ಮೈಸೂರು: ರಾಜ್ಯದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಅಂಬೇಡ್ಕರ್ ಸಂವಿಧಾನ ಜಾಥಾ ಅಲ್ಲ. ಅದು ಕಾಂಗ್ರೆಸ್ ಪ್ರೇರಿತ ಸಂವಿಧಾನ ಜಾಥಾ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಹದೇವಪ್ಪರ ಸಂವಿಧಾನ ಜಾಥಾ. ಐಕ್ಯತಾ ಸಮಾವೇಶದಲ್ಲಿ ಸಿದ್ದರಾಮಯ್ಯ ಆವೇಶಪೂರಿತ ಭಾಷಣ ಮಾಡಿದ್ದು ಸಂವಿಧಾನ ಜಾಗೃತಿ ಜಾಥಾನಾ? ಸಂವಿಧಾನ ಆಪತ್ತಿನಲ್ಲಿಲ್ಲ, ಕಾಂಗ್ರೆಸ್ ಪಕ್ಷವೇ ಆಪತ್ತಿನಲ್ಲಿದೆ. ಕೇವಲ ಓಟಿಗಾಗಿ ಸಂವಿಧಾನ ಆಪತ್ತಿನಲ್ಲಿದೆ ಎಂದು ಗಿಮಿಕ್ ಮಾಡುತ್ತಿದ್ದಾರೆ ಎಂದು ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನಕ್ಕೆ ಆಪತ್ತು ಬಂದರೆ ನಾವೆಲ್ಲಾ ಸುಮ್ಮನಿರುತ್ತೇವಾ? ಸಂವಿಧಾನದ ಹೆಸರಿನಲ್ಲಿ ಕಾಂಗ್ರೆಸ್ ನವರು ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಂವಿಧಾನಕ್ಕೆ ಆಪತ್ತು ಬಂದಿದೆ ಎಂದು ಬಿಂಬಿಸುತ್ತಿದ್ದಾರೆ. ಸಂವಿಧಾನಕ್ಕೆ ಯಾವುದೇ ಅಪಾಯ ಬಂದಿಲ್ಲ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಈ ಮಾತನ್ನು ಐಎನ್ಡಿಐಎ ಮೈತ್ರಿಕೂಟದ ನಾಯಕರೇ ಹೇಳುತ್ತಿದ್ದಾರೆ. ನಾನು 25 ವರ್ಷ ಕಾಲ ಕಾಂಗ್ರೆಸ್ ನಲ್ಲಿದ್ದವನು. ಆಗ ಮುಂದೊಂದು ದಿನ ಕಾಂಗ್ರೆಸ್ ಗೆ ಇಂತಹ ದುಸ್ಥಿತಿ ಬರುತ್ತದೆ ಎಂದು ಊಹೆ ಕೂಡ ಮಾಡಿರಲಿಲ್ಲ. ತುರ್ತು ಪರಿಸ್ಥಿತಿ ಬಳಿಕ ಕಾಂಗ್ರೆಸ್ ಗೆ ಪರ್ಯಾಯವಾಗಿ ಜನತಾ ಪಕ್ಷ ಉದಯವಾದರೂ ಅದು ಮುಂದೆ ಬೆಳೆಯಲಿಲ್ಲ. ಆದರೀಗ ಕಾಂಗ್ರೆಸ್ ಗೆ ಪರ್ಯಾಯವಾಗಿ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆದಿದೆ. ಪರಿಣಾಮ ಕಾಂಗ್ರೆಸ್ ದುಸ್ಥಿತಿಗೆ ತಲುಪಿದೆ ಎಂದರು.
ಸುವರ್ಣ ಮಹೋತ್ಸವ: ಮಾರ್ಚ್ 17 ರಂದು ಸಂಸದ ಶ್ರೀನಿವಾಸ್ ಪ್ರಸಾದ್ ರಾಜಕೀಯ ಪಯಣಕ್ಕೆ 50ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನೆ ಸಮಾರಂಭ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ಶ್ರೀನಿವಾಸ ಪ್ರಸಾದ್, 1974 ಮಾರ್ಚ್ 17ರಿಂದ ಇಲ್ಲಿಯ ತನಕ ನಾನು 17 ಭಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ವಿಧಾನಸಭೆ, ಲೋಕಸಭೆಯಲ್ಲಿ ಸ್ಪರ್ಧೆ ಮಾಡಿ ಸೋಲು ಗೆಲುವನ್ನು ಕಂಡಿದ್ದೇನೆ. ನನ್ನ ಅಭಿಮಾನಿಗಳೆಲ್ಲ ಸೇರಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರದ ಮಾಜಿ ಸಚಿವ ಪಿ ಜಿ ಆರ್ ಸಿಂದ್ಯಾ ಭಾಗಿಯಾಗಲಿದ್ದಾರೆ. ನನ್ನ ರಾಜಕೀಯ ಜೀವನದ ಕುರಿತು ನಾನೆ ಪುಸ್ತಕ ಬರೆದಿದ್ದೇನೆ. ಡಾ ಚಂದ್ರಶೇಖರ್ ರವರು ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ ಎಂದರು.
ಸಂಸದರ ಅವಧಿ ಮುಗಿದ ಬಳಿಕ ನಾನು ಮತ್ತೆ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಐವತ್ತು ವರ್ಷದ ರಾಜಕೀಯ ಅನುಭವದಲ್ಲಿ ಪಾರದರ್ಶಕ ಆಡಳಿತ ನೀಡಿದ್ದೇನೆ. ಅನೇಕ ಹೋರಾಟಗಳು ಏಳು ಬೀಳುಗಳು ನೋಡಿದ್ದೇನೆ. ಪಾರದರ್ಶಕ ಆಡಳಿತ ನೀಡಿದ್ದ ಆತ್ಮತೃಪ್ತಿ ನನಗಿದೆ ಎಂದರು.