ಮಹಾನಗರ: ನಗರದಲ್ಲಿ ವಾಹನ ದಟ್ಟಣೆಯನ್ನು ತಡೆಯಲು ಹಾಗೂ ಸುಗಮ ಸಂಚಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಕೆಲವು ಬಸ್ ತಂಗುದಾಣಗಳಲ್ಲಿ ನೂತನವಾಗಿ ಬಸ್-ಬೇಗಳನ್ನು ನಿರ್ಮಾಣ ಮಾಡುವ ಕೆಲಸ ಪಾಲಿಕೆ ವತಿಯಿಂದ ನಡೆಯುತ್ತಿದೆ.
ನಗರದ ಮುಖ್ಯರಸ್ತೆಗಳು ವಾಹನ ದಟ್ಟಣೆಯಿಂದ ಕೂಡಿದ್ದು, ಸುಗಮ ಸಂಚಾರಕ್ಕೆ ಪ್ರಮುಖ ರಸ್ತೆಗಳಲ್ಲಿ ಬಸ್- ಬೇಗಳ ನಿರ್ಮಾಣ ಅಗತ್ಯವಿದೆ. ಆ ನಿಟ್ಟಿನಲ್ಲಿ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜತೆಗೆ ಕೆಲವು ಜಂಕ್ಷನ್ ಅಭಿವೃದ್ಧಿ ಯೋಜನೆ ಯಡಿಯೂ ಬಸ್-ಬೇಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರೀಮಿಯಂ ಎಫ್ ಎಆರ್‌ನಡಿಯೂ ರಸ್ತೆ ಅಗಲೀಕರಣವನ್ನು ಟೆಂಡರ್‌ನಲ್ಲಿ ಸೇರಿಸಲಾಗಿದೆ.
ಅಂಬೇಡ್ಕರ್ ವೃತ್ತದಲ್ಲಿ ಬೇ ಸಹಿತ ತಂಗುದಾಣ
ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಬರುವಲ್ಲಿ ಎಡಬದಿಯ ಖಾಸಗಿ ಸ್ಥಳವನ್ನು ಟಿಡಿಆರ್ ಮೂಲಕ ತೆಗೆದುಕೊಂಡು ಬಸ್ ಬೇ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಇದರ ಕಾಮಗಾರಿ ಆರಂಭವಾಗಿದ್ದು, ಇದರಿಂದ ಆ ಭಾಗದ ಬಹುದೊಡ್ಡ ಸಮಸ್ಯೆ ನಿವಾರಣೆ ಯಾಗಲಿದೆ. ಬಸ್ ತಂಗುದಾಣವೂ ಇಲ್ಲದೆ ಸಾರ್ವಜನಿಕರು ಮಳೆ-ಬಿಸಿಲಿಗೆ ರಸ್ತೆ ಬದಿಯಲ್ಲಿ ನಿಲ್ಲಬೇಕಾಗಿತ್ತು.
ಬಲ್ಮಠ ಸರಕಾರಿ ಕಾಲೇಜು ಬಳಿ ನಿರ್ಮಾಣ
ಬಂಟ್ಸ್ ಹಾಸ್ಟೆಲ್ ಕಡೆಯಿಂದ ಹೋಗುವ ಬಸ್‌ಗಳು ಬಲ್ಮಠ ಸರಕಾರಿ ಕಾಲೇಜು ಪಕ್ಕದಲ್ಲಿ ರಸ್ತೆಯಲ್ಲೇ ನಿಲ್ಲುತಿತ್ತು. ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಳಿಯಲು- ಹತ್ತಲು ಇರುವುದರಿಂದ ಇಲ್ಲಿ ದಟ್ಟಣೆ ಸಮಾನ್ಯವಾಗಿದೆ. ಇದೀಗ ಫುಟ್‌ಪಾತ್ ನಿರ್ಮಾಣ ಕಾಮಗಾ ರಿಯ ಭಾಗವಾಗಿ ಬಸ್ ಬೇ ಸಹಿತ ತಂಗುದಾಣವನ್ನು ಗೋಲ್ಡ್ ಫಿಂಚ್ ಹೊಟೇಲ್ ಪಕ್ಕದಲ್ಲಿ ನಿರ್ಮಿಸಲಾಗಿದ್ದು, ಕಾಂಕ್ರೀಟ್ ಅಥವಾ ಇಂಟರ್‌ಲಾಕ್ ಅಳವಡಿಕೆ ಬಾಕಿ ಇದೆ.
ಹಂಪನಕಟ್ಟೆ ವಿವಿ ಕಾಲೇಜು
ಇಲ್ಲಿನ ವಿಶ್ವವಿದ್ಯಾನಿಲಯ ಕಾಲೇಜು ಎದುರುಗಡೆಯಲ್ಲಿ ಬೇ ಇರುವಂತಹ ಬಸ್ ತಂಗುದಾಣ ನಿರ್ಮಿಸಿ ಬಸ್ ಗಳಿಗೆ ರಸ್ತೆಗಿಂತ ಹೊರಭಾಗದಲ್ಲಿ ಬಂದು ನಿಲ್ಲು ವ್ಯವಸ್ಥೆ ಮಾಡಲಾಗಿದೆ. ಹಿಂದೆ ಇದ್ದ ಪಾರ್ಕಿಂಗ್ ಪ್ರದೇಶವನ್ನು ಸ್ಥಳಾಂತರಿಸಿ, ಫುಟ್‌ಪಾತ್‌ನ್ನು ಸ್ವಲ್ಪ ಹಿಂದಕ್ಕೆ ಸರಿಸಲಾಗಿದೆ. ಇದು ಕೂಡ ಸ್ವಲ್ಪ ಮಟ್ಟಿಗೆ ವಾಹನಗಳ ದಟ್ಟಣೆ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.
ಬಾವುಟಗುಡ್ಡೆ
ಬಾವುಟಗುಡ್ಡೆಯಲ್ಲಿ ಅಲೋಶಿಯಸ್ ಕಾಲೇಜು ಪಕ್ಕದಲ್ಲಿ ಈ ಹಿಂದೆ ಇದ್ದ ಬಸ್ ಬೇಯನ್ನು ಅಭಿವೃದ್ಧಿ ಕಾಮಗಾರಿಗಾಗಿ ಮುಚ್ಚಲಾಗಿದ್ದು, ಇನ್ನೊಂದು ಭಾಗದಲ್ಲಿ ತಂಗುದಾಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅದರೆ ಇದರಿಂದ ದಟ್ಟಣೆ ಉಂಟಾಗಬಹುದು ಎನ್ನುವ ಕಾರಣಕ್ಕೆ ಅಲ್ಲಿ ಮತ್ತೆ ಹಿಂದಿನಂತೆ ಬಸ್ ಬೇ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕುರಿತು ಪೊಲೀಸ್ ಇಲಾಖೆಯಿಂದಲೂ ಪಾಲಿಕೆಗೆ ಮನವಿ ಮಾಡಲಾಗಿದೆ.
ಬೇ ಯಲ್ಲಿ ನಿಲ್ಲದ ಬಸ್‌ಗಳು
ನಗರದಲ್ಲಿ ಈ ಹಿಂದಯೇ ಕೆಲವು ಬಸ್ -ಬೇ ಗಳು ನಿರ್ಮಾಣ ಮಾಡಲಾಗಿದ್ದು, ಕೆಲವು ಬಸ್‌ಗಳು ಈ ಬೇ ಗಳಲ್ಲಿ ನಿಲ್ಲದೆ, ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸುವುದು-ಇಳಿಸುವುದು ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪವೂ ಕೇಳಿ ಬರುತ್ತಿದೆ. ಇನ್ನೊಂದೆಡೆ ಬೇಗಳು ವೈಜ್ಞಾನಿಕವಾಗಿಲ್ಲ ಎನ್ನುವುದು ಬಸ್ ಮಾಲೀಕರ ಆರೋಪ.
ಜಾಗದ ಕೊರತೆ: ಅಭಿವೃದ್ಧಿ ಕಾಮಗಾರಿ ಭಾಗವಾಗಿ ಇತ್ತೀಚೆಗೆ ನಗರದ ಐದಾರು ಕಡೆಗಳಲ್ಲಿ ಹೊಸ ತಂಗುದಾಣ ಸಹಿತ ಬಸ್ ಬೇ ಗಳನ್ನು ನಿರ್ಮಿಸಲಾಗಿದೆ. ಕೆಲವೆಡೆ ಜಾಗದ ಕೊರತೆಯಿದ್ದು, ಜಾಗ ಲಭ್ಯವಾದಲ್ಲೆಲ್ಲ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಟಿಡಿಆರ್ ಮೂಲಕ ಜಮೀನು ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ. –
ಪ್ರೇಮಾನಂದ ಶೆಟ್ಟಿ, ಮನಪಾ ಮುಖ್ಯ ಸಚೇತಕ
-ಭರತ್ ಶೆಟ್ಟಿಗಾರ್