Advertisement

ಹೊಲಾಡು-ಆತ್ರಾಡಿ ಹೆಸಿನಗದ್ದೆ ನಡುವೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆಗ್ರಹ

11:17 PM Jul 01, 2019 | Team Udayavani |

ಕೊಲ್ಲೂರು: ವಂಡ್ಸೆ ಗ್ರಾಮದಲ್ಲಿ ಹರಿಯುವ ಚಕ್ರಾ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ಇದೀಗ ಶಾಸಕರ ಮುತುವರ್ಜಿಯಿಂದ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ಮಂಜೂರಾತಿ ಆಗಿದೆ. ಈಗ ವಂಡ್ಸೆ ಸೇತುವೆ 700 ಮೀ. ಮೇಲ್ಭಾಗದಲ್ಲಿ ನಿರ್ಮಾಣಕ್ಕೆ ಸ್ಥಳ ಗುರುತಿಸಿದ್ದು, ಇದು ಅವೈಜ್ಞಾನಿಕವಾಗಿದ್ದು, ವಂಡ್ಸೆ ಸೇತುವೆಯ ಕೆಳಭಾಗದಲ್ಲಿ ಹೊಲಾಡು-ಆತ್ರಾಡಿ ಹೆಸಿನಗದ್ದೆ ನಡುವೆ ನಿರ್ಮಾಣವಾದರೆ ಬಹೂಪಯೋಗವಾಗುತ್ತದೆ.

Advertisement

ವಂಡ್ಸೆ ಗ್ರಾಮ ಮಾತ್ರವಲ್ಲದೇ ಕರ್ಕುಂಜೆ, ಕಟ್ಬೇಲ್ತೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಅನುಕೂಲವಾಗುತ್ತದೆ. ಹೊಲಾಡು-ಆತ್ರಾಡಿ ಮಧ್ಯೆ ಎಲ್ಲಿಯಾದರೂ ಕಿಂಡಿ ಅಣೆಕಟ್ಟು ಆದರೆ ಜಲಾಶಯದ ನೀರಿನ ಮಟ್ಟವೂ ಸಾಕಷ್ಟು ಇರಲಿದ್ದು, ಹಲವಾರು ನೈಸರ್ಗಿಕವಾದ ತೋಡುಗಳ ಮೂಲಕ ನೀರು ಗ್ರಾಮದ ಒಳಗಡೆ ಹರಿವು ಆಗಿ ಅಂತರ್ಜಲವೂ ವೃದ್ಧಿಸಲಿದೆ. ಹಾಗಾಗಿ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ, ಕಿಂಡಿ ಅಣೆಕಟ್ಟು ನಿರ್ಮಾಣ ಸ್ಥಳ ಬದಲಾವಣೆ ಮಾಡುವುದು ಅತ್ಯಗತ್ಯವಾಗಿದೆ ಎಂದು ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಅಭಿಪ್ರಾಯಪಟ್ಟರು.

ವಂಡ್ಸೆ ಚಕ್ರಹೊಳೆಗೆ ನಿರ್ಮಿಸಲು ಉದ್ದೇಶಿಸಿರುವ ಕಿಂಡಿ ಅಣೆಕಟ್ಟು ಸ್ಥಳ ಬದಲಾವಣೆಯ ಕುರಿತು ವಂಡ್ಸೆ ಗ್ರಾ.ಪಂ. ಸಭಾಂಗಣದಲ್ಲಿ ಜು. 1ರಂದು ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗ ನಿರ್ಧರಿಸಿದ ಸ್ಥಳದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದರೆ ಅದರ ಪ್ರಯೋಜನ ಕಡಿಮೆ. ಮೇಲ್ಭಾಗದಲ್ಲಿ ಹೊಳೆ ಸಮಾನಾಂತರವಾಗಿಲ್ಲ, ಹೆಚ್ಚು ಉದ್ದಕ್ಕೆ ನೀರು ನಿಲ್ಲವುದಿಲ್ಲ. ಹೊಳೆಯ ಇಕ್ಕೆಲಗಳಲ್ಲಿ ಕೃಷಿಕರ ಜಮೀನು ಕಡಿಮೆ, ಬಾವಿಗಳ ಸಂಖ್ಯೆ ಕಡಿಮೆ, ಅರಣ್ಯ ಪ್ರದೇಶ ಜಾಸ್ತಿ ಇದೆ. ಹಾಗಾಗಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಬಹಳಷ್ಟು ಜನರಿಗೆ ಪ್ರಯೋಜನ ಸಿಗಬೇಕಿದ್ದರೆ ಮೂರು ಗ್ರಾ.ಪಂ.ಗಳಿಗೆ ಅನುಕೂಲವಾಗುವಂತೆ ಸೇತುವೆ ಕೆಳಭಾಗದಲ್ಲಿ 1,500 ಮೀ. ಒಳಗಡೆ ಮಾಡುವುದು ಸೂಕ್ತವಾಗಿದೆ ಎಂದರು.

ಸಭೆಯಲ್ಲಿ ನೆರೆದ ಗ್ರಾಮಸ್ಥರು ಸೇತುವೆಯ ಕೆಳಭಾಗದಲ್ಲಿ ಡ್ಯಾಮ್‌ ನಿರ್ಮಾಣ ಮಾಡುವುದರಿಂದ ಬಹೂಪಯೋಗವಿದೆ. ನೆರೆಯ ಬಾಳಿಕೆರೆ ಗ್ರಾಮಕ್ಕೂ ಸುಲಭ ಸಂಪರ್ಕವಾಗುತ್ತದೆ. ಮುಖ್ಯವಾಗಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ದಟ್ಟವಾಗಿದೆ. ಹೆಮ್ಮಾಡಿ ಕಟ್ಟುವಿನ ಉಪ್ಪುನೀರು ತಡೆ ಅಣೆಕಟ್ಟು ವಿನ ಅವೈಜ್ಞಾನಿಕ ನಿರ್ವಹಣೆಯಿಂದ ಉಪ್ಪುನೀರು ನಿರಂ ತರವಾಗಿ ಒಳ ನುಗ್ಗುತ್ತಿದೆ. ಜನವರಿಯಿಂದಲೇ ಹೊಳೆಯ ಸಮೀಪದ ಬಾವಿಗಳಲ್ಲಿ ಉಪ್ಪು ನೀರು ಕಾಣಿಸಿಕೊಳ್ಳುತ್ತದೆ. ವಂಡ್ಸೆ ಗ್ರಾಮದಲ್ಲಿ ಫೆಬ್ರವರಿ ಮಾರ್ಚ್‌ನಿಂದಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಅಂತರ್ಜಲದ ಮಟ್ಟ ಸಂಪೂರ್ಣ ಕುಸಿದಿರುವ ಕಾರಣ ಹೊಲಾಡು-ಹೆಸಿನಗದ್ದೆ ನಡುವೆ ಡ್ಯಾಂ ನಿರ್ಮಾಣ ಆದರೆ ಕುಡಿಯುವ ನೀರು, ಕೃಷಿಗೂ ಅನುಕೂಲವಾಗುತ್ತದೆ. ಸೇತುವೆಯ ಕೆಳಭಾಗದಲ್ಲಿ ಹೊಳೆ ವಿಶಾಲವಾಗಿದ್ದು, ನೀರು ಶೇಖರಣೆ ವಿಪುಲ ಅವಕಾಶಗಳಿವೆ. ಹೊಳೆಯ ಎರಡು ಭಾಗಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ತೋಟಗಾರಿಕೆ ನಿರತ ಕೃಷಿ ಕುಟುಂಬಗಳಿವೆ. ಭತ್ತ ಬೆಳೆಯುವ ಗದ್ದೆಗಳಿವೆ ಎಂದರು.

Advertisement

ಗ್ರಾ.ಪಂ. ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಸದಸ್ಯರಾದ ಉದಯ ಕೆ.ನಾಯ್ಕ, ಗುಂಡು ಪೂಜಾರಿ ಹರವರಿ, ಸಿಂಗಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ವಿ.ಕೆ. ಶಿವರಾಮ ಶೆಟ್ಟಿ, ಶ್ರೀನಿವಾಸ ಪೂಜಾರಿ ಕಲ್ಮಾಡಿ, ತ್ಯಾಂಪಣ್ಣ ಶೆಟ್ಟಿ, ಮಹಮ್ಮದ್‌ ರಫೀಕ್‌, ಮಾತೃಭೂಮಿ ಯುವ ಸಂಘಟನೆ ಅಧ್ಯಕ್ಷ ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಮಾಜಿ ಅಧ್ಯಕ್ಷ ರಮೇಶ ಪೂಜಾರಿ ಬಳಿಹಿತ್ಲು, ಫಾರೂಕ್‌ ಸಾಹೇಬ್‌, ಬಿಜು ಥಾಮಸ್‌ ಅಭಿಪ್ರಾಯ ಮಂಡಿಸಿದರು.

ಈಗ ಪ್ರಸ್ತಾವಿತ ಸ್ಥಳ ಬದಲಾಯಿಸಿ ವಂಡ್ಸೆ ಸೇತುವೆಯ ಕೆಳಭಾಗದಲ್ಲಿ ಹೊಲಾಡು-ಆತ್ರಾಡಿ ಹೆಸಿನಗದ್ದೆ ನಡುವೆ ಕಿಂಡಿ ಅಣೆಕಟ್ಟು ನಿರ್ಮಿಸುವಂತೆ ನಿರ್ಣಯ ಕೈಗೊಳ್ಳಲಾಯಿತು. ಪಂಚಾಯತ್‌ ಅಭಿವೃದ್ದಿ ಅಧಿಕಾರಿ ರೂಪ ಗೋಪಿ ಸ್ವಾಗತಿಸಿ, ವಂದಿಸಿದರು.

ಸೇತುವೆ ಕೆಳಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಬಹೂಪಯೋಗ
ಸೇತುವೆಯ ಕೆಳಭಾಗದಲ್ಲಿ ಡ್ಯಾಮ್‌ ನಿರ್ಮಾಣ ಮಾಡುವುದರಿಂದ ಬಹೂಪಯೋಗವಿದೆ. ನೆರೆಯ ಬಾಳಿಕೆರೆ ಗ್ರಾಮಕ್ಕೂ ಸುಲಭ ಸಂಪರ್ಕವಾಗುತ್ತದೆ. ಮುಖ್ಯವಾಗಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ದಟ್ಟವಾಗಿದೆ. ವಂಡ್ಸೆ ಗ್ರಾಮದ ಪಶ್ಚಿಮ ಗಡಿ ಹೆಸಿನಗದ್ದೆ ಆಗಿರುವುದರಿಂದ ಅಲ್ಲಿಂದ ವಂಡ್ಸೆ ಗ್ರಾಮದ ಪೂರ್ವ ಗಡಿ ತನಕ ಇರುವ ಎಲ್ಲರಿಗೂ ಅನುಕೂಲವಾಗುತ್ತದೆ. ವಂಡ್ಸೆ ಗ್ರಾಮದಲ್ಲಿ ಫೆಬ್ರವರಿ ಮಾರ್ಚ್‌ನಿಂದಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು ಅಂತರ್ಜಲದ ಮಟ್ಟ ಸಂಪೂರ್ಣ ಕುಸಿದಿರುವ ಕಾರಣ ಹೊಲಾಡು-ಹೆಸಿನಗದ್ದೆ ನಡುವೆ ಡ್ಯಾಂ ನಿರ್ಮಾಣ ಆದರೆ ಕುಡಿಯುವ ನೀರು, ಕೃಷಿಗೂ ಅನುಕೂಲವಾಗುತ್ತದೆ. ಸೇತುವೆಯ ಕೆಳಭಾಗದಲ್ಲಿ ಹೊಳೆ ವಿಶಾಲವಾಗಿದ್ದು, ಜಲಾಶಯದ ನೀರು ಶೇಖರಣ ಮಟ್ಟವೂ ಗರಿಷ್ಠವಾಗಲಿದೆ. ಹೊಳೆಯ ಎರಡು ಭಾಗಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ತೋಟಗಾರಿಕೆ, ಭತ್ತ ಬೆಳೆಯುವ ಗದ್ದೆಗಳಿವೆ, ಹಲವಾರು ನೈಸರ್ಗಿಕ ತೋಡುಗಳು ಹೊಳೆಗೆ ಸಂಪರ್ಕ ಪಡೆಯುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಏರುವುದರಿಂದ ಹಳ್ಳಗಳ ಮೂಲಕ ನೀರು ಗ್ರಾಮದ ಒಳಗಡೆ ಹರಿದು ಅಂತರ್ಜಲ ವೃದ್ಧಿಯಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next