Advertisement

ರಂಗಾಸಕ್ತರಿಗೆ ನಿರಂತರ ಅವಕಾಶ ದೊರಕಿಸಬೇಕಿದೆ

01:22 PM May 04, 2022 | Team Udayavani |

ಅಂಕೋಲಾ: ಕೋವಿಡ್‌ ಬಿಕ್ಕಟ್ಟಿನ ನಂತರ ಅಂಕೋಲಾದಲ್ಲಿ ಹೊಸ ಅಲೆಯ ನಾಟಕ ಪ್ರರ್ದಶನವನ್ನು ಸಂಗಾತಿ ರಂಗಭೂಮಿಯವರು ಸಂಘಟಿಸಿ ರಂಗ ಚಟುವಟಿಕೆಗೆ ಪುನಶ್ಚೇತನ ನೀಡಿದ್ದಾರೆ. ಇದು ನಿರಂತರವಾಗಿ ನಡೆಯಲಿ ಮತ್ತು ರಂಗಾಸಕ್ತರಿಗೆ ಅವಕಾಶ ಒದಗಿಸಲಿ ಎಂದು ಉದ್ಯಮಿ ಡಾ| ಮತೀನ ಶೇಖ್‌ ಹೇಳಿದರು.

Advertisement

ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಸಂಗಾತಿ ರಂಗಭೂಮಿ ಅಂಕೋಲಾ ಮತ್ತು ಕೈವಲ್ಯ ಕಲಾಕೇಂದ್ರ ಬೆಂಗಳೂರು ಇವರ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ನಾಟಕ ಪ್ರದರ್ಶನ ಮತ್ತು ರಂಗ ಪುರಸ್ಕಾರ ಕಾರ್ಯಕ್ರಮವನ್ನು ಚಂಡೆ ಭಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ಸಾಂಸ್ಕೃತಿಕ ಪರಂಪರೆಗೆ ತನ್ನದೇ ಆದ ಮಹತ್ವವಿದೆ. ಪೂರ್ವಜರು ನಡೆಸಿಕೊಂಡು ಬಂದ ಚಟುವಟಿಕೆಗಳನ್ನು ಸಂಗಾತಿ ರಂಗಭೂಮಿ ಇತ್ತೀಚಿನ ವರ್ಷದಲ್ಲಿ ಮುಂದುವರೆಸುತ್ತಿರುವುದು ಆಶಾದಾಯಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಡಾ| ರಾಮಕೃಷ್ಣ ಗುಂದಿ ಮಾತನಾಡಿ, ಅಂಕೋಲೆಯಲ್ಲಿ 70-80ರ ದಶಕದಲ್ಲಿ ರಂಗ ಚಟುವಟಿಕೆ ಕ್ರಿಯಾಶೀಲವಾಗಿತ್ತು. ಕರ್ನಾಟಕ ಸಂಘ, ಕಾಲೇಜು ಮತ್ತು ಹೈಸ್ಕೂಲ್‌ ಅಧ್ಯಾಪಕರು ರಂಗಭೂಮಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆ ನಂತರದ ದಿನಗಳಲ್ಲಿ ಅದು ಕ್ಷೀಣಗೊಂಡಿತ್ತು. ಈಗ ಮತ್ತೆ ವೈಚಾರಿಕ ರಂಗಭೂಮಿ ನಾಟಕಗಳನ್ನು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಂಗಾತಿ ರಂಗಭೂಮಿ ನಡೆಸಿಕೊಂಡು ಬರುತ್ತಿದೆ. ಇದು ಇನ್ನೂ ವ್ಯಾಪಕವಾಗಿ ಬೆಳೆಯಲು ರಂಗಾಸಕ್ತರು ಪ್ರೋತ್ಸಾಹ ನೀಡಬೇಕೆಂದರು.

ಆಶಯ ನುಡಿಗಳನ್ನಾಡಿದ ವಿಶ್ರಾಂತ ಪ್ರಾಚಾರ್ಯ ಪ್ರೊ| ಮೋಹನ ಎಸ್‌. ಹಬ್ಬು, ರಂಗಭೂಮಿ ಇತರ ಮಾಧ್ಯಮಗಳಿಗಿಂತ ಭಿನ್ನವಾದ್ದದ್ದು, ಇದರ ಅಭಿರುಚಿ ಬೆಳೆಸಿಕೊಳ್ಳಬೇಕು. ಸಂಘಟಕರಿಗೆ ಸಾರ್ವಜನಿಕರ ಪ್ರೋತ್ಸಾಹ ಸಿಗಬೇಕು ಎಂದರು.

Advertisement

ನಾಟಕ ಕೃತಿಕಾರರು ಮತ್ತು ನಿರ್ದೇಶಕರು ಆದ ಮೋಹನ ನಾಯ್ಕ ಅವರ್ಸಾ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು. ನಾಟಿ ವೈದ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವೈದ್ಯ ಹನುಮಂತ ಬಿ. ಗೌಡ, ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ, ಸರಕಾರಿ ಕಾಲೇಜಿನ ಅಧ್ಯಾಪಕ ಮಹೇಶ ನಾಯಕ, ತಾಲೂಕು ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷ ರಾಘು ಕಾಕರಮಠ, ಯಕ್ಷಗಾನ ಸಂಘಟಕ ಮಾರುತಿ ನಾಯ್ಕ ಲಕ್ಷ್ಮೇಶ್ವರ ಇದ್ದರು.

ಈ ಸಂದರ್ಭದಲ್ಲಿ ಗೌರವ ಡಾಕ್ಟರೇಟ್‌ ಪದವಿ ಪಡೆದ ಡಾ| ಮತೀನ ಶೇಖ್‌ ಅವರನ್ನು ಗೌರವಿಸಲಾಯಿತು. ನಾಟಕ ಪ್ರದರ್ಶನ- ಸುಧಾ ಅಡುಕಳ ರಚಿಸಿದ “ಮಾಧವಿ’ ನಾಟಕ ಪ್ರದರ್ಶಿಸಲಾಯಿತು. ಈ ನಾಟಕದ ನಿರ್ದೇಶನ ಮತ್ತು ವಿನ್ಯಾಸ ಡಾ| ಶಿಲ್ಪಾ ಭಟ್‌, ಸಹನಿರ್ದೇಶನ ಗಣೇಶ ಎಂ. ಭೀಮನಕೋಣೆ ಮತ್ತು ಅಭಿನಯನವನ್ನು ದಿವ್ಯಾಶ್ರೀ ನಾಯಕ ಸುಳ್ಯ ಮತ್ತು ಶರತ ಭೋಪ್ಪಣ್ಣ ನಿರ್ವಹಿಸಿದರು. ನಾಟಕದ ಸಂಘಟಕ ಕೆ. ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜಿ.ಆರ್‌. ತಾಂಡೇಲ ನಿರ್ವಹಿಸಿದರು. ತಿಮ್ಮಣ್ಣ ಭಟ್‌ ವಂದಿಸಿದರು. ವಿನಾಯಕ ಶೆಟ್ಟಿ, ಸಿದ್ಧಾರ್ಥ ಕಾರ್ಯಕ್ರಮ ಸಂಘಟನೆಗೆ ನೆರವಾದರು.

Advertisement

Udayavani is now on Telegram. Click here to join our channel and stay updated with the latest news.

Next