ ಕಾಣುತ್ತಿದೆ. ಕಳೆದ ಬಾರಿ ಕಾಮಗಾರಿ ಆರಂಭಿಸುವಾಗ 2020ರ ಬೇಸಗೆಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದ ಗುತ್ತಿಗೆದಾರ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇಲ್ಲಿವರೆಗೂ ಇತ್ತ ತಲೆ ಹಾಕಿ ನೋಡಿಲ್ಲ.

ಅಧಿಕಾರಿಗಳಿಗೆ ಸೂಚನೆ
ಕುಮಾರಧಾರಾ ನದಿಗೆ ಶಾಂತಿಮೊಗರು ಎಂಬಲ್ಲಿ ಸೇತುವೆ ಆಗಬೇಕು ಎನ್ನುವ ಜನರ ಬಹುದಿನಗಳ ಬೇಡಿಕೆಯಂತೆ 7.5 ಕೋಟಿ ರೂ.ಗಳ ಯೋಜನೆಗೆ ಅನುದಾನ ನೀಡಲಾಗಿದೆ. ಕಾಮಗಾರಿಯನ್ನು ಶೀಘ್ರ ಮುಗಿಸಿಕೊಡುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಎಸ್‌. ಅಂಗಾರ, ಶಾಸಕ, ಸುಳ್ಯ ವಿಧಾನಸಭಾ ಕ್ಷೇತ್ರ.

– ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next