ಮಂಗಳೂರು/ಉಡುಪಿ: ಕರಾವಳಿಯಲ್ಲಿ ರವಿವಾರ ಕೆಥೋಲಿಕರು ಗರಿಗಳ ರವಿವಾರ (ಪಾಮ್ ಸಂಡೇ) ಆಚರಿಸಿದರು. ಚರ್ಚ್‌ಗಳಲ್ಲಿ ವಿಶೇಷ ಧಾರ್ಮಿಕ ವಿಧಿಗಳನ್ನು ಹಾಗೂ ಬಲಿಪೂಜೆಗಳನ್ನು ನೆರವೇರಿಸ ಲಾಯಿತು. ಇಲ್ಲಿಂದ ಪವಿತ್ರ ಸಪ್ತಾಹ ಆರಂಭಗೊಂಡಿದೆ.
ಮಂಗಳೂರು ನಗರದ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಹಾಗೂ ಕೆಮ್ಮಣ್ಣು ಸಂತ ತೆರೆಸಾ ಚರ್ಚ್‌ನಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ಐ ಸಾಕ್ ಲೋಬೊ ಅವರು ಗರಿಗಳ ರವಿವಾರದ ಬಲಿ ಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು.
ಯೇಸು ಕ್ರಿಸ್ತರು ತಮ್ಮ ಸಂಕಷ್ಟಗಳ ದಿನಗಳಲ್ಲೂ ಸಹನೆಯನ್ನು ಪ್ರದರ್ಶಿಸಿದರು. ದೇವರ ಯೋಜನೆ ಪೂರ್ಣಗೊಳಿಸಲು ಜೆರುಸಲೆಂ ನಗರವನ್ನು ಸಹನೆಯಿಂದ ಪ್ರವೇಶಿಸಿದರು. ಅಲ್ಲಿನ ಜನರ ಮನಸ್ಥಿತಿಯಿಂದ ಜೆರುಸಲೆಂ ನಗರ ನಾಶವಾಗುವುದನ್ನು ಕಂಡು ಭಾವುಕರಾದರು. ಕಠೊರ ಮನಸ್ಸುಗಳು ಪರಿವರ್ತನೆಯಾಗದ ಹಿನ್ನೆಲೆ ಜೆರುಸಲೆಂನಲ್ಲಿ ಇಂದಿಗೂ ಶಾಂತಿ ನೆಲೆಸಿಲ್ಲ. ಇಂದು ನಾವು ಪಶ್ಚಾತ್ತಾಪ ಪಡಬೇಕಾದ ಅಗತ್ಯವಿದೆ. ನಮ್ಮ ಮನಸ್ಥಿತಿಯಿಂದಾಗಿ ನಮ್ಮ ಸುತ್ತಲು ಶಾಂತಿಯ ವಾತಾವರಣ ಇಲ್ಲವಾಗಿದ್ದು, ದೇವರ ಇಚ್ಛೆಯನ್ನು ಅರಿತುಕೊಳ್ಳಬೇಕು. ಉಪವಾಸ, ಪ್ರಾರ್ಥನೆ ಕೇವಲ ತಪಸ್ಸು ಕಾಲಕ್ಕೆ ಸೀಮಿತವಾಗಿಸದೆ ನಮ್ಮ ಹಾಗೂ ಭಾರತ ದೇಶದ ರಕ್ಷಣೆಗೆ ದೇವರ ಕೃಪೆಗಳನ್ನು ನಿತ್ಯ ನಿರಂತರ ಬೇಡಿಕೊಳ್ಳಬೇಕಾಗಿದೆ ಎಂದು ನೀಡಿದರು.
ಕರಾವಳಿಯ ಎಲ್ಲ ಚರ್ಚ್‌ಗಳಲ್ಲಿ ಕೆಥೋಲಿಕರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಸಾಗಿ ಚರ್ಚ್‌ಗಳಲ್ಲಿ ಯೇಸುವಿನ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಬಲಿಪೂಜೆಯಲ್ಲಿ ಭಾಗವಹಿಸಿದರು.