ಚಿತ್ರದುರ್ಗ: ಜಿಲ್ಲೆಯ ದಶಕಗಳ ಕನಸಾದ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್ ಸೋಮವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾಗುವ ಸ್ಥಳ ಪರಿಶೀಲನೆ ನಡೆಸಿದರು.
ಕಾಲೇಜು ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಇಲ್ಲಿರುವ ಹಳೆಯ ಹಾಗೂ ಅಗತ್ಯವಾಗಿ ತೆರವು ಮಾಡಬೇಕಾದ ಕಟ್ಟಡಗಳ ಪಟ್ಟಿ ಮಾಡಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಸಂಬಂಧಿಸಿದ ಕಟ್ಟಡಗಳಾಗಿರುವುದರಿಂದ ಇಲ್ಲಿ ನಿತ್ಯವೂ ನೂರಾರು ರೋಗಿಗಳು ಬಂದು ಹೋಗುತ್ತಾರೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯಬೇಕು. ಸಾರ್ವಜನಿಕರು, ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಸೂಚನೆಯನ್ನೂ ಅಧಿಕಾರಿಗಳಿಗೆ ನೀಡಿದ್ದಾರೆ.
ಜಿಲ್ಲಾಸ್ಪತ್ರೆ ಆವರಣದಲ್ಲಿ ಅಂದಾಜು 20 ಎಕರೆ ವಿಸ್ತೀರ್ಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದ್ದು, ನಗರದ ಜೋಗಿಮಟ್ಟಿ ರಸ್ತೆಯ ಭಾಗದಿಂದ ಕಾಲೇಜಿಗೆ ಪ್ರವೇಶ ಕಲ್ಪಿಸುವ ಬಗ್ಗೆ ನೀಲನಕ್ಷೆ ತಯಾರಾಗಿದೆ. ನವೀನ್‌ರಾಜ್‌ಸಿಂಗ್ ಅವರು ಜಿಲ್ಲಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿದರು. ರಕ್ತನಿಧಿ ಕೇಂದ್ರ, ಎಎನ್‌ಟಿಸಿ, ಸರ್ವೇಕ್ಷಣ ಘಟಕ, ಲ್ಯಾಬ್, ಜಿಲ್ಲಾ ತರಬೇತಿ ಸಂಸ್ಥೆ, ಎನ್‌ಎಚ್‌ಎಂ ಕಚೇರಿ, ಕಾರ್ಯಾಗಾರ, ವೈದ್ಯರು, ಶುಶ್ರೂಷಕರ ಕ್ವಾಟ್ರಸ್‌ಗಳು, ಡಿಎಚ್‌ಒ ಕಚೇರಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳನ್ನು ತೆರವು ಮಾಡಬೇಕಿದೆ. ಎರಡನೇ ಹಂತದಲ್ಲಿ ಟ್ರಾಮಾ ಕೇರ್, ತುರ್ತು ಚಿಕಿತ್ಸಾ ಘಟಕಗಳನ್ನು ತೆರವು ಮಾಡಲಾಗುವುದು. ಆಸ್ಪತ್ರೆ ಆವರಣದಲ್ಲಿ ಆರ್‌ಡಿಎಲ್ ಲ್ಯಾಬ್ ಬಹಳ ಮುಖ್ಯವಾಗಿದ್ದು, ಇದರ ತೆರವಿಗೆ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ನಿತ್ಯ ಇಲ್ಲಿಗೆ ಬರುವ ರೋಗಿಗಳಿಗೆ ತೊಂದರೆಯಾಗದಂತೆ ಎಂಆರ್‌ಐ ಮತ್ತು ಡಯಾಗ್ನಿಸ್ಟಿಕ್ ಘಟಕ ಹೊಂದಿರುವ ಆರ್‌ಡಿಎಲ್ ಲ್ಯಾಬ್ ಅನ್ನು ಮೂರನೇ ಹಂತದಲ್ಲಿ ತೆರವು ಮಾಡಲು ತಿಳಿಸಿದ್ದಾರೆ.
ಈ ವೇಳೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ಡಿಎಚ್‌ಒ ಡಾ| ಆರ್. ರಂಗನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು, ಎಂಜಿನಿಯರ್‌ಗಳು, ವೈದ್ಯರು ಇದ್ದರು.