Advertisement

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ; ಜ. 15ರಿಂದ ದೇಣಿಗೆ ಸಂಗ್ರಹ

01:21 AM Nov 18, 2020 | mahesh |

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮಕರ ಸಂಕ್ರಾಂತಿಯ ದಿನವಾದ ಜ.15ರಿಂದ 45 ದಿನಗಳ ಕಾಲ ದೇಶವ್ಯಾಪಿಯಾಗಿ ಧನ ಸಂಗ್ರಹ ಕಾರ್ಯ ನಡೆಯಲಿದೆ ಎಂದು ಪೇಜಾವರ ಮಠಾಧೀಶ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಎಲ್ಲರ ಭಾಗೀಧಾರಿಕೆ ಇರಬೇಕೆಂಬ ಉದ್ದೇಶದಿಂದ ಧನ ಸಂಗ್ರಹ ಕಾರ್ಯವನ್ನು ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಭಕ್ತರೂ ವೈಯಕ್ತಿಕವಾಗಿ ಕನಿಷ್ಠ 10 ರೂ., ಕುಟುಂಬದ ಪರವಾಗಿ 100 ರೂ. ದೇಣಿಗೆ ನೀಡಬೇಕು. ಈ ಧನ ಸಂಗ್ರಹ ಕಾರ್ಯದ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷತ್‌, ಆರೆಸ್ಸೆಸ್‌ ಕಾರ್ಯಕರ್ತರಿಗೆ ನೀಡಲಾಗುತ್ತಿದೆ ಎಂದರು.

ಸ್ವಾಮೀಜಿಯವರು ಇತ್ತೀಚೆಗೆ ಅಯೋಧ್ಯೆ, ಪ್ರಯಾಗ, ಕಾಶಿ ಸಹಿತ ಪುಣ್ಯಕ್ಷೇತ್ರಗಳ ದರ್ಶನ ನಡೆಸಿ, ವಿಎಚ್‌ಪಿ ಮಾರ್ಗದರ್ಶಕ ಮಂಡಳಿ ಸಮಾವೇಶ, ರಾಮಜನ್ಮಭೂಮಿ ಟ್ರಸ್ಟ್‌ ಸಭೆಯಲ್ಲಿ ಭಾಗವಹಿಸಿದ್ದು ಪುಸ್ತಕ ಬಿಡುಗಡೆ ಕಾರ್ಯ ಕ್ರಮದ ಪ್ರಯುಕ್ತ ಮಂಗಳೂರಿಗೆ ಆಗಮಿಸಿದ್ದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರ ಸಂಪೂರ್ಣವಾಗಿ ಶಿಲಾಮಯವಾಗಿ ನಿರ್ಮಾಣವಾಗಲಿರುವುದರಿಂದ ಅಲ್ಲಿ ಭೂಮಿಯ ಧಾರಣಾ ಸಾಮರ್ಥ್ಯ ಪರೀಕ್ಷೆ ನಡೆಯುತ್ತಿದೆ. ಸುಮಾರು 200 ಅಡಿ ಆಳದವರೆಗೆ ಪರೀಕ್ಷೆ ನಡೆಯಲಿದೆ. ಅಲ್ಲಿರುವುದು ಗಟ್ಟಿನೆಲವಲ್ಲ, ಬದಲಿಗೆ ಧೂಳು ಮರಳು ತುಂಬಿದ ನೆಲ ಆಗಿರುವುದರಿಂದ ಸೂಕ್ಷ್ಮ ಪರೀಕ್ಷೆಗಳು ವೈಜ್ಞಾನಿಕವಾಗಿ ನಡೆಯುತ್ತಿವೆ. ಅದರ ಬಳಿಕವೇ ಗಟ್ಟಿಯಾದ ತಳಪಾಯ ಹಾಕಿ ಶಿಲಾಮಯ ದೇಗುಲದ ನಿರ್ಮಾಣ ಆಗಲಿದೆ. ಪ್ರಸ್ತುತ ನೆಲ ಸಮತಟ್ಟು ಮತ್ತಿತರ ಕಾರ್ಯಗಳು ನಡೆಯುತ್ತಿವೆ. ಪರೀಕ್ಷೆ, ಪರಿಶೀಲನೆಯ ಬಳಿಕವೇ ಸದೃಢವಾದ ಮತ್ತು ಭವ್ಯವಾದ ರಾಮ ಮಂದಿರ ನಿರ್ಮಾಣವಾಗಲಿದೆ. ಮಂದಿರ ನಿರ್ಮಾಣಕ್ಕೆ ಸುಮಾರು ಮೂರೂವರೆ ವರ್ಷ ಬೇಕಾಗಬಹುದು ಎಂದವರು ವಿವರಿಸಿದರು.

ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಎಲ್‌ ಆ್ಯಂಡ್‌ ಟಿ ಕಂಪೆನಿಗೆ ವಹಿಸಲಾಗಿದೆ. ಟಾಟಾ ಕನ್ಸಲ್ಟೆನ್ಸಿ ಕಂಪೆನಿಯು ದೇಗುಲ ನಿರ್ಮಾಣದ ಪ್ರತಿ ಹಂತದಲ್ಲೂ ಪರಿಶೀಲನೆ ನಡೆಸಲಿದೆ. ಪ್ರತಿ ಹಂತದ ಪರಿಶೀಲನ ವರದಿಯನ್ನು ಈ ಕಂಪೆನಿಯು ರಾಮಜನ್ಮಭೂಮಿ ಟ್ರಸ್ಟ್‌ಗೆ ನೀಡಲಿದೆ. ಈ ಮೂಲಕ ಸುಭದ್ರವಾದ ದೇವಾಲಯ ನಿರ್ಮಾಣಕ್ಕೆ ಸರ್ವ ತಯಾರಿ ನಡೆಸಲಾಗುತ್ತಿದೆ ಎಂದು ಶ್ರೀಗಳು ವಿವರಿಸಿದರು.

Advertisement

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭಾರತೀಯರ ಶತಮಾನದ ಕನಸು ಆಗಿದ್ದು ನನಸಾಗುವ ಕಾಲ ಸನ್ನಿಹಿತವಾಗಿದೆ. ರಾಮ ಮಂದಿರ ನಿರ್ಮಾಣ ದೊಂದಿಗೆ ಸಂಸ್ಕೃತಿಯ ಪುನರುತ್ಥಾನವೂ ಆಗಬೇಕಿದೆ.ಬದುಕೆಲ್ಲವೂ ಭಗವಂತನ ಆರಾಧನೆಯಾಗಬೇಕು ಎಂದು ಸ್ವಾಮೀಜಿಯವರು ವಿವರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಉಪಸ್ಥಿತರಿದ್ದರು.

ವಾಸ್ತು ತಜ್ಞರ ತಂಡದಲ್ಲಿ ಕರಾವಳಿಯ ತಜ್ಞರು
ಶ್ರೀರಾಮ ಮಂದಿರ ಭಾರತೀಯ ವಾಸ್ತು ಶಾಸ್ತ್ರ ಪ್ರಕಾರ ನಿರ್ಮಾಣವಾಗಲಿದೆ. ವಾಸ್ತುಶಾಸ್ತ್ರ ತಜ್ಞರ ತಂಡದ ರಚನೆಯಾಗಿದ್ದು ಕುಡುಪು ಕೃಷ್ಣರಾಜ ತಂತ್ರಿಗಳು, ಗುಂಡಿಬೈಲಿನ ಸುಬ್ರಹ್ಮಣ್ಯ ಭಟ್‌, ಕೇರಳದ ಒಬ್ಬರು, ಉತ್ತರ ಭಾರತದ ಇಬ್ಬರ ಸಹಿತ ಐದು ಮಂದಿ ಇದ್ದು ಮಾರ್ಗದರ್ಶನ ನೀಡಲಿದ್ದಾರೆ. ನೂತನ ಮಂದಿರದಲ್ಲಿ ರಾಮನವಮಿಯಂದು ಶ್ರೀರಾಮನ ವಿಗ್ರಹವನ್ನು ಸೂರ್ಯನ ಕಿರಣಗಳು ಸ್ಪರ್ಶಿಸುವಂತೆ ವ್ಯವಸ್ಥೆ ಮಾಡುವುದು ಹಾಗೂ ಭಕ್ತರು ದೇವರಿಗೆ ನಮಸ್ಕರಿಸುವಾಗ ಸ್ವತಃ ದೇವರ ಪಾದವನ್ನು ಸ್ಪರ್ಶಿಸುವ ಅನುಭೂತಿ ಸಿಗುವಂತಾಗಲು ತ್ರೀಡಿ ತಂತ್ರಜ್ಞಾನ ಅಳವಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದು, ಈ ವ್ಯವಸ್ಥೆಗಳು ಕಾರ್ಯಗತವಾಗಲಿವೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next