Advertisement

ಹೊಂಗನಸು, ಸದಾಶಯಗಳ ಖನಿ ನಮ್ಮ ಸಂವಿಧಾನ

11:40 PM Nov 25, 2022 | Team Udayavani |

ನಮ್ಮ ಭಾರತ ಸಂವಿಧಾನ ಕೇವಲ ವಿಧಿ ನಿಷೇಧಗಳ ನಿಘಂಟು ಅಷ್ಟೇ ಅಲ್ಲ; ಬದಲಾಗಿ ಸುಂದರ ಸೂರ್ಯೋದಯಗಳ ಬೆಳಕನ್ನು ಈ ನೆಲದಲ್ಲಿ ಸದಾ ಚೆಲ್ಲಲು ಶಕ್ತವಾದ ಸ್ಫೂರ್ತಿ ಚಿಲುಮೆ. ಹತ್ತು ಹಲವು ಮುತ್ತಿನಂಥ ಆಶಯಗಳನ್ನು ಒಡಲಲ್ಲಿ ಹೊತ್ತು, ಸ್ವತಂತ್ರ ಭಾರತದ ರಾಷ್ಟ್ರನೌಕೆಗೆ ಸದಾ ಪಥಗಾಮಿ ಎನಿಸಲು ಸಾಮರ್ಥ್ಯ ತುಂಬಿ ನಿಂತ ಎತ್ತರದ ದೀಪಸ್ಥಂಭವಿದು. ನಮ್ಮ ಸುತ್ತಮುತ್ತಲ ಹಲವು ದೇಶಗಳ ರಾಜ್ಯಾಂಗ ಘಟನೆಗಳು ಕುಸಿದು, ಪಲ್ಲಟವಾಗುತ್ತಿರುವ ಪ್ರಚಲಿತ ಇತಿಹಾಸದ ಮಧ್ಯೆ ಸ್ಥಿರತೆ ಹಾಗೂ ಕಾಲಾಧಾರಿತ ಸಂವಾದಿ ಸಂವಿಧಾನ ಎನಿಸಿ ನಮ್ಮ ರಾಜ್ಯಾಂಗ ಘಟನೆ ಮುಂದೆ ಸರಿಯುತ್ತಿದೆ. 2 ವರ್ಷ, 11 ತಿಂಗಳು, 18 ದಿನಗಳ ಸಂವಿಧಾನ ಸಭೆಯ ಅವಿರತ ಪ್ರಯತ್ನದ ಫ‌ಲಶ್ರುತಿಯಾಗಿ ಹೊರಹೊಮ್ಮಿದ ವಿಶ್ವದ ಅತ್ಯಂತ ಸುದೀರ್ಘ‌ ಸಂವಿಧಾನ ನಮ್ಮದು.

Advertisement

ಇದು ಅಂಗೀಕೃತಗೊಂಡ ದಿನವನ್ನೇ “ಸಂವಿಧಾನ ದಿನ’ ಎಂಬ ಮಾನ್ಯತೆಯೊಂದಿಗೆ ಆಚರಿಸಲ್ಪಡುತ್ತಿದೆ.
1947 ಆಗಸ್ಟ್‌ 14ರ ಮಧ್ಯರಾತ್ರಿ ಬ್ರಿಟಿಷ್‌ ಶಾಹಿತ್ವದಿಂದ ಭಾರತೀಯರಿಗೆ ಪರಾಭಾರೆಗೊಂಡ ಅಧಿಕಾರವನ್ನು ಪ್ರಪ್ರಥಮ ವಾಗಿ ಜನತೆಗೆ ಹಾಗೂ ಸರಕಾರಕ್ಕೆ ಸಮಸಮವಾಗಿ ಹಂಚಿದ ಶ್ರೇಯಸ್ಸು ಸಂವಿಧಾನದ ಪಾಲಿಗಿದೆ. ಜನಮಾನ್ಯರು ಮೂಲ ಭೂತ ಹಕ್ಕುಗಳನ್ನು ಯಥಾವತ್ತಾಗಿ ಅನುಭವಿಸಲಿ ಎಂಬ ಉದಾರ ತತ್ತ್ವವನ್ನು ಈ ಹೊತ್ತಗೆ ಪ್ರತಿಫ‌ಲಿಸುತ್ತದೆ. ಅದೇ ರೀತಿ ಮೂಲಭೂತ ಕರ್ತವ್ಯಗಳನ್ನು ನಮ್ಮಿà ವಿಶಾಲ ಜನ ಸಮುದಾಯ ನಿರ್ವಹಿಸಿ, ರಾಷ್ಟ್ರದ ಪ್ರಗತಿ ಹಾಗೂ ರಕ್ಷಣೆಯ ಕಾರ್ಯದಲ್ಲಿ ಯಶಸ್ಸು ಕಾಣುವಂತಾಗಲೀ ಎಂಬ ಆಶಯವೂ ಇಲ್ಲಿ ತುಂಬಿ ನಿಂತಿದೆ.

ಈ ನೆಲದ ಸಂಪೂರ್ಣ ಪ್ರಭುತ್ವ ಸಂಪನ್ನತೆ, ಜನತಂತ್ರ ಸತ್ವ ಮತ್ತುತತ್ತ್ವ ಹಾಗೂ ಗಣರಾಜ್ಯ ಪದ್ಧತಿಗೆ ಚ್ಯುತಿ ಒದಗದಿರಲಿ ಎಂಬ ವಿಚಾರವನ್ನು ಸಂವಿಧಾನ ತನ್ನ ಪ್ರಸ್ತಾವನೆಯಲ್ಲಿಯೇ ಚಿಮ್ಮಿಸುತ್ತದೆ. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯದಿಂದ ಯಾರು ವಂಚಿತರಾಗದಿರಲಿ; ಯೋಚನೆ, ಅಭಿವ್ಯಕ್ತತೆ, ನಂಬಿಕೆ ಹಾಗೂ ಆರಾಧನಾ ಸ್ವಾತ್ರಂತ್ರ್ಯ ಎಂಬುದು ಈ ವಿಶಾಲ ಜನಸಮುದಾಯದ ಬದುಕಿನ ಬೆಳಕಾಗಲಿ ಎಂಬ ಆಶಯವನ್ನೂ ಪ್ರಸ್ತಾವನೆ ಪಡೆ ನುಡಿಯುತ್ತಿದೆ. ಅದೇ ರೀತಿ ಅಂತಸ್ತು ಹಾಗೂ ಅವಕಾಶಗಳ ಸಮಾನತೆ, ವ್ಯಕ್ತಿ ಗೌರವ, ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆ ನಿರಂತರವಾಗಿ ಕಾಪಿಡುವಂತಾಗಲಿ ಎಂಬ ಶುಭಾಶಯಗಳ ಗೊಂಚಲೇ ನಮ್ಮ ಸಂವಿಧಾನದ ಪೀಠಿಕೆಯಲ್ಲಿ ತೊನೆಯುತ್ತಿದೆ.

ವಿಸ್ತಾರದಲ್ಲಿ ಏಳನೆಯ ಸ್ಥಾನದ ಹಾಗೂ ಜನಸಂಖ್ಯೆಯಲ್ಲಿ ಪ್ರಪ್ರಥಮ ಪ್ರಜಾಪ್ರಭುತ್ವ ದೇಶ ಎನಿಸಿದ ನಮ್ಮದು ಕೇವಲ ಏಕದ್ವಾರದ “ರಾಜ್ಯಗಳ ಒಕ್ಕೂಟ’ವಿದು ಎಂದು ಸಾರಿ ನಿರ್ಗಮನ ದಾರಿಯನ್ನು ಎಲ್ಲ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ವಕಾಲಕ್ಕೂ 1ನೇ ವಿಧಿಯ ಮೂಲಕ ಮುಚ್ಚಿದ ಶ್ರೇಯಸ್ಸು ನಮ್ಮ ಸಂವಿಧಾನ ಹೊಂದಿದೆ. ಮೇಲ್ನೋಟಕ್ಕೆ ಕೇವಲ 470ವಿಧಿಗಳ ಒಂದು ಕಟ್ಟುನಿಟ್ಟಿನ ನಿಘಂಟು ಎಂಬುದಾಗಿ ನಮ್ಮ ಸಂವಿಧಾನ ಕಂಡರೂ ಅದರ ಒಳಹೊಕ್ಕು ಅರ್ಥೈಸಿದಾಗ ನೂರಾರು ಹೊಂಗನಸುಗಳ, ಸದಾಶಯಗಳ ಖನಿ ಇದಾಗಿದೆ. ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರಕಾರಗಳ ಸಹಕಾರೀ ರಾಜ್ಯ ಪದ್ಧತಿಯ (Cooperative Federalism) ಸುಂದರ ಆಶಯ ಇಲ್ಲಿ ಟಿಸಿಲೊಡೆದಿದೆ. ಒಂದೊಮ್ಮೆ ಕೇಂದ್ರ- ರಾಜ್ಯಗಳ ಸ್ಪರ್ಧಾತ್ಮಕ ಸಂಯುಕ್ತ ರಾಜ್ಯ ಪದ್ಧತಿ (Competitive Federalism)ಆದರೂ ಒದಗಿ ಬರಲಿ; ಆದರೆ ಪಕ್ಷ ಭೇದದ “ಪರಸ್ಪರ ತಿಕ್ಕಾಟದ ಸಂಯುಕ್ತ ರಾಜ್ಯ ಪದ್ಧತಿ’ (Conflicting Federalism) ಮುಂಬರುವ ದಿನಗಳಲ್ಲಿ ಮೂಡದಿರಲಿ ಎಂಬ ಸವಿಗನಸನ್ನು 1949ರಲ್ಲಿ ಅಂಗೀಕರಿಸಿದ ಈ ನಮ್ಮ ಸಂವಿಧಾನ ಜಿನುಗಿಸುತ್ತಿದೆ.

ರಾಜ್ಯನಿರ್ದೇಶನ ತತ್ತ್ವಗಳನ್ನು (Directive Principles of state Policy) ತುಂಬಿ ನಿಂತ 4ನೇ ವಿಭಾಗ ನಮ್ಮ ಸಮಗ್ರ ಸಂವಿಧಾನದ ಮೇರು ವೈಶಿಷ್ಟé. ಐರಿಷ್‌ ಸಂವಿಧಾನವೊದನ್ನು ಹೊರತುಪಡಿಸಿ, ವಿಶ್ವದ ಯಾವುದೇ ಸಂವಿಧಾನದಲ್ಲಿ ಕಂಡು ಬರದ “ಕಲ್ಯಾಣ ರಾಜ್ಯ’ ಅಥವಾ “ಸುಖೀರಾಜ್ಯ’ ಯಾ “ರಾಮರಾಜ್ಯ’ದ (Welfare State) ಕನಸನ್ನು ಎಳೆ ಎಳೆಯಾಗಿ ಬಿತ್ತರಿಸಿದ “ಅಮೃತ ಬಿಂದು’ಗಳನ್ನೇ ಹೊಂದಿದ ಸುಂದರ ವಿಭಾಗವಿದು. ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷ ಯಾವುದೇ ಇರಲಿ, ಪ್ರಧಾನಿ ಅಥವಾ ಮುಖ್ಯಮಂತ್ರಿ ಪಟ್ಟ ಯಾರೇ ಹೊಂದಿರಲಿ, ಜನಪ್ರತಿನಿಧಿಗಳ ಲಕ್ಷ್ಯ ಜನ ಸಮುದಾಯದ ಸಾಮೂಹಿಕ ಹಾಗೂ ವೈಯಕ್ತಿಕ ಬದುಕಿಗೆ ಪೂರಕ ಸ್ಪಂದನ, ಇಂಧನ ಸದಾ ಒದಗಿಸುವುದೇ ಆಗಿರಲಿ… ಈ ಸದಾಶಯಗಳ ಹೂಮಾಲೆಯನ್ನೇ ಸಂವಿಧಾನ ಜನಕರು ಇಲ್ಲಿ ಪೋಣಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ, ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಸಾಮಾಜಿಕ ದುರ್ಬಲ ವರ್ಗದವರಿಗೆ ಸಹಾಯ ಹಸ್ತ ನೀಡುವ, ಕೃಷಿ, ಗೃಹ ಕೈಗಾರಿಕೆ, ಗ್ರಾಮಾಭ್ಯುದಯಕ್ಕೆ ಒತ್ತು ನೀಡುವ, ಸಮಾನ ನಾಗರಿಕ ಸಂಹಿತೆ, ಗೋವಧೆ ನಿಷೇಧ, ಪ್ರಾಚ್ಯವಸ್ತು, ಸ್ಮಾರಕಗಳ ಸಂರಕ್ಷಣೆ, ವಿಶ್ವ ಶಾಂತಿಗಾಗಿ ನಿರಂತರ ಯತ್ನ -ಹೀಗೆ ಸಾಲು ಸಾಲು ವಿಧಿಗಳು ಶುಭದೊಸುಗೆಯ ಶುಭ್ರ ಪಂಕ್ತಿಗಳು.

Advertisement

ಭಾರತ ಸಂವಿಧಾನದ ಅಂತರ್ಗತ ಆಶಯಗಳೆಡೆಗೆ ಬೆಳಕು ಚೆಲ್ಲಿದಾಗ ಕೇಂದ್ರ, ರಾಜ್ಯ, ಸ್ಥಳೀಯ ಸರಕಾರಗಳ ಬಗೆಗೆ ಲಂಬ ಸೂತ್ರ ಎಳೆದಂತೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಬಗೆಗೂ ಲಕ್ಷ್ಮಣ ರೇಖೆಯನ್ನು ಸುಸ್ಪಷ್ಟವಾಗಿ ಮೂಡಿಸಿದೆ. ಅಧಿಕಾರ ವಿಭಜನಾ ಸೂತ್ರ(Theory of Separation Powers) ಜತೆಜತೆಗೇ; ನಿಯಂತ್ರಣ ಹಾಗೂ ಸಮತೋಲನ ಸಿದ್ಧಾಂತ(Theory of checks and Balances) ದ ಮರ್ಮವನ್ನೂ ಪೋಣಿಸಿದ ಬಗೆ ಅದ್ಭುತ. ಈ ಮೂರು ಅಂಗಗಳೂ ತಂತಮ್ಮ ಅಧಿಕಾರ ಹಾಗೂ ಕರ್ತವ್ಯಗಳ ವ್ಯಾಪ್ತಿಯಾಚೆಗೆ ಕಾಲಿರಿಸಿ “ತುಟಿ ಮೀರಿದ ಹಲ್ಲಿನಂತಾಗದಿರಲಿ’ ಎಂಬ ಉತ್ತಮ ನಿಯುಕ್ತಿಯನ್ನೂ ಇದು ಒಡಲಲ್ಲಿ ಸೇರಿಸಿಕೊಂಡಿದೆ. ಸಮಗ್ರ ರಾಷ್ಟ್ರದ ಬದುಕಿನಲ್ಲಿ ಸ್ವತಃ ರಾಷ್ಟ್ರಪತಿ, ಶಾಸಕಾಂಗ, ನ್ಯಾಯಾಂಗ, ಪ್ರಧಾನಿ ಹೀಗೆ ಎಲ್ಲರೂ ಸಂವಿಧಾನದ ವಿಧಿಗಳನ್ನು ಗೌರವಿಸತಕ್ಕದ್ದು ಎಂಬ ಧ್ವನಿ ಇದು ತುಂಬಿಕೊಡಿದೆ. ತನ್ಮೂಲಕ ಉತ್ತಮ, ಕಾನೂನುಬದ್ಧ, ನ್ಯಾಯಯುತ ರಾಜಕೀಯದ ಗಂಗೆ ನಿರಂತರ ಹರಿಯಲಿ, ಮಾಲಿನ್ಯ ವಿರಹಿತವಾಗಲಿ ಎಂಬ ಚಿಂತನೆ ನಮ್ಮಿà ಹೊತ್ತಗೆ ಹೊತ್ತುನಿಂತಿದೆ.

ನಮ್ಮ ಸಂವಿಧಾನ ರಾಷ್ಟ್ರ ರಾಜಕೀಯಕ್ಕೆ ಸಾರ್ವಕಾಲಿಕ ಭದ್ರ ಬುನಾದಿಯಂತಿದೆ. ಪರಸ್ಪರ ಅಧಿಕಾರ ವಿಭಜನೆಯಲ್ಲಿ ಮಕ್ಕಳಿಗೆ ಉಣಬಡಿಸುವ ತಾಯಿಯ ಪಾತ್ರ ಹೊಂದಿದೆ. ಇದು ನೂರು ಪ್ರತಿಶತ ತುಂಬಿದ ಅಧಿಕಾರ ಸರೋವರ (Power of Reservoir)ತನ್ನ ಕಾಲುವೆಗಳ ಮೂಲಕ ಸಮಗ್ರ ನೀರುಣಿಸುವ ಜಲತಾಣದಂತಿದೆ. ನಮ್ಮಿ ಸಂವಿಧಾನ ನಿಯಮ ಬಾಹಿರ ಆಟ (Foul Game)ದ ಸಾಧ್ಯತೆಗೆ ತಡೆಯಿರಿಸಿ, ನಿಯಮ ಬದ್ಧ ಕ್ರೀಡೆ (Fair Game) ರಾಜಕೀಯ ಅಂಗಳದಲ್ಲಿ ನಡೆಯು ವಂತಾಗಲೀ ಎಂಬ ಸದುದ್ದೇಶದ ಖನಿಯಂತಿದೆ. ಒಟ್ಟಿನಲ್ಲಿ ರಾಜಕೀಯ ತಾಂತ್ರಿಕತೆಯ (Political Engineering) ಪಾರಮ್ಯ ಹೊಂದಿ, ಉನ್ನತ ಸ್ತರದ, ಸದಾಶಯಗಳ ಸೌರಭ ಸದಾಕಾಲ ಸೂಸುವ ಘನತೆವೆತ್ತ ಮೂಲದಾಖಲೆ ನಮ್ಮಿ ಸಂವಿಧಾನ. ಅದೇ ರೀತಿ ರಾಷ್ಟದ ಬದುಕಿನಲ್ಲಿ ಏರುಪೇರು ತಲೆದೋರಿದಾಗ ತುರ್ತು ಪರಿಸ್ಥಿತಿ (Emergency) ಘೋಷಣೆಗೂ ಕದ ತೆರೆದಿದೆ. ಆದರೆ ಅದನ್ನು ಔಷಧದ ರೂಪದಲ್ಲಿ ವಿನಾ ಆಹಾರದ ತೆರದಲ್ಲಿ ಸೇವಿಸಬಾರದು ಎಂಬ ಮುನ್ನೆಚ್ಚರಿಕೆಗೂ ಸಂವಿಧಾನ ಮುಂದಾಗಿದೆ. ಡಾ| ಬಿ.ಆರ್‌.ಅಂಬೇಡ್ಕರ್‌ ಉಲ್ಲೇಖಿಸಿದಂತೆ “ಸಾಮೂಹಿಕ ವಿಚಾರಧಾರೆ ಹಾಗೂ ಅನುಭವಗಳ ಮೂರ್ತ ಸ್ವರೂಪ’ವಾಗಿ ನಮ್ಮ ಸಂವಿಧಾನ ಮೂಡಿ ಬಂದಿದೆ. ಆದರೂ ಕಾಲಕಾಲಕ್ಕೆ ಅನುಕೂಲವಾದ ತಿದ್ದುಪಡಿ ಕೀಲಿ ಕೈಯನ್ನು 368ರ ವಿಧಿಯನ್ವಯ ನೀಡಿದ ಅದ್ಭುತ ಮೂಲ ಆಕಾರ ನಮ್ಮಿà ಸಂವಿಧಾನ.

ಉದಾರ ತತ್ತ್ವ
ದೇಶ ಸ್ವತಂತ್ರಗೊಂಡ ಬಳಿಕ ಅಧಿಕಾರವನ್ನು ಪ್ರಪ್ರಥಮ ವಾಗಿ ಜನತೆ ಹಾಗೂ ಸರಕಾರಕ್ಕೆ ಸಮ ಸಮವಾಗಿ ಹಂಚಿದ ಶ್ರೇಯಸ್ಸು ಸಂವಿಧಾನದ ಪಾಲಿಗಿದೆ. ಜನಮಾನ್ಯರು ಮೂಲಭೂತ ಹಕ್ಕುಗಳನ್ನು ಯಥಾವತ್ತಾಗಿ ಅನುಭವಿಸಲಿ ಎಂಬ ಉದಾರ ತತ್ತ್ವವನ್ನು ಈ ಹೊತ್ತಗೆ ಪ್ರತಿಫ‌ಲಿಸುತ್ತದೆ. ಅದೇ ರೀತಿ ಮೂಲಭೂತ ಕರ್ತವ್ಯಗಳನ್ನು ನಮ್ಮಿ ವಿಶಾಲ ಜನ ಸಮುದಾಯ ನಿರ್ವಹಿಸಿ, ರಾಷ್ಟ್ರದ ಪ್ರಗತಿ ಹಾಗೂ ರಕ್ಷಣೆಯ ಕಾರ್ಯದಲ್ಲಿ ಯಶಸ್ಸು ಕಾಣುವಂತಾಗಲೀ ಎಂಬ ಆಶಯವೂ ಇಲ್ಲಿ ತುಂಬಿ ನಿಂತಿದೆ. ನಮ್ಮದು ಕೇವಲ ಏಕದ್ವಾರದ “ರಾಜ್ಯಗಳ ಒಕ್ಕೂಟ’ವಿದು ಎಂದು ಸಾರಿ ನಿರ್ಗಮನ ದಾರಿಯನ್ನು ಎಲ್ಲ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ವಕಾಲಕ್ಕೂ 1ನೇ ವಿಧಿಯ ಮೂಲಕ ಮುಚ್ಚಿದ ಶ್ರೇಯಸ್ಸು ನಮ್ಮ ಸಂವಿಧಾನ ಹೊಂದಿದೆ. ಮೇಲ್ನೋಟಕ್ಕೆ ಕೇವಲ 470ವಿಧಿಗಳ ಒಂದು ಕಟ್ಟುನಿಟ್ಟಿನ ನಿಘಂಟು ಎಂಬುದಾಗಿ ನಮ್ಮ ಸಂವಿಧಾನ ಕಂಡರೂ ಅದರ ಒಳಹೊಕ್ಕು ಅರ್ಥೈಸಿದಾಗ ನೂರಾರು ಹೊಂಗನಸು, ಸದಾಶಯಗಳ ಖನಿ ಇದಾಗಿದೆ. ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರಕಾರಗಳ ಸಹಕಾರೀ ರಾಜ್ಯ ಪದ್ಧತಿಯ ಸುಂದರ ಆಶಯ ಇಲ್ಲಿ ಟಿಸಿಲೊಡೆದಿದೆ.

-ಡಾ| ಪಿ. ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next