ರಾಯಚೂರು: ನೈರ್ಮಲ್ಯ ವಿಚಾರದಲ್ಲಿ ಜಿಲ್ಲೆ ಸಾಕಷ್ಟು ಹಿಂದುಳಿದಿದ್ದು, ಫೆಬ್ರವರಿ ಅಂತ್ಯಕ್ಕೆಲ್ಲ ಶೇ.50ರಷ್ಟು ಗುರಿ ಸಾಧಿಸುವಂತೆ ಸೂಚಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತಿಯ ಜಲ ನಿರ್ಮಲ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ಆರು ತಿಂಗಳ ಕೆಳಗೆ ಶೇ.36ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿತ್ತು. ಆದರೆ, ಈಗ ಶೇ.43ರಷ್ಟು ಸಾ ಧಿಸಲಾಗಿದೆ. ಇದು ನಿರೀಕ್ಷಿತ ಮಟ್ಟದ ಗುರಿಯಲ್ಲ. ಸರ್ಕಾರದಲ್ಲಿ ಅನುದಾನಕ್ಕೆ ಯಾವುದೇ ಕೊರತೆ ಇಲ್ಲ. ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಶೌಚಗೃಹಗಳ ನಿರ್ಮಾಣ ಗುರಿ ಸಾಧಿ ಸಬೇಕು ಎಂದು ತಾಕೀತು ಮಾಡಲಾಗಿದೆ ಎಂದು ಹೇಳಿದರು.
ಈಗಾಗಲೇ ರಾಜ್ಯದಲ್ಲಿ 17 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಶೀಘ್ರದಲ್ಲೇ ಕೊಪ್ಪಳ, ಹಾವೇರಿ ಸೇರಿ ಮೂರು ಜಿಲ್ಲೆಗಳನ್ನೂ ಘೋಷಿಸಲಾಗುವುದು. ರಾಯಚೂರು ಜಿಲ್ಲೆಯಲ್ಲಿ ಮಾತ್ರ ನಿರೀಕ್ಷೆಯಷ್ಟು ಗುರಿ ಸಾಧನೆ ಸಾಧ್ಯವಾಗಿಲ್ಲ. ಅದಕ್ಕೆ ಸಾರ್ವಜನಿಕರ ಸಹಭಾಗಿತ್ವವೂ ಅಷ್ಟೇ ಮುಖ್ಯ. ಜನ ಸಹಕರಿಸದಿದ್ದಲ್ಲಿ ಗುರಿ ತಲುಪುವುದು ಅಸಾಧ್ಯ ಎಂದರು.
ಜಿಲ್ಲೆಯ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಶೌಚಗೃಹ ನಿರ್ಮಿಸಲು ಅಧಿಕಾರಿಗಳು ಸಹ ಜನರ ಮನವೊಲಿಸುವ ಕೆಲಸವನ್ನು ನಿರಂತರ ಮಾಡುತ್ತಿದ್ದಾರೆ. ಆದರೆ, ಜನರು ಸಾಂಪ್ರದಾಯಿಕ ಮನಸ್ಸಿನಿಂದ ಹೊರಗೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಆರ್ಸೆನಿಕ್ ಹಾಗೂ ಫ್ಲೋರೈಡ್‌ಯುಕ್ತ ನೀರಿರುವ ಕಾರಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ಮುತುವರ್ಜಿ ವಹಿಸಿದೆ. ಜಿಲ್ಲಾದ್ಯಂತ ಅಳವಡಿಸಿದ್ದ 65 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗುತ್ತಿಗೆ ಪಡೆದಿದ್ದ ಕಂಪನಿ ನಿರ್ವಹಣೆ ಬಿಟ್ಟು ಹೋಯಿತು. ಅವುಗಳನ್ನು ಬೇರೆಯವರಿಗೆ ವಹಿಸಲು ಮೂರು ಸಲ ಟೆಂಡರ್ ಮಾಡಿದರೂ ಯಾರೂ ಬಂದಿರಲಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರದಲ್ಲೇ ದುರಸ್ತಿ ಮಾಡುವ ಭರವಸೆ ಇದೆ ಎಂದರು.
ಜಿಲ್ಲೆಯಲ್ಲಿ ಕೈಗೊಂಡ 36 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ 18 ಮುಗಿದಿವೆ. ಉಳಿದ ಯೋಜನೆಗಳು ವಿವಿಧ ಹಂತಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಪರಿಶಿಷ್ಟ ವರ್ಗದವರು ಸಾವಿರ ಜನ ಇರುವ ಗ್ರಾಮಗಳಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ. ಎಲ್ಲ ಜನರು ನೀರು ಪಡೆಯಲು ಅನುಕೂಲವಾಗುವಂತೆ ಘಟಕ ಅಳವಡಿಸಲು ಸೂಚಿಸಲಾಗಿದೆ ಎಂದರು. ಜಿಪಂ ಉಪ ಕಾರ್ಯದರ್ಶಿ ಮಹ್ಮದ್ ಯೂಸೂಫ್, ಪಂಚಾಯತ್‌ರಾಜ್ ಇಲಾಖೆ ಇಇ ಇದ್ದರು.