Advertisement

ಸಂವಿಧಾನವೇ ಭಾರತದ ಧರ್ಮ ಗ್ರಂಥ

11:49 AM Apr 15, 2022 | Team Udayavani |

ಬೆಳಗಾವಿ: ಜಾತಿ-ಧರ್ಮದ ಭೇದವಿಲ್ಲದೆ ದೇಶದ ಎಲ್ಲ ವರ್ಗಗಳ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಿದ ಕೀರ್ತಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಸಲ್ಲುತ್ತದೆ. ಅಂಬೇಡ್ಕರ ರಚಿಸಿದ ಸಂವಿಧಾನ ನಮ್ಮ ದೇಶದ ಧರ್ಮಗ್ರಂಥವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ 131ನೇ ಜನ್ಮದಿನಾಚರಣೆ ನಿಮಿತ್ತ ಗುರುವಾರ ಡಾ. ಅಂಬೇಡ್ಕರ್‌ ಉದ್ಯಾನದಲ್ಲಿರುವ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಅವರು ತುಳಿತಕ್ಕೊಳಗಾದ ಜನರಿಗೆ ಸಂವಿಧಾನದ ಮೂಲಕ ನ್ಯಾಯವನ್ನು ಒದಗಿಸಿದ್ದಾರೆ. ಸರ್ಕಾರಿ ಸೌಲಭ್ಯ ಪಡೆದುಕೊಂಡು ಎಲ್ಲರೂ ಶಿಕ್ಷಣ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯವಿದೆ. ಹೀಗಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.

ಅಂಬೇಡ್ಕರ ಅವರ ಸಾಧನೆ ಅಥವಾ ಜ್ಞಾನದ ಬಗ್ಗೆ ವರ್ಣನೆ ಮಾಡುವುದೆಂದರೆ ಸಮುದ್ರದಲ್ಲಿ ಇರುವ ಹನಿ ನೀರಿನ ಬಗ್ಗೆ ಮಾತನಾಡಿದಂತೆ ಆಗುತ್ತದೆ. ಅವರ ಜ್ಞಾನ ಅಷ್ಟೊಂದು ಅಗಾಧವಾದುದು ಎಂದು ಸಚಿವ ಕಾರಜೋಳ ಬಣ್ಣಿಸಿದರು.

ಶಾಸಕ ಸತೀಶ ಜಾರಕಿಹೊಳಿ ಅವರು, ಪ್ರತಿ ವರ್ಷವೂ ಅಂಬೇಡ್ಕರ ಜಯಂತಿ ವೇಳೆ ಹೊಸ ಹೊಸ ವಿಚಾರಗಳ ಕುರಿತು ಚಿಂತನ-ಮಥನ ನಡೆಯಬೇಕು. ಹಿಂದುಳಿದ ವರ್ಗದ ಜನರು ಶಿಕ್ಷಣದ ಜತೆ ಜತೆಗೆ ಆರ್ಥಿಕವಾಗಿ ಸಬಲರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರಬೇಕು. ಅಂಬೇಡ್ಕರ್‌ ಜಯಂತಿ ಒಂದು ದಿನಕ್ಕೆ ಸೀಮಿತಗೊಳಿಸದೇ ಪ್ರತಿದಿನ ಮನೆಯಲ್ಲಿ ಅಂಬೇಡ್ಕರ್‌ ಚಿಂತನೆ ಮತ್ತು ವಿಚಾರಧಾರೆಗಳ ಮಂಥನ ಮಾಡಬೇಕು ಎಂದರು.

Advertisement

ಶಾಹು ಮಹಾರಾಜ್‌-ಬುದ್ಧ ಪ್ರತಿಮೆ ಸ್ಥಾಪನೆಗೆ ಮನವಿ: ಶಾಹು ಮಹಾರಾಜರು ಹಾಗೂ ಬುದ್ಧನ ಪ್ರತಿಮೆ ಸ್ಥಾಪನೆಗೆ ಹಿಂದಿನ ಸರ್ಕಾರದಲ್ಲಿ ಅನುದಾನ ಮೀಸಲಿಡಲಾಗಿತ್ತು. ಈ ಪ್ರತಿಮೆಗಳ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸತೀಶ ಮನವಿ ಮಾಡಿಕೊಂಡರು.

ಶಾಸಕ ಅನಿಲ್‌ ಬೆನಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಬಾಸಾಹೇಬರು ಎರಡು ಬಾರಿ ಬೆಳಗಾವಿಗೆ ಭೇಟಿ ನೀಡಿರುವುದು ಹೆಮ್ಮೆಯ ಸಂಗತಿ. ಅಂಬೇಡ್ಕರ್‌ ವಾಸವಾಗಿದ್ದ ಕಟ್ಟಡವನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿಕೊಂಡರು.

ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಕುರಿತು ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್‌ ರಚಿಸಿದ ಕಿರುಹೊತ್ತಿಗೆಯನ್ನು ಸಚಿವ ಗೋವಿಂದ ಕಾರಜೋಳ ಬಿಡುಗಡೆ ಮಾಡಿದರು.

ಸಂಸದರಾದ ಮಂಗಲ ಅಂಗಡಿ, ಪ್ರಾದೇಶಿಕ ಆಯುಕ್ತ ಆಮ್ಲಾನ್‌ ಆದಿತ್ಯ ಬಿಸ್ವಾಸ್‌, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್‌ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಮುಖಂಡರಾದ ಮಲ್ಲೇಶಿ ಚೌಗಲೆ ಇತರರು ಇದ್ದರು ಇದಕ್ಕೂ ಮುಂಚೆ ಸಚಿವ ಗೋವಿಂದ ಕಾರಜೋಳ ಹಾಗೂ ಗಣ್ಯರು ಬುದ್ಧವಿಹಾರಕ್ಕೆ ಭೇಟಿ ನೀಡಿದರು. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಇತರರು ಇದ್ದರು. ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಅಂಬೇಡ್ಕರ್‌ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next