Advertisement

ಸತತ ಸೋಲಿನಿಂದ ಕಾಂಗ್ರೆಸ್‌ ಅಧೋಗತಿಗೆ; ಜನ ಸೇವಕ ಸಮಾವೇಶಕ್ಕೆ ಚಾಲನೆ

03:43 PM Jan 12, 2021 | Team Udayavani |

ಬೀದರ: ಗ್ರಾಪಂ ಚುನಾವಣೆಯಲ್ಲಿ ಜಯಭೇರಿಯಿಂದ ಬಿಜೆಪಿ ಗ್ರಾಮ ಮಟ್ಟದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದರೆ ಕಾಂಗ್ರೆಸ್‌ ಪ್ರತಿ ಚುನಾವಣೆಯಲ್ಲಿ ಸೋಲುಣ್ಣುವ ಮೂಲಕ ಅಧೋಗತಿಗೆ ತಲುಪಿದೆ. ಮುಂಬರುವ ದಿನಗಳಲ್ಲಿ ಹೇಳು ಹೆಸರಿಲ್ಲದೇ ಮನೆ ಹೋಗಲಿದೆ ಎಂದು ಬೃಹತ್‌ ಕೈಗಾರಿಕೆ
ಸಚಿವ ಜಗದೀಶ ಶೆಟ್ಟರ್‌ ವ್ಯಂಗ್ಯವಾಡಿದರು.

Advertisement

ನಗರದ ಬೆಲ್ದಾಳೆ ಕನ್ವೆನ್ಶನ್‌ ಹಾಲ್‌ನಲ್ಲಿ ಸೋಮವಾರ ಬಿಜೆಪಿ ಹಮ್ಮಿಕೊಂಡಿದ್ದ ಜನ ಸೇವಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಶಿಸ್ತಿನ ಪಕ್ಷವಲ್ಲ. ಕೇಡರ್‌ ಬೇಸ್‌ ಕಾರ್ಯಕರ್ತರೇ ಅಲ್ಲಿಲ್ಲ. ಕೇವಲ ನಾಯಕರಾಗಲು ಹೊಡೆದಾಟ ಮಾತ್ರ ಕಾಣಿಸಿಗುತ್ತದೆ. ಲಕ್ಷಾಂತರ ಕಾರ್ಯಕರ್ತರ ಶಕ್ತಿ ಮೇಲೆ ನಿಂತಿರುವ ಪಕ್ಷವೆಂದರೆ ಬಿಜೆಪಿ ಮಾತ್ರ. ಕಾರ್ಯಕರ್ತರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುವ ಬಿಜೆಪಿಯಂಥ ಪಕ್ಷವನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಇತ್ತಿಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಶೇ.60ರಷ್ಟು ಬಿಜೆಪಿ ಬೆಂಬಲಿತರು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ದೇಶದಲ್ಲಿ ಕೆಳ ಮಟ್ಟದಲ್ಲಿ
ಬದಲಾವಣೆ ಗಾಳಿ ಬೀಸಿದೆ. ಒಟ್ಟು 86,183 ಸದಸ್ಯ ಸ್ಥಾನಗಳ ಪೈಕಿ 45,246 ಸ್ಥಾನದಲ್ಲಿ ನಮ್ಮ ಕಾರ್ಯಕರ್ತರು ಆಯ್ಕೆಯಾಗಿದ್ದಾರೆ.

ಕಳೆದ 2015ರಲ್ಲಿ ಬಿಜೆಪಿಗೆ ಕೇವಲ 24,705 ಸ್ಥಾನ ಒಲಿದಿತ್ತು. ಅಷ್ಟೇ ಅಲ್ಲ ಈ ಹಿಂದೆ 1934 ಪಂಚಾಯತಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದರೆ ಈ ಬಾರಿ 3142 ಕಡೆಗಳಲ್ಲಿ ಗದ್ದುಗೆ ಹಿಡಿಯಲಿದೆ ಎಂದು ತಿಳಿಸಿದ ಶೆಟ್ಟರ್‌, ರಾಜ್ಯ, ಕೇಂದ್ರ ಸರ್ಕಾರದ ಒಳ್ಳೆಯ ಆಡಳಿತ, ನಾಯಕತ್ವದಿಂದ ಬಿಜೆಪಿ ಬೆಳೆಯುತ್ತಿದೆ. ಇಂದು ಅಮಿತ್‌ ಶಾ ಅವರ ಚಾಣುಕ್ಯ ತಂತ್ರಗಾರಿಕೆಯಿಂದ ನೆಲೆಯೇ ಇಲ್ಲದ ರಾಜ್ಯಗಳಲ್ಲಿಯೂ ಬಿಜೆಪಿ ಬಾವುಟ ಹಾರುತ್ತಿದೆ ಎಂದರು.

ಎಂಎಲ್‌ಸಿ ರಘುನಾಥರಾವ್‌ ಮಲ್ಕಾಪುರೆ ಮಾತನಾಡಿ, ಬಿಜೆಪಿ ಎಂದಿಗೂ ಅ ಧಿಕಾರಕ್ಕಾಗಿ ರಾಜಕಾರಣ  ಮಾಡಿಕೊಂಡು ಬಂದಿರುವ ಪಕ್ಷವಲ್ಲ. ರಾಷ್ಟ್ರದ ಪುನರ್‌ ನಿರ್ಮಾಣ, ಅಂತ್ಯೋದಯದ ಉದ್ಘಾರ ಪಕ್ಷದ ಸಿದ್ಧಾಂತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೇರ ಅಧಿಕಾರ ಇರುವುದು ಗ್ರಾಪಂ ಸದಸ್ಯರಿಗೆ ಮಾತ್ರ. ಮಾದರಿ ಕೆಲಸಗಳನ್ನು ಮಾಡಿ ಜನರ ವಿಶ್ವಾಸ ಗಳಿಸಿ ಎಂದರು.

Advertisement

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಜನ ಸೇವಕ ಸಮಾವೇಶ ಮುಂಬರುವ ಜಿಪಂ, ತಾಪಂ ಚುನಾವಣೆ ತಯ್ನಾರಿಗೆ
ಪೂರಕವಾಗಿದೆ. ಕಾಂಗ್ರೆಸ್‌ ಮುಕ್ತ ಮಾಡಲು ಶ್ರಮಿಸಬೇಕು ಎಂದು ಕರೆ ನೀಡಿದರು. ಸಮಾವೇಶದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌ ಮಾತನಾಡಿದರು.

ಸಂಸದ ಭಗವಂತ ಖೂಬಾ, ಸಚಿವರಾ ಶಶಿಕಲಾ ಜೊಲ್ಲಾ, ಪ್ರಭು ಚವ್ಹಾಣ, ಶಾಸಕ ಮಾಲೀಕಯ್ಯ ಗುತ್ತೇದಾರ್‌, ಮಾಜಿ ಶಾಸಕ ರಾಜೇಂದ್ರ ವರ್ಮಾ, ಸುಭಾಷ ಕಲ್ಲೂರ್‌,  ಮಲ್ಲಿಕಾರ್ಜುನ ಖೂಬಾ, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಪಂ ಅಧ್ಯಕ್ಷೆ ನಿರ್ಮಲಾ ಮಾನಗೋಪಾಲ್‌, ಸದಸ್ಯರಾದ ಶಕುಂತಲಾ ಬೆಲ್ದಾಳೆ, ಗುಂಡುರೆಡ್ಡಿ, ಪ್ರಮುಖರಾದ ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್‌ ಠಾಕೂರ್‌, ಡಿ.ಕೆ ಸಿದ್ರಾಮ್‌, ಗುರುನಾಥ ಜ್ಯಾಂತಿಕರ್‌ ಇದ್ದರು.

ಸಮಾವೇಶದಲ್ಲಿ ಚುನಾಯಿತಿ ನೂತನ ಸದಸ್ಯರ ಮೇಲೆ ಪುಷ್ಪಾರ್ಚನೆಯೊಂದಿಗೆ ಅಭಿನಂದಿಸಲಾಯಿತು. ಇದಕ್ಕೂ ಮುನ್ನ ನಗರದಲ್ಲಿ ಬೈಕ್‌ ರ್ಯಾಲಿ ಮೂಲಕ ಸಚಿವರಾದ ಜಗದೀಶ ಶೆಟ್ಟರ್‌, ಶಶಿಕಲಾ ಜೊಲ್ಲೆ ಅವರನ್ನು ಸ್ವಾಗತಿಸಲಾಯಿತು.

ಚುನಾಯಿತ ಪತ್ನಿಯೇ ಆಡಳಿತ ನಡೆಸಲಿ
ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಇಂದು ಮುಂಚೂಣಿಯಲ್ಲಿದ್ದರೂ ರಾಜಕೀಯ ಮತ್ತು ಆಡಳಿತ ನಡೆಸುವಲ್ಲಿ ಮಾತ್ರ ಹಿಂದೇಟು ಹಾಕಿ ತಮ್ಮ ಪತಿಯನ್ನು ಮುಂದೆ ಮಾಡುವುದು ಸರಿಯಲ್ಲ. ಜನಪ್ರತಿನಿಧಿ ಯಾಗಿರುವ ಪತ್ನಿಗೆ ಪತಿ ಬೆಂಬಲ ನೀಡಬೇಕು. ಇಂಥ ಸಮಾವೇಶದಲ್ಲಿ ಭಾಗವಹಿಸಿದ್ದರೆ ಅವರೂ ಸಹ ಪಂಚಾಯತ ಎಂದರೆ ಏನು, ಮಾಡಬೇಕಾದ ಕೆಲಸ ಕಾರ್ಯಗಳ ಕುರಿತು ಅರಿತುಕೊಳ್ಳಲು ಸಾಧ್ಯ. ಅವರಲ್ಲಿ ಪಕ್ಷದ ಬಗ್ಗೆ ಅಭಿಮಾನ ಮೂಡುತ್ತದೆ. ಆಡಳಿತ ಕುರಿತಂತೆ ಪತಿ ದೇವರು ತಮ್ಮ ಪತ್ನಿಗೆ ಒಳ್ಳೆಯ ರೀತಿ ಮಾರ್ಗದರ್ಶನ ಮಾಡಲಿ.
ಶಶಿಕಲಾ ಜೊಲ್ಲೆ, ಸಚಿವೆ

ಗ್ರಾಮ ಸ್ವರಾಜಕ್ಕೆ ಶ್ರಮಿಸಿ
ಗಾಂಧೀಜಿ ಕಂಡಿದ್ದ ಗ್ರಾಮ ಸ್ವರಾಜದ ಕನಸನ್ನು ನನಸು ಮಾಡಿ. ಇದಕ್ಕಾಗಿ ಜನ ನಿಮಗೆ ಒಳ್ಳೆಯ ಅವಕಾಶ ನೀಡಿದ್ದಾರೆ. ಗ್ರಾಮಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿ ಗ್ರಾಮಾಭಿವೃದ್ಧಿ ಶ್ರಮಿಸಬೇಕು. ಇದಕ್ಕಾಗಿ ನಮ್ಮ ಸರ್ಕಾರ ನಿಮ್ಮ ಜತೆಗೆ ಇರುತ್ತದೆ. ಜಿಲ್ಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಮೀಸಲಾತಿ ಬಂದರೂ ಗದ್ದುಗೆ ಹಿಡಿಯುವುದು ಬಿಜೆಪಿಯೇ. ಕಾಂಗ್ರೆಸ್‌ ಕೇವಲ ಸುಳ್ಳು ಹೇಳಿ ಅಧಿಕಾರ ನಡೆಸಿದ್ದರೇ, ಸಿಎಂ ಬಿಸಿಎಂ ಸರ್ಕಾರ ಹೇಳಿದ್ದನ್ನು ಮಾಡಿ ತೋರಿಸುತ್ತದೆ.
ಪ್ರಭು ಚವ್ಹಾಣ, ಉಸ್ತುವಾರಿ ಸಚಿವ

ಅಭಿವೃದ್ಧಿ ಕೆಲಸ ಜನರ ಮುಂದಿಡಿ
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ ಸಂಸದರು, ಸಚಿವರು, ಪ್ರಧಾನಿ ಲೆಕ್ಕ ಕೊಡುವಂತೆ ಗ್ರಾಪಂ ಸದಸ್ಯರು ಸಹ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಜನರ ಮುಂದಿಡಲಿ. ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮನೆ-ಮನೆಗೆ  ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಅದನ್ನು ತಮ್ಮ ಅಧಿಕಾರದ ಮೂಲಕ ಸಮರ್ಥವಾಗಿ ನಿಭಾಯಿಸಬೇಕು.
ಭಗವಂತ ಖೂಬಾ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next