Advertisement

Court: ನ್ಯಾಯಾಲಯಕ್ಕೆ ಸಂವಿಧಾನವೇ ಧರ್ಮ: ಹೈಕೋರ್ಟ್‌

10:15 AM Jan 05, 2024 | Team Udayavani |

ಬೆಂಗಳೂರು: “ನ್ಯಾಯಾಲಯಕ್ಕೆ ಪ್ರತ್ಯೇಕ ಧರ್ಮ ಎಂಬುದು ಇಲ್ಲ; ಸಂವಿಧಾನವೇ ನ್ಯಾಯಾಲಯಕ್ಕೆ ಧರ್ಮ, ನಮ್ಮ ಸಂವಿಧಾನವು ಜಾತ್ಯತೀತತೆ ಅಳವಡಿಸಿಕೊಂಡಿದೆ. ಅದನ್ನು ಮಾತ್ರ ಇಲ್ಲಿ ಪಾಲಿಸಲಾಗುತ್ತದೆ’ ಎಂದು ಹೈಕೋರ್ಟ್‌ ಹೇಳಿದೆ.

Advertisement

ಸ್ಥಳೀಯ ದೇವಾಲಯವೊಂದಕ್ಕೆ ರಸ್ತೆ ನಿರ್ಮಿಸಿಕೊಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬೀದರ್‌ನ ಸಾಮಾಜಿಕ ಕಾರ್ಯಕರ್ತ ಗುರುನಾಥ ವದ್ದೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮೌಖೀಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೇವಸ್ಥಾನಕ್ಕೆ ರಸ್ತೆ ಇಲ್ಲ. ರಸ್ತೆ ನಿರ್ಮಿಸಿಕೊಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು. ಆಗ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಿಕೊಡಲು ನ್ಯಾಯಾಲಯ ಹೇಗೆ ನಿರ್ದೇಶನ ನೀಡಬೇಕು. ಖಾಸಗಿ ಜಾಗದಲ್ಲಿ ದೇವಸ್ಥಾನ ಇದ್ದಾಗ ನಾವು ಹೇಳಲು ಬರುವುದಿಲ್ಲ ಎಂದಿತು. ಅದಕ್ಕೆ ದೇವಸ್ಥಾನ ಸರ್ಕಾರಿ ಜಾಗದಲ್ಲಿ ಕಟ್ಟಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.

ಅದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಯವರು, “ಸರ್ಕಾರಿ ಜಾಗದಲ್ಲಿ ದೇವಸ್ಥಾನ ಕಟ್ಟಲಾಗಿದೆಯೇ? ಇದು ಸುಪ್ರೀಂಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆ. ಸರ್ಕಾರಿ ಜಾಗದಲ್ಲಿ ದೇವಸ್ಥಾನ ಕಟ್ಟಿದವರು ಯಾರು? ಅದಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಮೊದಲು ಹೇಳಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಸರ್ಕಾರಿ ಜಾಗದಲ್ಲಿ ಕಟ್ಟಿರುವ ದೇವಾಲಯವನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ನಿರ್ದೇ ಶನ ನೀಡಲಾಗುವುದು ಎಂದು ಅರ್ಜಿದಾರರ ವಕೀಲರಿಗೆ ಹೇಳಿತು.

ಆಗ, ಅದು ಹಿಂದೂ ದೇವಾಲಯ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ಅದಕ್ಕೆ “ನಾವು ಯಾವುದೇ ಧರ್ಮದ ವಿರುದ್ಧ ಇಲ್ಲ; ಅಂತಹ ಭಾವನೆ ನಿಮಗೆ ಬೇಡ; ನ್ಯಾಯಾಲಯಕ್ಕೆ ಅದರದ್ದೆ ಪ್ರತ್ಯೇಕ ಧರ್ಮ ಎಂಬುದು ಇಲ್ಲ. ಜಾತ್ಯತೀತತೆಯನ್ನು ಅಳವಡಿಸಿಕೊಂಡಿರುವ ಸಂವಿಧಾನವೇ ನ್ಯಾಯಾಲಯದ ಧರ್ಮ, ಅದನ್ನು ಮಾತ್ರ ಇಲ್ಲಿ ಪಾಲಿಸಲಾಗುತ್ತದೆ ಎಂದು ಹೇಳಿದರು.

Advertisement

ಸರ್ಕಾರದ ಜಾಗದಲ್ಲಿ ಕಟ್ಟಿರುವ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಿಕೊಡಲು ಹೇಳುವ ಮೂಲಕ ನ್ಯಾಯಾಲಯ ಉಡುಗೊರೆ ನೀಡಬೇಕೇ? ಹಾಗೇನಾದರೂ ನ್ಯಾಯಾಲಯ ಮಾಡಿದರೆ ದೊಡ್ಡ ಪ್ರಮಾದ ಎಸಗಿದಂತೆ ಆಗಲಿದೆ. ದೇವರ ಅನುಗ್ರಹ ದಿಂದ ನ್ಯಾಯಾಲಯ ಅದನ್ನು ಮಾಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.

ನಮ್ಮದು ಬಹು ಧರ್ಮಗಳ ದೇಶ: ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌ .ದೀಕ್ಷಿತ್‌, ನಾಳೆ ಜೊರಾಷ್ಟ್ರೀಯನ್‌ ಒಬ್ಬರು ಬಂದು ತಮ್ಮ ಪ್ರಾರ್ಥನಾ ಸ್ಥಳಕ್ಕೆ ರಸ್ತೆ ನಿರ್ಮಿಸಿಕೊಡುವಂತೆ ಕೇಳಬಹುದು, ಮತ್ತೂಂದು ದಿನ ಮಸೀದಿಗೆ ರಸ್ತೆ ಬೇಕು ಎಂದು ಇನ್ನೊಂದು ಧರ್ಮದವರು ಕೇಳಬಹುದು. ನಮ್ಮದು ಬಹು ಧರ್ಮಗಳ ದೇಶ. ಇಲ್ಲಿ ಹಲವು ಧಾರ್ಮಿಕ ಆರಾಧನಾಲಯಗಳಿವೆ. ಹಾಗೆಂದು ಸರ್ಕಾರ ಬಜೆಟ್‌ನ ಹಣವನ್ನು ಧಾರ್ಮಿಕ ಆರಾಧಾನಾಲಯಗಳಿಗೆ ರಸ್ತೆ ನಿರ್ಮಿಸಲು ಖರ್ಚು ಮಾಡಿದರೆ, ಬೇರೆ ಅಭಿವೃದ್ದಿ ಚಟುವಟಿಕೆಗಳು ನಡೆಯವುದು ಹೇಗೆ ಎಂದು ಪ್ರಶ್ನಿಸಿದರು.

ಅಲ್ಲದೇ, ಅಕ್ರಮ ಮಾಡಿರುವುದಕ್ಕೆ ಕಾನೂನಿನ ಮುದ್ರೆ ಒತ್ತಿಸಿಕೊಳ್ಳಲು ಬಯಸುತ್ತಿದ್ದೀರಿ ಎಂದಾದರೆ ಖಂಡಿತ ನಾವು ಅದನ್ನು ಮಾಡುವುದಿಲ್ಲ. ಇದು ಸರ್ಕಾರದ ಭೂಮಿ ಎಂದು ತೋರಿಸಿ, ಅದರ ತೆರವಿಗೆ ನಿರ್ದೇಶನ ನೀಡಲಾಗುತ್ತದೆ ಎಂದು ಹೇಳಿದರು.

ಕೊನೆಗೆ ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ವಾಪಸ್‌ ಪಡೆಯವುದಾಗಿ ಹೇಳಿದ್ದಕ್ಕೆ ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next