Advertisement

ವಾರದೊಳಗೆ ತಾತ್ಕಾಲಿಕ ಸೇತುವೆ ನಿರ್ಮಾಣ

10:04 AM Aug 14, 2019 | Team Udayavani |

ಬೆಳ್ತಂಗಡಿ: ನೆರೆ ಹಾಗೂ ಭೂ ಕುಸಿತದಿಂದ ಸಂಪರ್ಕ ಕಡಿದುಕೊಂಡಿರುವ ಪ್ರದೇಶಗಳಲ್ಲಿ ವಾರದೊಳಗೆ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಶಾಸಕ ಹರೀಶ್‌ ಪೂಂಜಾ ತಿಳಿಸಿದ್ದಾರೆ.

Advertisement

ತಾಲೂಕಿನಲ್ಲಿ ಘಟಿಸಿರುವ ಭಾರೀ ಪ್ರಮಾಣದ ನೆರೆ ಹಾನಿ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು, ಬಾಂಜಾರು ಮಲೆ, ಅನಾರು ಸಂಪರ್ಕಕ್ಕೆ ತಾಲೂಕಿನಲ್ಲಿರುವ ಎನ್‌ಡಿಆರ್‌ಎಫ್‌ ನ ಎರಡು ತಂಡಗಳು ವಾರದೊಳಗೆ ತಾತ್ಕಾಲಿಕ ಸೇತುವೆ ನಿರ್ಮಾಣವನ್ನು ಆರಂಭಿಸಲಿವೆ. ಹಾಗಾಗಿ ಸಂಪರ್ಕಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ನಿರಾಶ್ರಿತರ ಕೇಂದ್ರಗಳು ಮುಂದಿನ ಪರಿಸ್ಥಿತಿ ಏನು ಎಂಬ ಪ್ರಶ್ನೆಗೆ ಉತ್ತರಿಸಿ, ಈ ಸಂಬಂಧ ಶೀಘ್ರವೇ ಬೆಳ್ತಂಗಡಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಸಂಪೂರ್ಣವಾಗಿ ಮನೆ ಕಳೆದುಕೊಂಡಿರುವವರ ವಿವರ ಪಡೆದು ಮುಖ್ಯಮಂತ್ರಿಯವರು ಘೋಷಿಸಿದಂತೆ ಬಾಡಿಗೆ ಮನೆ ಅವಶ್ಯವಿರುವವರನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ಭಾಗಶಃ ಮನೆ ಹಾನಿಯಾದವರಿಗೆ ಕ್ಷಿಪ್ರಗತಿಯಲ್ಲಿ ದುರಸ್ತಿಗೊಳಿಸಿ ವಾಪಸು ಕಳಿಸುವ ಸಂಬಂಧವೂ ಚರ್ಚಿಸಲಾಗುವುದು ಎಂದರು.

ಇದರೊಂದಿಗೆ ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಕ್ಕೆ ಮರಳಿ ನಿರ್ಮಿಸಲು 5ಲಕ್ಷ ರೂ. ಹಾಗೂ ಭಾಗಶಃ ಹಾನಿಯಾಗಿದ್ದಕ್ಕೆ ದುರಸ್ತಿಗೆ ಒಂದು ಲಕ್ಷ ರೂ. ಕೊಡಿಸಲು ಪ್ರಯತ್ನಿಸಲಾಗುವುದು ಎಂದು ವಿವರಿಸಿದರು.

ಚಾರ್ಮಾಡಿ ಘಾಟಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬ ಮತ್ತೂಂದು ಪ್ರಶ್ನೆಗೆ, ಈಗಾಗಲೇ ರಾಜ್ಯ ಹೆದ್ದಾರಿ ಇಲಾಖೆಯವರು ಚಿಕ್ಕಮಗಳೂರಿಗೆ ಸಂಬಂಧಿಸಿದ ಭಾಗದಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ದ.ಕ. ವ್ಯಾಪ್ತಿಗೆ ಒಳಟ್ಟಂತೆ ಅವಘಡ ಸಂಭವಿಸಿಲ್ಲ ಎಂದರು.

Advertisement

ಚಾರ್ಮಾಡಿ, ಕುಕ್ಕಾವು ಸೇರಿದಂತೆ ಇತರೆಡೆ 150ಕ್ಕೂ ಅಧಿಕ ಜಾನುವಾರು ರಕ್ಷಣೆಗೂ ಕ್ರಮ ಕೈಗೊಳ್ಳಲಾಗಿದೆ. ಕೆಎಂಎಫ್‌ 25 ಮೂಟೆ ಪಶು ಆಹಾರ ಒದಗಿಸಿದೆ. ಶ್ರಮಿಕ ಕಚೇರಿಗೆ ಜನಗಳು ಹುಲ್ಲು , ಆಹಾರ ಒದಗಿಸುತ್ತಿದ್ದಾರೆ ಎಂದು ವಿವರಿಸಿದ ಅವರು, ಮಂಗಳವಾರವೇ ಜಿಲ್ಲಾಧಿಕಾರಿ, ಸಿಎಸ್‌ ಜತೆ ಸಭೆ ನಡೆಸಿ ಶೀಘ್ರ ಪರಿಹಾರ ಒದಗಿಸಲು ಶ್ರಮಿಸುವುದಾಗಿ ತಿಳಿಸಿದರು.

ತಾಲೂಕಿನಲ್ಲಿ ಭೇಟಿ ಕೊಡದ ಪ್ರದೇಶಗಳು ಇನ್ನೂ ಇವೆಯಂತೆ ಎಂಬ ಪ್ರಶ್ನೆಗೆ, ಸಮಸ್ಯೆ ಇರುವ ಎಲ್ಲ ಪ್ರದೇಶಗಳಿಗೂ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಜಿಲ್ಲೆಗೆ ನೇಮಕವಾದ ನೋಡಲ್‌ ಅಧಿಕಾರಿಗಳ ಮೂಲಕ ಇಲಾಖಾವಾರು ಹಾನಿ ಕುರಿತು ವರದಿ ತರಿಸಿಕೊಳ್ಳುತ್ತಿದ್ದೇವೆ. ಆ ಬಳಿಕ ಗ್ರಾಮದಲ್ಲಿರುವ ಕೊನೆಯ ಮತದಾರನ ನಷ್ಟವನ್ನೂ ಭರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಹಾನಿಗೊಳಗಾದ ರಸ್ತೆ ಮತ್ತು ಸೇತುವೆ ಮರುನಿರ್ಮಾಣಕ್ಕೆ ಸಮೀಕ್ಷೆ ನಡೆಸಿ ಅನುದಾನ ಒದಗಿಸಲಾಗುವುದು. ಜತೆಗೆ ತ್ವರಿತ ಗತಿಯಲ್ಲಿ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗುವುದು ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಲೂಕಿನಲ್ಲಿನ ನೆರೆ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು, ಕಾರ್ಯಕರ್ತರು, ತಾಲೂಕಿನ ಯುವಕರು, ಸಂಘ-ಸಂಸ್ಥೆಗಳು ಸಹಾಯ ಹಸ್ತ ದೊರೆತಿದೆ. ನಿರಾಶ್ರಿತರಿಗೆ ಬೇಕಾದಂತ ಮೂಲಸೌಕರ್ಯ ಹಾಗೂ ಮನೆ ಮರು ನಿರ್ಮಾಣಕ್ಕೆ ತಂಡವು ಶ್ರಮಿಸುತ್ತಿದೆ ಎಂದು ಹೇಳಿದರು.

ಅಧಿಕಾರಿಗಳ ಸಭೆ ಕರೆದು ಕ್ರಮ
ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತಾತ್ಕಾಲಿಕ ಸೇತುವೆ ನಿರ್ಮಾಣ, ಮನೆ ನಿರ್ಮಾಣ ಎಲ್ಲವನ್ನೂ ಕೈಗೊಳ್ಳಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ನಿಧಾರ ಕೈಗೊಳ್ಳಲಾಗುವುದು.
ಹರೀಶ್‌ ಪೂಂಜ, ಶಾಸಕ, ಬೆಳ್ತಂಗಡಿ

ಚಿತ್ರ: ಶಿಶಿರ್‌ ರಘುಚಂದ್ರ, ಧರ್ಮಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next