ಮರವಂತೆ: ದೇಶಾದ್ಯಂತ ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ನಿಷೇಧ ಚರ್ಚೆಯಲ್ಲಿದ್ದರೆ ಮರವಂತೆ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಇದರ ಪುನರ್ ಬಳಕೆಯ ಪ್ರಯೋಗ ನಡೆಯುತ್ತಿದೆ. ಇಲ್ಲಿನ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಆವರಣಗೋಡೆ ನಿರ್ಮಾಣವಾಗಿದೆ. ಈ ಹಿಂದೆ ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ಮೊದಲ ಪ್ರಯೋಗ ಯಶಸ್ವಿಯಾಗಿತ್ತು.
ಮರವಂತೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹಗೊಂಡಿರುವ ನಿರುಪಯುಕ್ತ ನೀರಿನ ಹಾಗೂ ವಿವಿಧ ತಂಪು ಪಾನೀಯ ಬಾಟಲಿ ಮೂಲಕ ತಡೆಗೋಡೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದೆ.
ಮರವಂತೆ ತ್ಯಾಜ್ಯ ವಿಲೇವಾರಿ ಘಟಕದ ಸದಸ್ಯರು ಸುಮಾರು 750ಕ್ಕೂ ಹೆಚ್ಚು ನಿರುಪಯುಕ್ತ ಬಾಟಲಿಗಳನ್ನು ಸಂಗ್ರಹ ಮಾಡಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ.
ಸುಮಾರು 10 ಮೀ. ಉದ್ದ ಹಾಗೂ 4 ಮೀ. ಎತ್ತರದ ಗೋಡೆ ನಿರ್ಮಿಸಲಾಗಿದೆ. ಇದಕ್ಕೆ 4 ಚೀಲ ಸಿಮೆಂಟ್ 60 ಕೆಂಪು ಕಲ್ಲು ಅರ್ಧ ಯುನಿಟ್ ಮರಳು ಬಳಸಿದ್ದು 5 ಸಾವಿರ ರೂ. ಇತರ ಖರ್ಚು ಆಗಿದೆ ಎಂದು ಹೇಳಲಾಗಿದೆ. ಗೋಡೆಯಿಂದ ಬಾಟಲಿಗಳನ್ನು ಬೇರ್ಪಡಿಸಿ ಮರು ಬಳಕೆಗೂ ಅವಕಾಶವಿದೆ. ಕಸದಿಂದ ರಸ ಎನ್ನುವ ನೀತಿಯನ್ನು ಅಚ್ಚುಕಟ್ಟಾಗಿ ಅಳವಡಿಸಿಕೊಂಡಿದ್ದು ಪ್ರಯೋಗ ಯಶಸ್ಸು ಗಳಿಸಿದೆ.
ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ, ಸದಸ್ಯರು ಹಾಗೂ ಸೌಂದರ್ಯಾ, ಮನೋಜ್, ಶ್ರೀನಾಥ, ಹರ್ಷಿತ್, ರೇವತಿ ಆರ್. ಶ್ರೇಯಾ ವಿ., ಕಾವ್ಯಾ, ಜೀವನ ಸಿ.ಎನ್., ಮೊದಲಾದವರು ನಿರ್ಮಾಣ ಕಾಮಗಾರಿಗೆ ಸಹಕರಿಸಿದರು.