ಹಾಸನ: ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಹೊಯ್ಸಳರ ವಾಸ್ತುಶಿಲ್ಪ ಆಧರಿಸಿ ಹಾಸನ ಜಿಲ್ಲಾಧಿಕಾರಿ ಕಚೇರಿಗೆ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಜಿಲ್ಲಾಧಿಕಾರಿ ನೂತನ ಕಚೇರಿ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಹಾಗೂ ಕರಡು ನಕ್ಷೆಯನ್ನು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಈಗಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಉಳಿಸಿಕೊಂಡು ಜಿಲ್ಲಾ ಖಜಾನೆಯ ಕಟ್ಟಡ ಹಾಗೂ ಹಳೇ ನ್ಯಾಯಾಲಯದ ಕೆಲ ಪ್ರದೇಶವನ್ನು ಸೇರಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು.
ಡೀಸಿ ಕಚೇರಿ ಹಾಗೂ ಖಜಾನೆ ಕಟ್ಟಡದ ನಡುವಿನ ರಸ್ತೆ ಸೇರಿಕೊಂಡು ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದರು. ಶಾಸಕ ಪ್ರೀತಂ ಜೆ.ಗೌಡ ಅವರು ಜಿಲ್ಲಾಧಿ ಕಾರಿ ಕಚೇರಿಗೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಪುರಸ್ಕರಿಸಿದ್ದು, ತಕ್ಷಣದಿಂದಲೇ ಹೊಸ ಕಟ್ಟಡ ನಿರ್ಮಾಣದ ಪ್ರಕ್ರಿಯೆಗಳು ಆರಂಭವಾಗಲಿವೆ. ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಬಂದ ನಂತರ ಕಟ್ಟಡ ನಿರ್ಮಾಣದ ಕಾಮಗಾರಿಗೆ ಚಾಲನೆನೀಡಲಾಗುವುದು ಎಂದು ಹೇಳಿದರು.
ಡಿಪಿಆರ್ ಸಿದ್ಧಪಡಿಸಲು ಸೂಚನೆ: ಹೊಸ ಕಟ್ಟಡ ನಿರ್ಮಾಣಕ್ಕೆ ತಕ್ಷಣವೇ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಲು ಸೂಚನೆ ನೀಡಿದ್ದು, ಡಿಪಿಆರ್‌ನೊಂದಿಗೆ ಪ್ರಸ್ತಾ ವನೆ ಸಲ್ಲಿಸಿದ ತಕ್ಷಣವೇ ಹಣ ಬಿಡುಗಡೆ ಮಾಡಲಾಗುವುದು ಎಂದರು. ಜಿಲ್ಲಾಧಿಕಾರಿ ಕಚೇರಿ ಹೊಸ ಕಟ್ಟಡ ನಿರ್ಮಾಣಕ್ಕೆ ಸಾಮಾನ್ಯವಾಗಿ 25 ಕೋಟಿ ರೂ. ಅಂದಾಜು ಮಾಡಲಾಗುತ್ತದೆ. ಯೋಜನಾ ವರದಿ ಆಧರಿಸಿ ಹಾಸನ ಜಿಲ್ಲಾಧಿಕಾರಿ ಹೊಸ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಲಾಗುವುದು ಎಂದರು.
ಈಗಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡವು 60 -70 ವರ್ಷ ಹಳೆಯ ಕಟ್ಟಡ. ಕಚೇರಿಗೆ ಹೆಚ್ಚುವರಿ ಸ್ಥಳಾವಕಾಶದ ಅಗತ್ಯವಿದೆ ಹಾಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. ಹಳೇ ಕಟ್ಟಡವನ್ನು ಉಳಿಸಿ ಕೊಂಡು ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವ ಅಶೋಕ್ ಅವರು ಸ್ಪಷ್ಟಪಡಿಸಿದರು. ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಪ್ರೀತಂ ಜೆ.ಗೌಡ, ಕೆ.ಎಸ್. ಲಿಂಗೇಶ್, ಜಿಲ್ಲಾಧಿಕಾರಿ ಆರ್. ಗಿರೀಶ್, ಎಸ್ಪಿ ಶ್ರೀನಿವಾಸ ಗೌಡ ಮತ್ತಿತರರು ಉಪಸ್ಥಿತರಿದ್ದರು.