ಕಾರವಾರ: ಪ್ರತಿ ತಾಲೂಕಿನಲ್ಲಿ ಕನ್ನಡ ಭವನಗಳ ಸ್ಥಾಪನೆ ಹಾಗೂ ಯಲ್ಲಾಪುರ ಕನ್ನಡ ಭವನವನ್ನು ಪುನರ್ನಿರ್ಮಾಣ ಮಾಡುವೆ. ನಿಯತವಾಗಿ ಸಮ್ಮೇಳನಗಳನ್ನು ನಡೆಸುವುದು, ಕನ್ನಡ ಅಧ್ಯಾಪಕರ ಸಮಾವೇಶ ಹಾಗೂ ಮಹಿಳಾ ಲೇಖಕಿಯರ ಸಮಾವೇಶ ಮಾಡುವುದಾಗಿ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸಿರುವ ವೇಣುಗೋಪಾಲ ಮದ್ಗುಣಿ ಹೇಳಿದರು.
ಕಾರವಾರದ ಪತ್ರಿಕಾಭವನದಲ್ಲಿ ಮಂಗಳವಾರ ಕಸಾಪ ಚುನಾವಣೆ ನಿಮಿತ್ತ ತಮ್ಮ ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಮಾಡಲು ಪ್ರಯತ್ನಿಸುವೆ. ಜಿಲ್ಲಾ ಕಸಾಪಕ್ಕೆ ಅಧ್ಯಕ್ಷನಾಗಿ ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯರು ಆಯ್ಕೆ ಮಾಡಿದಲ್ಲಿ ಭ್ರಷ್ಟಾಚಾರ ರಹಿತ ಆಡಳಿತದ ಜೊತೆಗೆ ಜಾತಿ ಮುಕ್ತ ಪರಿಷತ್ ಕಟ್ಟುವೆ. ಪರಿಷತ್‌ನ್ನು ಜಾತ್ಯಾತೀತ, ಪಕ್ಷಾತೀತ, ಧರ್ಮಾತೀತವಾಗಿ ಕಟ್ಟುವೆ. ಬರೆಯುವ ಎಲ್ಲರಿಗೂ ಆದ್ಯತೆ ಸಿಗಲಿದೆ. ಹೊಸದಾಗಿ ಬರೆಯುವ ಲೇಖಕರ ಚೊಚ್ಚಿಲ ಕೃತಿಗೆ ಪ್ರಶಸ್ತಿ, ಆರ್ಥಿಕ ಸಹಾಯ ಹಾಗೂ ಸನ್ಮಾನ ಮಾಡುವ ಉದ್ದೇಶವಿದೆ. ಅಲ್ಲದೇ ಹಿರಿಯ ಸಾಹಿತಿಗಳ ಸಲಹೆ ಪಡೆದು ಮುನ್ನಡೆಯುವೆ. ಅಲ್ಲದೇ ಹಿರಿಯ ಸಾಹಿತಿಗಳ ಸಮಾಲೋಚನಾ ದಿನ ಮಾಡುವೆ ಎಂದರು.
ಜೊಯಿಡಾದಲ್ಲಿ ಒಂದು ಜಿಲ್ಲಾ ಸಮ್ಮೇಳನ ಮಾಡುವೆ ಎಂದ ಅವರು, 5 ವರ್ಷದ ಅವಧಿಯಲ್ಲಿ ಯಾವುದೇ ತಾಲೂಕು ಸಮ್ಮೇಳನ ತಪ್ಪದಂತೆ ಮಾಡುವೆ. ಮಕ್ಕಳ ಸಮ್ಮೇಳನ, ಮಹಿಳಾ ಸಾಹಿತ್ಯ ಸಮ್ಮೇಳನ ಪ್ರತ್ಯೇಕವಾಗಿ ಮಾಡುವೆ ಎಂದು ಮದ್ಗುಣಿ ನುಡಿದರು. ಪರಿಷತ್ತನಿಂದ ದತ್ತಿ ಉಪನ್ಯಾಸಗಳನ್ನು, ಕಮ್ಮಟಗಳನ್ನು ನಡೆಸುವೆ. ಕನ್ನಡ ನಾಡು ನುಡಿ, ಸಾಹಿತ್ಯ, ಭಾಷೆ, ನೆಲ, ಜಲ ಪರ ಹೋರಾಟಗಾರರು, ಕನ್ನಡ ಪರ ಚಿಂತಕರು, ಸಾಧಕರು, ಹಿರಿಯ ಪತ್ರಕರ್ತರನ್ನು, ಪತ್ರಿಕೆ ಹಂಚುವ ಹುಡುಗರನ್ನು ಗುರುತಿಸಿ ಪುರಸ್ಕರಿಸಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸುವ ಹಾಗೂ ಸಮ್ಮಳನಗಳನ್ನು ಯಶಸ್ವಿಯಾಗಿ ಸಂಘಟನೆ ಮಾಡುವ ಸಂಘಟನಾ ಶಕ್ತಿ ಇರುವವರನ್ನು ಮತದಾರರು ಗುರುತಿಸಿ ಆಯ್ಕೆ ಮಾಡಬೇಕು ಎಂದು ಕಸಾಪ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ ಮನವಿ ಮಾಡಿದರು.
ಸಂತಾಪ: ಸೋಮವಾರ ನಿಧನರಾದ ಕನ್ನಡದ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಅವರಿಗೆ ಸಂತಾಪ ಸೂಚಿಸಲಾಯಿತು.