Advertisement

ನರ್ಸ್‌-ವೈದ್ಯರಿಂದ ಸದಾ ಆರೈಕೆ; ಸಮಯಕ್ಕೆ ಆಹಾರ

02:37 AM May 29, 2020 | Sriram |

ವಿಶೇಷ ವರದಿ- ಮಂಗಳೂರು: “ವೆನ್ಲಾಕ್ ಕೋವಿಡ್‌ ಆಸ್ಪತ್ರೆಯಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಊಟ ತಿಂಡಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ವೈದ್ಯರು, ನರ್ಸ್‌ಗಳ ಮಾನವೀಯ ಸೇವೆಯೇ ನಮ್ಮನ್ನು ಬಹುಬೇಗ ಕೋವಿಡ್‌-19ದಿಂದ ಮುಕ್ತಗೊಳಿಸಿದೆ’.

Advertisement

ಕೋವಿಡ್‌-19ದಿಂದ ಗುಣಮುಖರಾಗಿ ಮನೆ ಸೇರಿದ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆ ಯೋರ್ವರು ಇಲ್ಲಿನ ಕೋವಿಡ್‌-19 ವಾರಿಯರ್ ಬಗ್ಗೆ ಹೇಳಿದ ಕೃತಜ್ಞತೆಯ ಮಾತುಗಳಿವು.

“ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ಕೋವಿಡ್‌-19 ರೋಗಿಗಳಿಗೆ ಊಟ-ತಿಂಡಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲ ತಯಾರಿಗಳನ್ನು ಜಿಲ್ಲಾಡಳಿತ ಮಾಡ ತ್ತಿದೆ. ಬೆಳಗ್ಗೆಯಿಂದ ಸಂಜೆ ತನಕವೂ ನಮಗೆ ಬೇಕಾದಾಗ ವೈದ್ಯರು, ನರ್ಸ್‌ಗಳು ಲಭ್ಯವಿರುತ್ತಿದ್ದರು. ಕೋವಿಡ್‌-19 ರೋಗಿಗಳಿಗೆಂದೇ ಹೆಲ್ಪ್ ಡೆಸ್ಕ್ ಮಾಡಲಾಗಿದ್ದು, ಎಲ್ಲರಿಗೂ ಅಲ್ಲಿನ ದೂರವಾಣಿ ಸಂಖ್ಯೆಗಳನ್ನು ನೀಡುತ್ತಾರೆ. ಆ ಸಂಖ್ಯೆಗೆ ಕರೆ ಮಾಡಿದರೆ ತತ್‌ಕ್ಷಣ ಸ್ಪಂದಿಸುತ್ತಾರೆ. ಆಸ್ಪತ್ರೆ ಸಿಬಂದಿಯ ಈ ರೀತಿಯ ಸ್ಪಂದನೆ ನಮ್ಮನ್ನು ಬೇಗ ಗುಣಮುಖರಾಗುವಂತೆ ಮಾಡಿತ್ತು’ ಎನ್ನುತ್ತಾರೆ ಅವರು.

ಎಲ್ಲರಿಗೂ ಪ್ರತ್ಯೇಕ ಕೋಣೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವೈದ್ಯರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹೊತ್ತು ಬಂದು ಪರಿಶೀಲಿಸುತ್ತಾರೆ. ನರ್ಸ್‌ಗಳು ಆಗಾಗ ಬಂದು ಯೋಗಕ್ಷೇಮ ವಿಚಾರಿಸುತ್ತಿರುತ್ತಾರೆ. ಕೋವಿಡ್‌-19ದಿಂದ ಗುಣಮುಖರಾಗಲು ಒಂದು ಬಗೆಯ ಮಾತ್ರೆ (ಹೆಸರು ತಿಳಿದಿಲ್ಲ) ಮತ್ತು ವಿಟಮಿನ್‌ ಮಾತ್ರೆಗಳನ್ನು ನೀಡುತ್ತಾರೆ. ಆಸ್ಪತ್ರೆಯಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಕೋಣೆಯ ವ್ಯವಸ್ಥೆ ಇದೆ. ಆದರೆ ಒಂದೇ ಕುಟುಂಬದವರು ಇದ್ದಲ್ಲಿ ಜನರಲ್‌ ವಾರ್ಡ್‌ನ ನಾಲ್ಕು ಮೂಲೆಗಳಲ್ಲಿ ಸಾಕಷ್ಟು ದೂರದಲ್ಲಿ ಬೆಡ್‌ ವ್ಯವಸ್ಥೆ ಮಾಡಿಕೊಟ್ಟಿರುತ್ತಾರೆ. ಹೀಗಾಗಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಶೀಘ್ರ ಗುಣಮುಖರಾಗಿ ತೆರಳುತ್ತೇವೆಂಬ ಆಶಾ ಭಾವನೆ ಇತ್ತು’ ಎಂದು ಕೋವಿಡ್‌ ಆಸ್ಪತ್ರೆಯಲ್ಲಿನ ಚಿಕಿತ್ಸೆ ಬಗ್ಗೆ ಆ ಮಹಿಳೆ ವಿವರಿಸಿದರು.

ಈಗ ಆರೋಗ್ಯವಾಗಿದ್ದೇನೆ
“ನಾನು ಗುಣಮುಖಳಾಗಿ ಮನೆಗೆ ಬಂದು ಕೆಲವು ದಿನಗಳಾಗಿದ್ದು, ಈಗ ಆರೋಗ್ಯವಾಗಿದ್ದೇನೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆಯಂತಹ ಯಾವುದೇ ಸಮಸ್ಯೆ ಇಲ್ಲ. ಆರೋಗ್ಯ ಏರುಪೇರಾದರೆ ಮತ್ತೆ ಬರಬೇಕೆಂದು ವೈದ್ಯರು ಹೇಳಿ ಕಳುಹಿಸಿದ್ದಾರೆ. ಆದರೆ, ಅಂತಹ ಯಾವುದೇ ಸಮಸ್ಯೆ ನನಗೆ ಈಗ ಇಲ್ಲ’ ಎನ್ನುತ್ತಾರವರು.

Advertisement

ಭಯ ಬೇಡ; ಆತ್ಮವಿಶ್ವಾಸವಿರಲಿ
ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಯಲ್ಲಿರುವುದಿಲ್ಲ. ಕೋವಿಡ್‌-19 ಅಂದರೆ ಭಯ ಬೇಡ. ಇದು ನಮಗೆ ಹೊಸತು. ಹಾಗಾಗಿ ಸ್ವಲ್ಪ ಭಯ, ಆತಂಕ ಜಾಸ್ತಿ. ನ್ಯುಮೋನಿಯಾ, ಮಲೇರಿಯಾದಂತೆ ಇದೂ ಒಂದು ಕಾಯಿಲೆ. ಕೋವಿಡ್‌-19ಮುಕ್ತನಾಗಿ ಬರುವೆನೆಂಬ ಆತ್ಮವಿಶ್ವಾಸವಿದ್ದರೆ ಇದು ಮಾರಣಾಂತಿಕವಲ್ಲ. ಪಾಸಿಟಿವ್‌ ಬಂದಾಗಲೂ ಧೈರ್ಯದಿಂದಿದ್ದರೆ, ಆರೋಗ್ಯ ಸುಧಾರಿಸುವುದು ನಿಶ್ಚಿತ ಎಂದು ಮಹಿಳೆ ಇತರರಿಗೆ ಆತ್ಮವಿಶ್ವಾಸದ ಮಾತು ಹೇಳಿದ್ದಾರೆ.

ಕೋವಿಡ್‌-19 ಸೋಂಕಿತರಿಗೆ ಆಸ್ಪತ್ರೆಯಲ್ಲಿ ದಿನನಿತ್ಯದ ಆಹಾರ
ಸಮಯ ಆಹಾರ
ಬೆಳಗ್ಗೆ 8 ಉಪ್ಪಿಟ್ಟು ಅಥವಾ ಇತರ ತಿಂಡಿಗಳು
ಬೆಳಗ್ಗೆ 10 ಚಹಾ, ಸ್ನ್ಯಾಕ್ಸ್‌
ಮಧ್ಯಾಹ್ನ 1 ಅನ್ನ, ತರಕಾರಿ ಸಾಂಬಾರು, ಮೊಟ್ಟೆ, ಮಜ್ಜಿಗೆ, ಬಾಳೆಹಣ್ಣು
ಅಪರಾಹ್ನ 3.30 ಚಾ, ಬಿಸ್ಕೆಟ್‌ ಅಥವಾ ಇತರ ಸ್ನ್ಯಾಕ್ಸ್‌
ರಾತ್ರಿ 9 ಅನ್ನ, ತರಕಾರಿ ಸಾಂಬಾರು, ಚಪಾತಿ/ಇಡ್ಲಿ/ದೋಸೆ, ಹಣ್ಣುಗಳು

Advertisement

Udayavani is now on Telegram. Click here to join our channel and stay updated with the latest news.

Next