Advertisement

ಎನ್‌ಎಚ್‌ಎಐ, ಶಾಸಕರಿಂದ ಪ್ರತ್ಯೇಕ ಪ್ರಯತ್ನದ ಭರವಸೆ

11:31 PM Dec 21, 2019 | mahesh |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಸೇತುವೆ ಉದ್ದಕ್ಕೂ ಎರಡೂ ಬದಿ ಕಬ್ಬಿಣದ ತಂತಿ (ತಡೆ) ಬೇಲಿಯನ್ನು ನಿರ್ಮಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕಡೆಯಿಂದ ಪ್ರಯತ್ನ ನಡೆಯುತ್ತಿರುವಂತೆಯೇ ಸ್ಥಳೀಯ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಈ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಮುಖಾಂತರ ಮಾಡಿಸುವ ಉದ್ದೇಶವನ್ನು ಹೊಂದಿದ್ದು, ಅವರೂ ಈ ದಿಶೆಯಲ್ಲಿ ಪ್ರಯತ್ನಿಸುತ್ತಿದ್ದಾರೆ.

Advertisement

ತಡೆಬೇಲಿಯನ್ನು ನಿರ್ಮಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮಂಗಳೂರು ಕಚೇರಿಯು ತಜ್ಞ ಎಂಜಿನಿಯರ್‌ ಮೂಲಕ ತಯಾರಿಸಿದ 72 ಲಕ್ಷ ರೂ. ಮೊತ್ತದ ಅಂದಾಜು ಪಟ್ಟಿ ಯನ್ನು ಅನುಮೋದನೆಗಾಗಿ ಎನ್‌ಎಚ್‌ಎಐ ವಿಭಾಗೀಯ ಕಚೇರಿಗೆ ಸಲ್ಲಿಸಿದೆ. ಆದರೆ ಇದೇ ವೇಳೆ ಶಾಸಕ ವೇದವ್ಯಾಸ ಕಾಮತ್‌ ಅವರು ಈ ತಡೆಬೇಲಿ ಯೋಜನೆ ಕುರಿ ತಂತೆ ಎನ್‌ಎಚ್‌ಎಐ ಮೀನ ಮೇಷ ಎಣಿ ಸುತ್ತಿರುವ ಕಾರಣ ಲೋಕೋಪಯೋಗಿ ಇಲಾಖೆಯ ಮೂಲಕ ಈ ತಡೆ ಬೇಲಿ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಈ ಬಗ್ಗೆ ಕೂಡಲೇ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ನೇತ್ರಾವತಿ ನದಿಯ ಈ ಸೇತುವೆಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಹಾಗೂ ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಕಳೆದ ಜು. 29 ರಂದು ಉಳ್ಳಾಲ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಇಲ್ಲಿ 3 ತಿಂಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಓರ್ವ ಯುವತಿ ಸೇರಿದಂತೆ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಆತ್ಮಹತ್ಯೆಗೆ ಯತ್ನಿಸಿದವರನ್ನು ರಕ್ಷಿಸಲಾಗಿದೆ.ಅದಕ್ಕಾಗಿ ಈ ಸೇತುವೆಯ ಎರಡೂ ಬದಿ ತಡೆ ಬೇಲಿಯನ್ನು ನಿರ್ಮಾಣ ಮಾಡುವಂತೆ ಮಂಗಳೂರಿನ ಪೊಲೀಸ್‌ ಕಮಿಷನರೆಟ್‌ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಪ್ರಸ್ತಾವ ಸಲ್ಲಿಸಲಾಗಿತ್ತು. ಅನಂತರ ಪೊಲೀಸ್‌ ಇಲಾಖೆಯು ಈ ಬಗ್ಗೆ ಹಲವು ಬಾರಿ ನೆನಪೋಲೆಯನ್ನು ಕಳುಹಿಸಿತ್ತು. ಆದರೆ ಇದುವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಆಗಿಲ್ಲ.

840 ಮೀ. ಉದ್ದದ ಸೇತುವೆ
ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ತಲಪಾಡಿ ಮಧ್ಯೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ಜಪ್ಪಿನಮೊಗರು ಸಮೀಪ ನೇತ್ರಾವತಿ ನದಿಗೆ 840 ಮೀ. ಉದ್ದದ ಎರಡು ಸೇತುವೆಗಳು (ಒಂದು ಹೋಗುವ ಮತ್ತು ಬರುವ) ಇವೆ. ತಂತಿಯ ತಡೆಬೇಲಿಯನ್ನು ಈ ಎರಡೂ ಸೇತುವೆಗಳಿಗೆ ಎರಡೂ ಬದಿ ನಿರ್ಮಿಸಬೇಕಾಗಿದೆ. ಪೊಲೀಸ್‌ ಕಮಿಷನರೆಟ್‌ ವತಿಯಿಂದ ಎನ್‌ಎಚ್‌ಎಐಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಎರಡೂ ಸೇತುವೆಗಳಿಗೆ ಎರಡೂ ಬದಿ 10 ಅಡಿ ಎತ್ತರಕ್ಕೆ ಪೂರ್ತಿಯಾಗಿ ಕಬ್ಬಿಣದ ವೈರ್‌ ಹಾಕಿ ತಡೆ ಬೇಲಿ ನಿರ್ಮಾಣ ಮಾಡಬೇಕು ಎಂದು ನಮೂದಿಸಲಾಗಿದೆ.

ಟ್ರಾಫಿಕ್‌ ಎಸಿಪಿ ಕಚೇರಿಯಿಂದ ಪತ್ರ
ಉಳ್ಳಾಲ ಸೇತುವೆಯ ಎರಡೂ ಬದಿ ಮನುಷ್ಯ ದಾಟಲಾಗದ ಅಥವಾ ನದಿಗೆ ಹಾರಲು ಸಾಧ್ಯವಾಗದ, ಎತ್ತರವಾದ ತಡೆಬೇಲಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಪೊಲೀಸ್‌ ಕಮಿಷನರೆಟ್‌ನ ಟ್ರಾಫಿಕ್‌ ಎಸಿಪಿ ಕಚೇರಿಯಿಂದ ಎನ್‌ಎಚ್‌ಎಐ ಅಧಿಕಾರಿಗಳಿಗೆ ಪತ್ರ ಬರೆದು ಕೋರಲಾಗಿದೆ.

Advertisement

ಪ್ರಸ್ತಾವನೆ ತಾಂತ್ರಿಕ ತಜ್ಞರಿಗೆ ಸಲ್ಲಿಕೆ
ಈ ಸೇತುವೆಗಳಿಗೆ ಫೆನ್ಸಿಂಗ್‌ ಮಾಡುವ ಪ್ರಸ್ತಾವ ಸೇತುವೆ ನಿರ್ಮಿಸುವಾಗ ಎನ್‌ಎಚ್‌ಎಐ ತಯಾರಿಸಿದ ಮೂಲ ಯೋಜನೆಯಲ್ಲಿ ಇರಲಿಲ್ಲ. ಅದಕ್ಕೆ ತಗಲುವ ವೆಚ್ಚವನ್ನು ಹೆಚ್ಚುವರಿ ವೆಚ್ಚವೆಂದು ಪರಿಗಣಿಸಬೇಕಾಗುವುದರಿಂದ ಫೆನ್ಸಿಂಗ್‌ ಕುರಿತಂತೆ ಅಂದಾಜು ಪತ್ರ (ಎಸ್ಟಿಮೇಟ್‌) ತಯಾರಿಸುವ ಬಗ್ಗೆ ಹಾಗೂ ಸೇತುವೆಗಳ ಉದ್ದಕ್ಕೂ ಎರಡೂ ಬದಿ ತಡೆ ಬೇಲಿ ನಿರ್ಮಾಣದ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸುವಂತೆ ಕನ್ಸಲ್ಟೆಂಟ್‌ ಎಂಜಿನಿಯರ್‌ಗೆ (ತಾಂತ್ರಿಕ ಸಲಹೆಗಾರರಿಗೆ) ಸಲ್ಲಿಸಿತ್ತು.

ಫೆನ್ಸಿಂಗ್‌ ಬಗ್ಗೆ ಸಾಕಷ್ಟು ಬಾರಿ ಪತ್ರ ವ್ಯವಹಾರ
ಕೆಫೆ ಕಾಫಿ ಡೇ ಸಂಸ್ಥೆಯ ಸ್ಥಾಪಕ ಸಿದ್ಧಾರ್ಥ್ ಪ್ರಕರಣದ ಬಳಿಕ ಉಳ್ಳಾಲ ಸೇತುವೆಗೆ (ಎರಡೂ ಸೇತುವೆಗಳಿಗೆ) ಎರಡೂ ಬದಿ ಪೂರ್ತಿ ಫೆನ್ಸಿಂಗ್‌ ಮಾಡುವ ಬಗ್ಗೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಸೇತುವೆ ಬಳಿ ಆತ್ಮಹತ್ಯೆ ಪ್ರಕರಣಗಳು ಪದೇ ಪದೇ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆನ್ಸಿಂಗ್‌ ಕುರಿತಂತೆ ಪುನರಪಿ ಸಾಕಷ್ಟು ಬಾರಿ ಪತ್ರ ವ್ಯವಹಾರ ನಡೆಸಲಾಗಿದೆ. ಅದನ್ನು ಎನ್‌ಎಚ್‌ಎಐ ಯವರೇ ಮಾಡ ಬೇಕಾಗಿದೆ.
 - ಡಾ| ಹರ್ಷ ಪಿ.ಎಸ್‌., ಪೊಲೀಸ್‌ ಆಯುಕ್ತರು

ಎನ್‌ಎಚ್‌ಎಐ ಕಚೇರಿಗೆ ಪ್ರಸ್ತಾವನೆ
ಉಳ್ಳಾಲ ಸೇತುವೆಗೆ ತಡೆ ಬೇಲಿ ನಿರ್ಮಾಣ ಮಾಡುವ ಬಗ್ಗೆ ಕನ್ಸಲ್ಟೆಂಟ್‌ ಎಂಜಿನಿಯರ್‌ಗೆ (ತಾಂತ್ರಿಕ ಸಲಹೆಗಾರರಿಗೆ) ಸಲ್ಲಿಸಿದ ಯೋಜನ ಪ್ರಸ್ತಾವದ ಕುರಿತಂತೆ ಎಂಜಿನಿಯರ್‌ ಅವರು 72 ಲಕ್ಷ ರೂ. ಅಂದಾಜು ವೆಚ್ಚದ ಯೋಜನ ವರದಿಯನ್ನು ಸಲ್ಲಿಸಿದ್ದಾರೆ. ಅದನ್ನು ಅನುಮೋದನೆಗಾಗಿ ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿಗೆ ಕಳುಹಿಸಿ ಕೊಡಲಾಗಿದೆ. ಅದಕ್ಕೆ ಅನುಮೋದನೆ ದೊರೆತು ಬಿಡ್‌ನ್ನು ನಮಗೇ ವಹಿಸಿದರೆ ಕಾಮಗಾರಿಯನ್ನು ನಾವೇ ಮಾಡುತ್ತೇವೆ.
 - ಶಿಶು ಮೋಹನ್‌, ಎನ್‌ಎಚ್‌ಎಐ ಮಂಗಳೂರು ಯೋಜನಾ ನಿರ್ದೇಶಕರು.

ಪಿಡಬ್ಲ್ಯುಡಿ ಇಲಾಖೆಗೆ ಯೋಜನೆ
ತಡೆಬೇಲಿ ನಿರ್ಮಾಣ ಮಾಡುವ ಪ್ರಸ್ತಾವ ದುಬಾರಿ ಯೋಜನೆಯಾಗಿದೆ. ರಾ.ಹೆ. ಪ್ರಾಧಿಕಾರಕ್ಕೆ ಪೊಲೀಸ್‌ ಆಯುಕ್ತರು ಪ್ರಸ್ತಾವನೆ ಕಳುಹಿಸಿ ಹಲವು ಬಾರಿ ನೆನಪೋಲೆ ಕಳುಹಿಸಿದರೂ ಯಾವುದೇ ಕ್ರಮ ಆಗಿಲ್ಲ. ಅಲ್ಲದೆ ಎನ್‌ಎಚ್‌ಎಐ ಗೆ ಈಗಾಗಲೇ ವಹಿಸಿದ ಕಾಮಗಾರಿಗಳು ಆರ್ಥಿಕ ಅಡಚಣೆಯಿಂದಾಗಿ ವಿಳಂಬವಾಗುತ್ತಿವೆ. ಹಾಗಾಗಿ ಈ ತಡೆಬೇಲಿ ನಿರ್ಮಾಣ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಕೈಗೆತ್ತಿಕೊಂಡು ಮುಕ್ತಾಯ ಮಾಡುವ ಉದ್ದೇಶ ಹೊಂದಲಾಗಿದೆ.
 - ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next