ರಾಯಚೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರತ ಮಾಲಾ ಪರಿಯೋಜನೆಯಡಿ ಸೂರತ್-ಚೆನ್ನೈ ಎಕ್ ನಾಮಿಕ್ ಕಾರಿಡಾರ್‌ನ ಭಾಗವಾಗಿ ರಾಜ್ಯದಲ್ಲಿ ಹಾದು ಹೋಗುತ್ತಿರುವ ಅಕ್ಕಲಕೊಟದಿಂದ-ಕರ್ನಾಟಕ, ತೆಲಂಗಾಣ ಗಡಿಯವರೆಗಿನ ರಸ್ತೆ ನಿರ್ಮಾಣದ ಕುರಿತು ತಾಲೂಕಿನ ಕಾಡ್ಲೂರಿನಲ್ಲಿ ಪರಿಸರ ಸಾರ್ವಜನಿಕ ವಿಚಾರಣಾ ಸಭೆ ಶುಕ್ರವಾರ ನಡೆಯಿತು.
ಎಡಿಸಿ ಕೆ.ಆರ್. ದುರುಗೇಶ್ ಮಾತನಾಡಿ, ಈ ಯೋಜನೆಯು ಜಿಲ್ಲೆಯ ದೇವದುರ್ಗ ತಾಲೂಕಿನ ಬಸವನಪುರ ಗ್ರಾಮದಿಂದ ಸಿಂಗನೋಡಿ ಗ್ರಾಮದವರೆಗೂ ಇದ್ದು, ಅದರಲ್ಲಿ ಕಾಡ್ಲೂರು ಗ್ರಾಮವು ಸೇರ್ಪಡೆಯಾಗಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 17 ಗ್ರಾಮಗಳು ಒಳಪಟ್ಟಿರುವುದರಿಂದ ಅರ್ಹ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುತ್ತದೆ. ಅಲ್ಲದೆ ಸಭೆಯಲ್ಲಿ ಭಾಗವಹಿಸಿದವರ ಅಭಿಪ್ರಾಯ ದಾಖಲು ಮಾಡಿಕೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಈ ಯೋಜನೆಯ ಯಾವುದೇ ರಾಷ್ಟ್ರೀಯ ಉದ್ಯಾನವನ ಅಥವಾ ವನ್ಯಜೀವಿ ಅಭಯಾರಣ್ಯ, ಸಂರಕ್ಷಣಾ ಮೀಸಲು ವಲಯಗಳ ಮೂಲಕ ಹಾದು ಹೋಗುವುದಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಯಾವುದೇ ಸಂರಕ್ಷಿತ ಪ್ರದೇಶದ ಗಡಿಯೊಳಗೆ ಬರುವುದಿಲ್ಲ ಎಂದರು.
ಈ ಯೋಜನೆಯಲ್ಲಿ ನಿರ್ಮಾಣ ಸ್ಥಳಗಳಲ್ಲಿ ಸರಿಯಾದ ಎಚ್ಚರಿಕೆ ಚಿಹ್ನೆಗಳು ಹಾಗೂ ಅಗತ್ಯವಿರುವ ಕಡೆಗಳಲ್ಲಿ ತಿರುವು ರಸ್ತೆಗಳನ್ನು ಒದಗಿಸಲು ಯೋಜನೆಯಲ್ಲಿ ಕ್ರಮ ಕೈಗೊಳ್ಳುವ ಮೂಲಕ ಅಪಘಾತ ಮತ್ತು ಆರೋಗ್ಯ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು ಎಂದು ಗ್ರಾಮಸ್ಥರು ತಿಳಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಸುಗಂಧ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕುರಿತು ಪರಿಸರಕ್ಕೆ ಸಂಬಂಧಿಸಿ ಸಾರ್ವಜನಿಕರು ತಮ್ಮ ಅಹವಾಲು ಮಂಡಿಸುವಂತೆ ಕೋರಿದರು. ಇದೇ ವೇಳೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಹಿರಿಯ ಅಧಿಕಾರಿ ಕೆ.ಎಸ್. ರಾಜು ಸೇರಿ ಇತರರಿದ್ದರು