Advertisement

ನಿವೃತ್ತ ಸೈನಿಕರಿಗೆ ನೀಡಲಾದ ಜಾಗದಲ್ಲಿ ಬೇಲಿ ನಿರ್ಮಾಣ

11:59 PM Apr 10, 2022 | Team Udayavani |

ಆಲಂಕಾರು: ಕಂದಾಯ ಇಲಾಖೆಯಿಂದ ಆಲಂಕಾರು ಗೇರು ತೋಪಿನಲ್ಲಿ ಕಾದಿರಿಸಲಾಗಿದ್ದ ಭೂಮಿಯನ್ನು 12 ಮಂದಿ ನಿವೃತ್ತ ಸೈನಿಕರಿಗೆ ನೀಡಲಾಗಿದ್ದು, ಸರ್ವೇ ಇಲಾಖೆಯಿಂದ ಗಡಿ ಗುರುತು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಸೈನಿಕರು ಗಡಿ ಗುರುತು ಮಾಡಲಾದ ಜಾಗದಲ್ಲಿ ಬೇಲಿ ನಿರ್ಮಾಣ ಮಾಡಿದ್ದು, ಇದೀಗ ಅರಣ್ಯ ಇಲಾಖೆಯವರು ಈ ಜಾಗ ತಮಗೆ ಸೇರಿದ್ದು ಎಂದಿದ್ದು, ಬೇಲಿ ಹಾಕುವ ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬಂದಿ ಕಾವಲು ಹೂಡಿದ್ದಾರೆ.

Advertisement

ಇತ್ತೀಚೆಗೆ ಕಂದಾಯ ಇಲಾಖೆಯ ಐತ್ತೂರು ಗ್ರಾಮ ವಾಸ್ತವ್ಯದಲ್ಲಿ 12 ಮಂದಿ ಮಾಜಿ ಸೈನಿಕ ಫ‌ಲಾನುಭವಿಗಳಿಗೆ ಸಚಿವ ಎಸ್‌. ಅಂಗಾರ ಅವರು ಹಕ್ಕು ಪತ್ರ ಹಸ್ತಾಂತರ ಮಾಡಿದ್ದರು. ಬಳಿಕ ಈ ಜಾಗದ ಗಡಿ ಗುರುತು ಕೂಡ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕರು ತಮಗೆ ನೀಡಲಾದ ಜಾಗಕ್ಕೆ ಬೇಲಿ ಹಾಕುವ ಕಾಮಗಾರಿ ಪ್ರಾರಂಭಿಸಿದ್ದರು. ಆದರೆ ಈ ಜಾಗವು ಮೀಸಲು ಅರಣ್ಯ ಪ್ರದೇಶವಾಗಿದ್ದು ಇದನ್ನು ಕೆ.ಸಿ.ಡಿ.ಸಿ.ಯವರಿಗೆ ಗೇರು ಅಭಿವೃದ್ಧಿಗೆ ನೀಡಲಾಗಿದೆ. ಇಲ್ಲಿ ಕಂದಾಯ ಇಲಾಖೆಯು ಅರಣ್ಯ ಇಲಾಖೆಯ ಗಮನಕ್ಕೆ ತಾರದೆ ಮಾಜಿ ಸೈನಿಕರಿಗೆ ನಿವೇಶನ ಕಾದಿರಿಸಿದೆ ಎನ್ನುವ ವಾದವಿದೆ. ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ್‌, ಅಜಿತ್‌, ಜಯಕುಮಾರ್‌, ಕೆ.ಸಿ.ಡಿ.ಸಿ. ಅಧೀಕ್ಷಕ ರವಿ ಪ್ರಸಾದ್‌, ಸಿಬಂದಿ ಸುರೇಶ್‌ ಕುಮಾರ್‌, ಶೇಖರ ಪೂಜಾರಿ, ಅರಣ್ಯ ಪಾಲಕರಾದ ಸುಬ್ರಹ್ಮಣ್ಯ, ಮಹೇಶ್‌, ಬಾಲಚಂದ್ರ ಮಾಜಿ ಸೈನಿಕರಾದ ಹರೀಶ್‌ ಯು., ವಿಶ್ವನಾಥ ಪಿ., ರವಿಚಂದ್ರ, ಶಿವಪ್ಪ ಗೌಡ, ಸುರೇಂದ್ರ ಕುಮಾರ್‌, ಶೇಷಪ್ಪ ಗೌಡ, ಚೆನ್ನಪ್ಪ ಗೌಡ ಉಪಸ್ಥಿತರಿದ್ದರು.

ಕಂದಾಯ ಇಲಾಖೆ ನೀಡಿದರೂ ಅರಣ್ಯ ಇಲಾಖೆಯಿಂದ ಅಡ್ಡಿ- ಆರೋಪ ಈ ಹಿಂದೆಯೇ ನಿವೃತ್ತ ಸೈನಿಕರಿಗೆ ಇಲ್ಲಿ ಸುಮಾರು 12 ಎಕ್ರೆ ಭೂಮಿ ಮೀಸಲು ಇರಿಸಲಾಗಿತ್ತು. ಸೈನಿಕರ ನಿರಂತರ ಹೋರಾಟದ ಬಳಿಕ 12 ಜನ ನಿವೃತ್ತ ಸೈನಿಕರಿಗೆ 50 ಸೆಂಟ್ಸ್‌ನಂತೆ ವಿಂಗಡಿಸಿ ಕಂದಾಯ ಇಲಾಖೆ ಹಕ್ಕು ಪತ್ರ ನೀಡಿ, ಪಹಣಿ ಪತ್ರ ಕೂಡ ದಾಖಲು ಮಾಡಲಾಗಿದೆ. ಇದೀಗ ಅರಣ್ಯ ಇಲಾಖೆಯವರ ಆಕ್ಷೇಪದಿಂದ ನಾವು ಹಕ್ಕುಪತ್ರ ಇದ್ದರೂ ಜಾಗ ಕೈಗೆ ಸಿಗದೆ ಕಂಗಲಾಗಿದ್ದೇವೆ ಎಂದು ನಿವೃತ್ತ ಸೈನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದಂತೆ 12 ನಿವೃತ್ತ ಸೈನಿಕರಿಗೆ ತಲಾ 50 ಸೆಂಟ್ಸ್‌ನಂತೆ ಜಾಗ ಮಂಜೂರು ಮಾಡಲಾಗಿದೆ. ಇಲಾಖೆಯಿಂದಲೇ ಜಾಗ ಮಂಜೂರು ಮಾಡಿ ಹಕ್ಕು ಪತ್ರ ನೀಡಿ, ಬಳಿಕ ಸರಕಾರಿ ಸರ್ವೇಯರ್‌ನಿಂದ ಗಡಿ ಗುರುತು ಮಾಡಿ ಫ‌ಲಾನುಭವಿಗಳಿಗೆ ನೀಡಿದ ಬಳಿಕ 12 ನಿವೃತ್ತ ಸೈನಿಕರು ಜಾಗಕ್ಕೆ ಬೇಲಿ ನಿರ್ಮಾಣ ಮಾಡಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಮಧ್ಯ ಪ್ರವೇಶಿಸಿ ಜಾಗ ಅರಣ್ಯ ಇಲಾಖೆಯದ್ದು ಎಂದು ಹೇಳುತ್ತಿದ್ದಾರೆ. ಜಾಗ ಮಂಜೂರು ಮಾಡುವ ಮೊದಲೇ ಕಂದಾಯ ಹಾಗೂ ಅರಣ್ಯ ಇಲಾಖೆ ಒಟ್ಟಿಗೆ ಸೇರಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಇದೀಗ ಕಂದಾಯ ಇಲಾಖೆ ಸರಕಾರಿ ಜಾಗವನ್ನು ನಿವೃತ್ತ ಸೈನಿಕರಿಗೆ ಮೀಸಲು ಇಡಲಾಗಿದೆ ಎಂದರೆ, ಅರಣ್ಯ ಇಲಾಖೆ ಜಾಗ ನಮ್ಮದು ಎಂದು ಹೇಳುತ್ತಿದೆ. ಒಟ್ಟು ಇಲಾಖೆಗಳ ನಡುವಿನ ಗೊಂದಲಕ್ಕೆ ಫ‌ಲಾನುಭವಿಗಳು ಪರದಾಡುವಂತಾಗಿದೆ.

ಮೀಸಲು ಅರಣ್ಯ
ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ ಅವರು ಪ್ರತಿಕ್ರಿಯೆ ನೀಡಿ, ಆಲಂಕಾರಿನಲ್ಲಿ ಈಗಾಗಲೇ ಮಾಜಿ ಸೈನಿಕರಿಗೆ ನೀಡಲಾದ ಜಾಗವು ಮೀಸಲು ಅರಣ್ಯಕ್ಕೆ ಸೇರಿದ್ದು ಬಳಿಕ ಕೆ.ಸಿ.ಡಿ.ಸಿ.ಯವರಿಗೆ ಲೀಸಿಗೆ ನೀಡಲಾಗಿದೆ. ಈ ಜಾಗವನ್ನು ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಬೇಕು. ಆಗ ಮಾತ್ರ ಜಾಗ ಯಾರಿಗೆ ಸೇರಿದ್ದು ಎಂದು ಗೊತ್ತಾಗುತ್ತದೆ ಎಂದಿದ್ದಾರೆ.

Advertisement

ನಿವೃತ್ತ ಸೈನಿಕರಿಗೆ ಮೀಸಲಿರಿಸಲಾಗಿದೆ
ಕಡಬ ತಹಶೀಲ್ದಾರ್‌ ಅನಂತಶಂಕರ್‌ ಪ್ರತಿಕ್ರಿಯೆ ನೀಡಿ, ಆ ಜಾಗವನ್ನು ನಿವೃತ್ತ ಸೈನಿಕರಿಗೆ ಮೀಸಲಿಟ್ಟಿದ್ದು ಅದು ಅರಣ್ಯ ಇಲಾಖೆಯ ಜಾಗ ಅಲ್ಲ. ಡಿಸಿ ಅವರ ಆದೇಶದಂತೆ ಮಂಜೂರು ಗೊಳಿಸಲಾಗಿದೆ. ಈ ಬಗ್ಗೆ ನನಗೆ ಮಾಹಿತಿ ಬಂದಿಲ್ಲ, ಮಾಹಿತಿ ಬಂದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next