ಜಮಖಂಡಿ: ಭಾರತದ ಸಂವಿಧಾನದ ಪ್ರಸ್ತಾವನೆ ಜತೆಗೆ 11 ಮೂಲಭೂತ ಹಕ್ಕುಗಳು, 21 ಉಪವಿಧಿಗಳು, 232 ಮುಖ್ಯವಿಧಿಗಳನ್ನು ಆಂಗ್ಲಭಾಷೆಯಲ್ಲಿ ಸಂವಿಧಾನದ 232 ವಿಧಿಗಳನ್ನು 25 ನಿಮಿಷಗಳಲ್ಲಿ ಕಂಠಪಾಠ ಮೂಲಕ ಪೂರ್ಣಗೊಳಿಸಿದ 8ನೇ ತರಗತಿ ವಿದ್ಯಾರ್ಥಿನಿ ಜೆ. ಅಮೋಘವರ್ಷಿಣಿ ದಿ ಬ್ರಿಟಿಷ್ ವರ್ಲ್ಡ್ ರೆಕಾರ್ಡ್ ಲಂಡನ್ ವಿಶ್ವದಾಖಲೆ ಪುಸ್ತಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾಳೆ.
ಭಾರತದ ಸಂವಿಧಾನದ ಅತೀ ಹೆಚ್ಚು ವಿಧಿಗಳನ್ನು ಕಂಠಪಾಠ ಮೂಲಕ ವಿವರಣೆ ನೀಡಿದ 12 ವಯಸ್ಸಿನ ಅತೀ ಕಿರಿಯ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಾಳೆ. ಬಾಲಕಿಯ ಸಾಧನೆ ಗುರುತಿಸಿ ವಿಶ್ವದಾಖಲೆಗೆ ಸೇರ್ಪಡೆಗೊಳಿಸಿದ ದಿ ಬ್ರಿಟಿಷ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣಪತ್ರ, ಪದಕ, ಫ್ಲಯರ್ ಹಾಗೂ ಟ್ರೋಫಿ ನೀಡಿ ಗೌರವಿಸಿದ್ದಾರೆ.
ಸಣ್ಣ ವಯಸ್ಸಿನಿಂದಲೇ ಅತ್ಯಂತ ಪ್ರತಿಭಾನ್ವಿತೆ ಜೆ.ಅಮೋಘವರ್ಷಣಿ ಕಲಿಕೆ, ಕ್ರೀಡೆ, ಭಾಷಣ, ಚಿತ್ರಕಲೆ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿಯೊಂದಿಗೆ ವಿಶೇಷ ಸಾಧನೆಗೈದು ಹಲವಾರು ಬಹುಮಾನ ಪಡೆದುಕೊಂಡಿದ್ದಾಳೆ.ಪ್ರಮಖ ದಿನಾಚರಣೆ ಸಂದರ್ಭದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಭಾಷಣ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದು ವಿಶ್ವಸಾಧನೆಗೆ ಪ್ರೇರಣೆಯಾಗಿದೆ.
ಬಾಲಕಿಯ ತಂದೆ ಡಾ| ಜೈಪ್ರಕಾಶ ಹುನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ತಾಯಿ ಡಾ| ಗಾಯತ್ರಿ ತನ್ನ ಇಬ್ಬರು ಮಕ್ಕಳ ಪ್ರತಿಭೆಗೆ ಪೂರಕ ಸಿದ್ಧತೆ, ಮಾರ್ಗದರ್ಶನದಲ್ಲಿ ತೊಡಗಿಕೊಂಡಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಆಲೂರು ಗ್ರಾಮದ ಡಾ|ಜೈಪ್ರಕಾಶ ಹಾಗೂ ಡಾ|ಗಾಯತ್ರಿ ದಂಪತಿ ಪ್ರಸ್ತುತ ಜಮಖಂಡಿ ನಗರದ ಮೈಗೂರು ಕಾಲೋನಿ ನಿವಾಸಿಗಳು. ಪುತ್ರಿ ಅಮೋಘವರ್ಷಿಣಿ ಜೆ. ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ಪಬ್ಲಿಕ್ ಸ್ಕೂಲ್‌ನಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲಕಿ ಸಹೋದರರಾದ ಜೆ.ಮೌರ್ಯವರ್ಧನ ಒಂದು ವರ್ಷ ಒಂಬತ್ತು ತಿಂಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮೂರು ಸಲ ದಾಖಲೆ ನಿರ್ಮಿಸಿದ್ದಾರೆ.