ಸಾಗರ: ತಾಲೂಕಿನ ಆನಂದಪುರದ ಜಾಮಿಯಾ ಮಸೀದಿಯಲ್ಲಿ ಮುಸಲ್ಮಾನರು ಪ್ರಾರ್ಥನೆ ನಂತರ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಅದರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಗಮನ ಸೆಳೆದ ಘಟನೆ ನಡೆದಿದೆ.
ಶುಕ್ರವಾರದ ಅಜಾನ್ ನಂತರ ಮಸೀದಿಯ ಧರ್ಮಗುರು ಮೌಲಾನಾ ಮುಫ್ತಿ ಸಫೀರುದ್ದೀನ್ ಪ್ರವಚನ ನೀಡಿದರು. ನಂತರ ಸಾಗರದ ವಕೀಲರಾದ ಮಹಮದ್ ಜಿಕ್ರಿಯಾ ಸಂವಿಧಾನ ರಚನೆಯಾದ ಸಂದರ್ಭ ಹಾಗೂ ಅದರ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಆಮೇಲೆ ಎಲ್ಲರೂ, ಭಾರತ ಪ್ರಜೆಗಳಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ವಾಗಿ ರೂಪಿಸುವ, ಭ್ರಾತೃತ್ವದ ಭಾವನೆ ಮೂಡಿಸುವ ದೃಢಸಂಕಲ್ಪ ಮಾಡಿದ್ದೇವೆ ಎಂಬ ಸಂವಿಧಾನದ ಪ್ರಸ್ತಾವ ಓದಿದರು.
ಮಸೀದಿ ಆವರಣದಲ್ಲಿ ಮುಸಲ್ಮಾನರು ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಸಂವಿ ಧಾನ ಕುರಿತಂತೆ ಅರಿವು ಪಡೆಯಲು ಮುಸಲ್ಮಾನರ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ರೀತಿಯ ಪರಿಪಾಠ ಬೆಳೆಯಬೇಕು ಎಂಬ ಸದುದ್ದೇಶ ಈ ಕಾರ್ಯಕ್ರಮದ ಹಿಂದೆ ಇದೆ ಎಂದು ಮಸೀದಿಯ ಮುಖಂಡರು ತಿಳಿಸಿದ್ದಾರೆ.
ಜಾಮಿಯಾ ಮಸೀದಿ ೧೬೩೨ರಲ್ಲಿ ಕೆಳದಿ ಅರಸ ವೀರಭದ್ರ ನಾಯಕರಿಂದ ನಿರ್ಮಾಣಗೊಂಡಿದೆ. ಆನಂದಪುರದ ಕೋಟೆಯನ್ನು ಬ್ರಿಟಿಷರು ವಶಪಡಿಸಿಕೊಂಡಿದ್ದರು. ವಿಷಯ ತಿಳಿದ ಟಿಪ್ಪು ಸುಲ್ತಾನ್ ತನ್ನ ಸೇನೆಯನ್ನು ಕಳುಹಿಸಿ ಕೋಟೆಯನ್ನು ಮರು ವಶಪಡಿಸಿಕೊಂಡ. ನಂತರ ಮಸೀದಿಗೆ ಬಂದು ಪ್ರಾರ್ಥನೆ ಸಲ್ಲಿಸಿದ. ಇದೆಲ್ಲವೂ ಇತಿಹಾಸದಲ್ಲಿ ದಾಖಲಾಗಿದೆ.
ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ಮೇಲೆ ನಿರ್ಬಂಧ ಹೇರುವ ಕೆಲಸ ನಡೆಯುತ್ತಿದೆ. ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡುವುದು ನಮ್ಮ ಉದ್ದೇಶ.
– ಮೌಲಾನಾ ಮುಫ್ತಿ ಸಫೀರುದ್ದಿನ್, ಧರ್ಮಗುರು, ಜಾಮಿಯಾ ಮಸೀದಿ