Advertisement

Davanagere; ಪರಸ್ಪರ ವೈಷಮ್ಯಕ್ಕೆ ಬಾಲಕಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕಿಯರು

02:50 PM Feb 13, 2024 | Team Udayavani |

ದಾವಣಗೆರೆ: ಇಬ್ಬರು ಶಿಕ್ಷಕಿಯರ ನಡುವಿನ ವೈಷಮ್ಯಕ್ಕೆ ಶಾಲಾ ಬಾಲಕಿಯರನ್ನು ಶೌಚಾಲಯ ಸ್ವಚ್ಛಗೊಳಿಸಲು ಬಳಸಿಕೊಂಡು, ವಿಡಿಯೋ ವೈರಲ್ ಮಾಡಿದ ಘಟನೆ ತಾಲೂಕಿನ ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ, ಇತ್ತೀಚೆಗಷ್ಟೇ ಶೌಚಾಲಯ ಸ್ವಚ್ಛಗೊಳಿಸಲು ಮಕ್ಕಳನ್ನು ಬಳಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಮಾಡಿದ ಬೆನ್ನಲ್ಲೇ ಶಿಕ್ಷಕಿಯೋರ್ವರು, ಮುಖ್ಯ ಶಿಕ್ಷಕಿ ಮೇಲಿನ‌ ಸಿಟ್ಟಿಗೆ ಬಾಲಕಿಯರನ್ನು ಶೌಚಾಲಯ ಸ್ವಚ್ಛಗೊಳಿಸಲು ಬಳಸಿಕೊಂಡಿರುವುದಕ್ಕೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಶಾಲೆಯ ಎಸ್ಎಸ್ಎಲ್ ಸಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಇಂಗ್ಲೀಷ್ ಪಾಠ ಮಾಡುವ ವಿಚಾರವಾಗಿ ಭಾಷಾ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿ ನಡುವೆ ಭಿನ್ನಾಭಿಪ್ರಾಯ ಬಂದಿದ್ದೇ ಬಾಲಕಿಯರನ್ನು ಶೌಚಾಲಯ ಸ್ವಚ್ಛಗೊಳಿಸಲು ಬಳಸಿಕೊಳ್ಳಲು ಕಾರಣ ಎಂಬುದು ಬಹಿರಂಗಗೊಂಡಿದೆ.

ಘಟನೆ ವಿವರ

ಶಾಲೆಯಲ್ಲಿ ಯಾವ ವಿಷಯದಲ್ಲಿ ಮಕ್ಕಳು ಹಿಂದುಳಿದಿದ್ದಾರೆಂದು ಗುರುತಿಸಿ ಆ ವಿಷಯದ ಸಂಪನ್ಮೂಲ ಶಿಕ್ಷಕರನ್ನು ಬೇರೆ ಶಾಲೆಯಿಂದ ಕರೆಸಿ ಪಾಠ ಮಾಡಬೇಕು ಎಂಬ ಇಲಾಖೆ ಸೂಚನೆಯಿದೆ. ಈ ಸೂಚನೆಯಂತೆ ಮುಖ್ಯ ಶಿಕ್ಷಕರು, ಶಾಲಾ ಶಿಕ್ಷಕರ ಸಭೆಯ‌ ತೀರ್ಮಾನದಂತೆ ಸಮೀಪದ ಹುಲಿಕಟ್ಟೆ ಶಾಲೆಯ ಶಿಕ್ಷಕರಿಗೆ ಪಾಠ ಮಾಡಲು ಆಹ್ವಾನಿಸಲು ನೀಡಿದ್ದರು. ಆದರೆ, ಬೇರೆ ಶಾಲೆಯವರು ಬಂದು ಇಂಗ್ಲಿಷ್ ಪಾಠ ಮಾಡುವುದು ತಮಗೆ ಅವಮಾನ ಎಂದು ಭಾವಿಸಿದ ಇಂಗ್ಲಿಷ್ ಶಿಕ್ಷಕಿ, ಈ ಬಗ್ಗೆ ಮುಖ್ಯ ಶಿಕ್ಷಕಿಯೊಂದಿಗೆ ವಾಗ್ವಾದಕ್ಕಿಳಿದಿದ್ದರು. ಶಿಕ್ಷಕಿಯ ವರ್ತನೆ ಬಗ್ಗೆ ಮುಖ್ಯಶಿಕ್ಷಕಿ ಇಂಗ್ಲಿಷ್ ಶಿಕ್ಷಕಿಗೆ ನೋಟೀಸ್ ಸಹ ನೀಡಿದ್ದರು. ಇದರಿಂದ ಕೋಪಗೊಂಡ ಶಿಕ್ಷಕಿ, ಮುಖ್ಯ ಶಿಕ್ಷಕಿ ಮೇಲೆ ಆರೋಪ ಹೊರೆಸಲು ಬೆಳಿಗ್ಗೆ 9 ಗಂಟೆಗೆ ಹತ್ತು ಬಾಲಕಿಯರನ್ನು ಕರೆಸಿ, ಅವರಿಂದ ಒತ್ತಾಯ ಪೂರ್ವಕವಾಗಿ ಶೌಚಾಲಯ ಸ್ವಚ್ಛಗೊಳಿಸಿ, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಕಳುಹಿಸಿದ್ದಾರೆ ಎಂದು ಶಾಲೆಯ ಹೆಸರು ಹೇಳಲಿಚ್ಛಿಸದ ಸಹ ಶಿಕ್ಷಕರೋರ್ವರು ಮಾಹಿತಿ ನೀಡಿದರು.

Advertisement

ಇಬ್ಬರು ಶಿಕ್ಷಕಿಯರ ನಡುವಿನ ದ್ವೇಷಕ್ಕೆ ಅಮಾಯಕ ಶಾಲಾ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವ ಶಿಕ್ಷೆ ಎದುರಿಸುವಂತಾಗಿದ್ದು‌ ಶೋಚನೀಯ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಾಲಾಭಿವೃದ್ಧಿ ಸಮಿತಿಯವರು, ಗ್ರಾಮಸ್ಥರು ಇಬ್ಬರೂ ಶಿಕ್ಷಕಿಯರನ್ನು ತರಾಟೆ ತೆಗೆದುಕೊಂಡರು.

ಮಕ್ಕಳನ್ನು ಶೌಚಾಲಯ ಸ್ವಚ್ಛಗೊಳಿಸಲು ಬಳಸಿಕೊಂಡಿರುವ ಬಗ್ಗೆ ಶಾಲಾ ಶಿಕ್ಷಣ ಉಪನಿರ್ದೇಶಕರಿಗೆ ಗ್ರಾಮಸ್ಥರು ದೂರು ನೀಡಿದರು. ಜತೆಗೆ ಈ ಘಟನೆ ಖಂಡಿಸಿ ವಿದ್ಯಾರ್ಥಿಗಳೂ ಸಹ ಕೆಲ ಹೊತ್ತು ಪ್ರತಿಭಟನೆಯೂ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next