Advertisement

Udupi; ಮುಂದಿನ ಎಂಪಿ ಯಾರು? ಚರ್ಚೆ ಬಲು ಜೋರು

01:32 AM Apr 21, 2024 | Team Udayavani |

ಉಡುಪಿ: ಇಬ್ಬರೂ ಅಭ್ಯರ್ಥಿಗಳು ಓಕೆ. ಯಾರು ಎಂಪಿ ಹಾಗಾದ್ರೆ? ಈ ಪ್ರಶ್ನೆಯೇ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೇಳಿಬರುತ್ತಿರುವುದು.

Advertisement

ಬಿಜೆಪಿ ಶಾಸಕರಿದ್ದಾರೆ, ಮೋದಿ ಅಲೆಯೂ ಇದೆ. ರಾಜ್ಯ ಸರಕಾರದ ಗ್ಯಾರಂಟಿ, ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಇದೆ. ಹೀಗೆಲ್ಲ ಇರುವಾಗ ಗೆಲುವಿಗೆ ಏನು ಕಾರಣವಾದೀತು ಎಂಬುದು ಬಹುತೇಕರ ಪ್ರಶ್ನೆ.

ನಗರಸಭೆ, ಗ್ರಾಮ ಪಂಚಾಯತ್‌ಗಳನ್ನು ಒಳಗೊಂಡ ಕ್ಷೇತ್ರವಿದು. ನಗರಸಭೆ ವ್ಯಾಪ್ತಿಯ 35 ವಾರ್ಡ್‌ ಗಳು ಮತ್ತು ಅದಕ್ಕೆ ಹೊಂದಿ ಕೊಂಡ ಕೆಮ್ಮಣ್ಣು, ಕಲ್ಯಾಣಪುರ, ತೆಂಕನಿಡಿಯೂರು, ಬಡನಿಡಿಯೂರು, ಅಂಬಲಪಾಡಿ, ಕಡೆಕಾರು ಗ್ರಾ.ಪಂ.ಗಳಲ್ಲಿ ನಗರದ ಛಾಯೆ ಹೆಚ್ಚಿದೆ. ಹಾರಾಡಿ-ಬೈಕಾಡಿ, ಚಾಂತಾರು, ವಾರಂಬಳ್ಳಿ, ಹಂದಾಡಿ, ಚೇರ್ಕಾಡಿ, ಕೊಕ್ಕರ್ಣೆ, ಕರ್ಜೆ, ಕಳತ್ತೂರು, ನೀಲಾವರ, ಆರೂರು, ಉಪ್ಪೂರು, ಹಾವಂಜೆ, ನಾಲ್ಕೂರು ಗ್ರಾ.ಪಂ.ಗಳು ಗ್ರಾಮೀಣ ಭಾಗದಲ್ಲಿವೆ. ಕೃಷಿ, ಮೀನುಗಾರಿಕೆ ಪ್ರಮುಖ. ಕೈಗಾರಿಕೆ, ವಿದ್ಯಾಸಂಸ್ಥೆ, ಆಸ್ಪತ್ರೆ ಒಳಗೊಂಡಂತೆ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವ ಹಿಸುವವರ ಪ್ರಮಾಣವೂ ಹೆಚ್ಚಿದೆ.

ಇದೀಗ ಕ್ಷೇತ್ರದ ಚುನಾವಣೆ ಚರ್ಚೆ ಬಿರುಸುಗೊಂಡಿದೆ, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ಸಾರ್ವಜನಿಕರ ಬಾಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಹೆಸರು ಚಾಲ್ತಿಯಲ್ಲಿದೆ. ನಗರ ಪ್ರದೇಶದ ನಿವಾಸಿಗಳ ಅಭಿಪ್ರಾಯ ಒಂದು ರೀತಿ ಯದ್ದಾದರೆ, ಗ್ರಾಮೀಣ ಭಾಗದವರ ಅಭಿಪ್ರಾಯ ಬೇರೆ ಇದೆ.

ದೇಶದಲ್ಲಿ 10 ವರ್ಷದಲ್ಲಿ ಆಗಿರುವ ಅಭಿವೃದ್ಧಿಯನ್ನು ಗಮನಿಸಿ ಓಟು ಹಾಕುವವರು ಹೆಚ್ಚು. ಅಭ್ಯರ್ಥಿಯನ್ನು ನೋಡಿ ಓಟು ಮಾಡುವವರು ತೀರಾ ಕಡಿಮೆ ಎನ್ನುತ್ತಾರೆ ಕಡಿಯಾಳಿಯ ಮಂಜುನಾಥ್‌.

Advertisement

ಇದು ದೇಶದ ಅಧಿಕಾರ ಚುಕ್ಕಾಣಿ ಹಿಡಿಯುವ ಚುನಾವಣೆಯಾದರೂ ನಮ್ಮ ಅಭ್ಯರ್ಥಿ ಸಂಸತ್ತಿನಲ್ಲಿ ಸ್ಥಳೀಯ ಸಮಸ್ಯೆಗಳ ಮೇಲೆ ಹೆಚ್ಚು ಬೆಳಕು ಚೆಲ್ಲುವಂತಿರಬೇಕು. ಹತ್ತು ವರ್ಷಗಳಲ್ಲಿ ಸಂಸದರು ಸ್ಥಳೀಯರಿಗೆ ಸಿಗುತ್ತಲೇ ಇರಲಿಲ್ಲ ಎಂಬುದು ಕೆಮ್ಮಣ್ಣು ನಿವಾಸಿ ಶ್ರೀನಿವಾಸ್‌ ಅವರ ಅಭಿಪ್ರಾಯ.

ಕರ್ಜೆಯ ಗೋಪಾಲರು ಹೇಳು ವಂತೆ, ಕೇಂದ್ರ ಸರಕಾರದಿಂದ ಕೃಷಿ ಸಮ್ಮಾನ ಸಹಿತ ಹಲವು ಯೋಜನೆ ಫ‌ಲ ನಮಗೂ ಸಿಕ್ಕಿದೆ. ಕಾಂಗ್ರೆಸ್‌ ಬಂದ ಅನಂತರ ಗ್ಯಾರಂಟಿಗಳು ಉಪ ಯೋಗವಾಗಿದೆ. ಮನೆಯವರಿಗೆ 2 ಸಾವಿರ ರೂ. ಬರುತ್ತಿದೆ. ವಿದ್ಯುತ್‌ ಬಿಲ್‌ ಒಮ್ಮೊಮ್ಮೆ ಬರದು, ಒಮ್ಮೆಮ್ಮೆ ಬರುತ್ತದೆ. ಉಚಿತ ಬಸ್‌ ಪ್ರಯೋಜನವಾಗುತ್ತಿಲ್ಲ. ಆದರೂ ಈ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನೋಡಿ ಮತದಾನ ಮಾಡಲಿದ್ದೇವೆ. ಪಕ್ಷವು ಜಾತಿ ಆಧಾರದಲ್ಲಿ ಟಿಕೆಟ್‌ ನೀಡುವಾಗ ಮತದಾರ ಜಾತಿ ನೋಡಿಯೇ ಮತದಾನ ಮಾಡುತ್ತಾನೆ. ಸಣ್ಣ ಸಣ್ಣ ಜಾತಿಗಳಿಗೆ ಯಾವುದೇ ಪಕ್ಷ ಮನ್ನಣೆ ನೀಡುವುದಿಲ್ಲ ಎಂಬುದು ಬ್ರಹ್ಮಾವರದ ಸಂತೋಷ್‌ ಅವರ ಅನಿಸಿಕೆ.

ಕೇಂದ್ರದಲ್ಲಿ ಮೋದಿಯೇ ಅಧಿಕಾರಕ್ಕೆ ಬರಬೇಕು. ಸ್ಥಳೀಯ ಸಮಸ್ಯೆಗಳು ಸಾಕಷ್ಟು ಇರುತ್ತವೆ. ಹಾಗೆಂದ ಮಾತ್ರಕ್ಕೆ ಬೇರೆ ಪಕ್ಷ ಅಧಿಕಾರಕ್ಕೆ ಬಂದ ತತ್‌ಕ್ಷಣ ಸಮಸ್ಯೆ ಬಗೆಹರಿಯದು. ದೇಶದ ರಕ್ಷಣೆ ಮುಖ್ಯ ಎನ್ನುತ್ತಾರೆ ಮಲ್ಪೆಯ ಭುವನ್‌.

ಹೀಗಾಗಿ ಇಡೀ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಭಿನ್ನ ಅಭಿಪ್ರಾಯಗಳು ಕಂಡು ಬರುತ್ತಿವೆ. ಆದರೂ, ಎರಡೂ ಪಕ್ಷದ ಅಭ್ಯರ್ಥಿ ಸಮರ್ಥರಿದ್ದಾರೆ. ಕರಾವಳಿಯಾದ ನೆಲೆಯಲ್ಲಿ ಮೋದಿ ಅಲೆ ಖಂಡಿತ ಕೆಲಸ ಮಾಡುತ್ತದೆ ಎಂಬ ಅಭಿಪ್ರಾಯ ದಟ್ಟವಾಗಿ ಕೇಳಿಬರುತ್ತಿದೆ.

ರಾಜ್ಯ ಸರಕಾರ ನೀಡಿರುವ ಗ್ಯಾರಂಟಿ ಮಹಿಳೆಯರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದು ಒಳಸುರಿಯಾಗಿ ಕೆಲಸ ಮಾಡಬಹುದು. ಹಿಂದುತ್ವ, ಜಾತಿ ಲೆಕ್ಕಚಾರ ಎಲ್ಲವೂ ಕ್ಷೇತ್ರದಲ್ಲಿ ಮತದಾನದ ದಿನ ಪ್ರಮುಖವಾಗುತ್ತದೆ ಎನ್ನುವುದು ಬಹುತೇಕರ ಅನಿಸಿಕೆ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next