ಔರಾದ: ಉದ್ಭವಲಿಂಗ ಪಟ್ಟಣದ ಆರಾಧ್ಯ ದೈವ ಅಮರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಸೋಮವಾರ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಚಾಲನೆ ನೀಡಿದರು.
ಇದಕ್ಕೂ ಮುನ್ನ ಬೀದರ ಸಹಾಯಕ ಆಯುಕ್ತ ಮಹಮ್ಮದ ನಯೀಮ್ ಮೋಮಿನ್, ಔರಾದ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಮುಖಂಡರೊಂದಿಗೆ ದೇವಸ್ಥಾನ ಜೀರ್ಣೋದ್ಧಾರ ಕುರಿತು ಸುದೀರ್ಘ ಚರ್ಚಿಸಿದರು.
ಕರ್ನಾಟಕ ಮಾತ್ರವಲ್ಲದೇ ಪಕ್ಕದ ಮಹಾರಾಷ್ಟ್ರ ಹಾಗೂ ತೆಲಂಗಾಣಾ ರಾಜ್ಯಗಳಿಂದಲೂ ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರೇಶ್ವರ ದೇವರ ದರ್ಶನ ಪಡೆಯುತ್ತಾರೆ. ಈ ದೇವಸ್ಥಾನದ ಅಭಿವೃದ್ಧಿಯಿಂದಾಗಿ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.
ಔರಾದ ಜನತೆಯ ಆರಾಧ್ಯ ದೈವ ಸುಕ್ಷೇತ್ರ ಅಮರೇಶ್ವರ ದೇವಸ್ಥಾನವನ್ನು ಸುಂದರ ಗೊಳಿಸಬೇಕು. ಮಂದಿರವನ್ನು ಅಭಿವೃದ್ಧಿಪಡಿಸಲು ಸದಾ ನಿಮ್ಮೊಂದಿಗಿರುತ್ತೇನೆ. ತಾವು ಮುಂದೆ ನಿಂತು ಜೀರ್ಣೋದ್ಧಾರ ಕಾಮಗಾರಿ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ದೇವಸ್ಥಾನ ಸಮಿತಿಯಲ್ಲಿ 1.35 ಕೋಟಿ ರೂ. ಅನುದಾನ ಲಭ್ಯವಿದೆ. ಇನ್ನೂ ಅವಶ್ಯಕತೆಯಿದ್ದಲ್ಲಿ ಶಾಸಕರ ನಿ ಧಿ, ಮುಜರಾಯಿ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆ ಹೀಗೆ ಯಾವುದಾದರೂ ಯೋಜನೆಯಡಿ ಅನುದಾನ ಒದಗಿಸಲಾಗುವುದು. ಹಣಕ್ಕೆ ಕೊರತೆಯಿಲ್ಲ. ಕೆಲಸ ಸರಿಯಾಗಿ ಆಗಬೇಕು ಎಂದು ಸಚಿವರು ತಿಳಿಸಿದರು.
ದೇವಸ್ಥಾನದ ಪ್ರವೇಶದ್ವಾರ, ಗೋಪುರ, ಕಲ್ಲುಗಳ ಬಳಕೆ, ಕಾಂಪೌಂಡ್ ಗೋಡೆ ಸೇರಿದಂತೆ ದೇವಸ್ಥಾನವನ್ನು ಇನ್ನಷ್ಟು ಆಕರ್ಷಕವಾಗಿಸಲು ಅಗತ್ಯವಿರುವ ಕೆಲಸ-ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ದೇವಸ್ಥಾನ ಸಮಿತಿಯ ಬಸವರಾಜ ದೇಶಮುಖ, ಡಾ| ಕಲ್ಲಪ್ಪ ಉಪ್ಪೆ, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ರವಿ ಮೀಸೆ, ಶರಣಪ್ಪ ಪಂಚಾಕ್ಷರಿ, ಸಂತೋಷ ಪೋಕಲವಾರ, ಪ್ರಕಾಶ ಅಲ್ಮಾಜೆ, ಬನ್ಸಿ ನಾಯಕ್, ಕೇರಬಾ ಪವಾರ್ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು, ಪುರೋಹಿತರು ಹಾಗೂ ಸಾರ್ವಜನಿಕರು ಸಭೆಯಲ್ಲಿದ್ದರು.