ಶಿರಸಿ: ಟಿಎಸ್‌ಎಸ್ ಸಹಕಾರಿ ಸಂಸ್ಥೆ ಎಪಿಎಂಸಿ ಪ್ರಾಂಗಣದಲ್ಲಿ ಅರ್ಬನ್ ಪೆಟ್ರೋಲ್ ಬಂಕ್ ಹಾಗೂ ಹುಬ್ಬಳ್ಳಿ ಮಾರ್ಗದಲ್ಲಿ ರಿಲಯಾನ್ಸ ಪೆಟ್ರೋಲ್ ಬಂಕ್ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಅಡಕೆ ಬೆಳೆಗಾರರ ಸಂಸ್ಥೆ ಟಿಎಸ್‌ಎಸ್ ವ್ಯವಸ್ಥಾಪಕ ನಿರ್ದೇಶಕರಾದ ರವೀಶ ಹೆಗಡೆ ತಿಳಿಸಿದರು.
ಅವರು ನಗರದ ಟಿಎಸ್‌ಎಸ್ ಸೇವಾ ಸಹಕಾರಿ ಸಂಘದ 98ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು. ಎರಡು ಕಡೆ ಪೆಟ್ರೋಲ್ ಬಂಕ್ ಆಗುತ್ತಿದೆ. ಮುಂದೆ ಗ್ಯಾಸ್, ಇಲೆಕ್ಟ್ರಿಕಲ್ ಚಾರ್ಜಿಂಗ್ ಪಾಯಂಟ್ ಕೂಡ ಮಾಡಲಾಗುತ್ತಿದೆ. ಇದೂ ಅಲ್ಲದೇ ಕಾನಸೂರು ಒಂದು ಎಕರೆ 18 ಗುಂಟೆ ಜಾಗ ರೈಸ್ ಮಿಲ್ ಸಹಿತ ತೆಗೆದುಕೊಳ್ಳಲು ಮುಂದಾಗಿದ್ದೇವೆ. ಮುಂದೆ ಅಡಕೆ, ಹಸಿ ಅಡಕೆ ಟೆಂಡರ್ ಹಾಗೂ ಕೃಷಿ ಹಾಗೂ ಕಿರಾಣಿ ವಿಭಾಗಕ್ಕೂ ಸೂಪರ್ ಮಾರುಕಟ್ಟೆಗೆ ಮುಂದಾಗಿದ್ದೇವೆ. ಸಿಪಿ ಬಜಾರನಲ್ಲೂ ಸೂಪರ್ ಮಾರುಕಟ್ಟೆ ಡಿಸೆಂಬರ್ ಕೊನೆಯೊಳಗೆ ಉದ್ಘಾಟನೆ ಆಗಲಿದೆ ಎಂದರು.
ಪ್ರಸಕ್ತ ಸಾಲಿನಿಂದ ರೈತರಿಂದ ಒಣ ಶುಂಠಿ ಮಾತ್ರ ಖರೀದಿಸಲಾಗುತ್ತದೆ. ಕಳೆದ ವರ್ಷ ಹಸಿ ಶುಂಠಿ ಖರೀದಿ ಮಾಡಿದ್ದು ಅಕಾಲಿಕ ಮಳೆಯಿಂದ ಗುಣಮಟ್ಟದ ಒಣ ಶುಂಠಿ ಬರಲಿಲ್ಲ. ಈ ಕಾರಣದಿಂದ ಈ ಬಾರಿ ಒಣಶುಂಠಿ ಖರೀದಿಸಲಾಗುತ್ತದೆ ಎಂದರು. ಸದಸ್ಯರಿಗೆ ಒಂದು ಋಣ ವಿಮೋಚನಾ ನಿಧಿ ಆರಂಭಿಸಿದ್ದೇವೆ. ಈಗಾಗಲೇ 16 ಸದಸ್ಯರು ಮೃತರಾಗಿದ್ದು 32ಲಕ್ಷ ರೂ. ನೆರವು ನೀಡಲಾಗಿದೆ. ಫಾರ್ಮರ ಪ್ರೊಡ್ನೂಸರ್ ಕಂಪನಿ ಕೂಡ ಆರಂಭಿಸುತ್ತಿದ್ದೇವೆ. ಶೇ.15 ಟಿಎಸ್‌ಎಸ್ ಶೇರಿದೆ. ಅಡಕೆ ಮಾರಾಟ ಮಾಡುವವರು ಮಾರಾಟ ಮಾಡಿದ ಅಡಕೆ ಆಧರಿಸಿ ಶೇರು ಹಂಚಲಾಗುತ್ತದೆ ಎಂದರು. ವಡಗೇರಿಯಲ್ಲಿ ಗೇರು ಸಂಸ್ಕರಣಾ ಘಟಕವನ್ನು ಕಡವೆ ಕುಟುಂಬದಿಂದ ಖರೀದಿಸಿದ್ದೇವೆ. ಗುಣಮಟ್ಟದ ಗೇರುಬೀಜ ಸಂಸ್ಕರಿಸಿ ಮಾರಾಟ ಮಾಡಲಾಗುತ್ತದೆ. ಬೇಡಿಕೆ ಕೂಡ ಇದೆ ಎಂದರು. ಮುಂದೆ ಇದೊಂದು ಒಳ್ಳೆಯ ಉದ್ದಿಮೆ ಆಗಬಹುದು ಎಂದರು. ಕಾಳಂಗಿ, ಕೊರ್ಲಕಟ್ಟ, ಕೊರ್ಲಕೈದಲ್ಲಿ ನೂತನ ಸೂಪರ್ ಮಾರುಕಟ್ಟೆ ಆರಂಭಿಸಲಾಗುತ್ತದೆ. 200 ಕೆವಿವಿ ಸೋಲಾರ್ ಘಟಕ ಹಾಕಿಸಿದ್ದರಿಂದ 23 ಲಕ್ಷ ರೂ. ಸಂಘಕ್ಕೆ ಉಳಿತಾಯ ಆಗಿದೆ ಎಂದರು.
ಸಂಸ್ಥೆ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಜನತಾ ಬಜಾರ್ ಜಾಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನೂತನ ಕೃಷಿ ವಿಭಾಗದ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸಂಸ್ಥೆ ಸದಸ್ಯರಿಗಾಗಿ ಬಹುಮುಖೀ ಕಾರ್ಯ ಮಾಡುತ್ತಿದೆ ಎಂದರು. ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಸಿ.ಎನ್. ಹೆಗಡೆ ಹೂಡ್ಲಮನೆ, ಸೀತಾರಾಮ ಹೆಗಡೆ ನೀರ್ನಳ್ಳಿ, ಕೃಷ್ಣ ಹೆಗಡೆ, ಶಾರದಾ ಹೆಗಡೆ, ಶಶಾಂಕ ಹೆಗಡೆ ಶಿಗೇಹಳ್ಳಿ, ಆರ್.ಟಿ. ಅಳಗೋಡು, ಬಾಲಚಂದ್ರ ಹೆಗಡೆ ಇತರರು ಇದ್ದರು