Advertisement

CM Siddaramaiah ಕೈ ಹಿಡಿದ ಹೈಕಮಾಂಡ್: ಹಿಂದುಳಿದ ವರ್ಗದ ಹಿರಿಯ ನಾಯಕನ ವಿರುದ್ಧ ಪಿತೂರಿ

08:23 PM Aug 23, 2024 | Team Udayavani |

ಹೊಸದಿಲ್ಲಿ: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆಯ ಭೀತಿ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಕಾಂಗ್ರೆಸ್ ಹೈಕಮಾಂಡ್ ನಿಂತಿದ್ದು, ಕೇಂದ್ರ ಸರಕಾರ, ಬಿಜೆಪಿ ಮತ್ತು ರಾಜ್ಯಪಾಲರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿದೆ.

Advertisement

ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ (ಆ23) ರಂದು ಕಾಂಗ್ರೆಸ್ ನಾಯಕ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮಹತ್ವದ ಮಾತುಕತೆ ನಡೆಸಲಾಯಿತು. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ಜತೆಗಿದ್ದರು. ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸಹಿತ ರಾಜ್ಯದ ಹಲವು ನಾಯಕರು ದೆಹಲಿಗೆ ತೆರಳಿದ್ದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ‘ ಕರ್ನಾಟಕ ರಾಜ್ಯದ ಪ್ರಸ್ತುತ ರಾಜಕೀಯ ಸ್ಥಿತಿಯ ಕುರಿತು ವಿವರವಾಗಿ ಚರ್ಚಿಸಿದ್ದೇವೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಟ್ಟ ಪಿತೂರಿಯ ಭಾಗವಾಗಿ ಬಿಜೆಪಿ ಮತ್ತು ಜೆಡಿ ಎಸ್ ಕೈಗೊಂಬೆಯಾಗಿ ರಾಜ್ಯಪಾಲರ ಕಚೇರಿಯ ಮೂಲಕ ವ್ಯವಸ್ಥಿತವಾಗಿ ವಿನ್ಯಾಸಗೊಳಿಸಿರುವುದನ್ನು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಬಿಚ್ಚಿಟ್ಟಿದ್ದಾರೆ’ ಎಂದರು.

ಹಿಂದುಳಿದ ವರ್ಗಗಳ ನಾಯಕನ ವಿರುದ್ಧ ಪಿತೂರಿ
ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳ ಪೈಕಿ ಹಿಂದುಳಿದ ವರ್ಗಗಳ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಅವರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸವಾಗುತ್ತಿದೆ. ಬಿಜೆಪಿ-ಜೆಡಿಎಸ್ ಕರ್ನಾಟಕದ ಜನತೆಯ ವಿರುದ್ಧ ಕೆಲಸ ಮಾಡುತ್ತಿವೆ” ಎಂದು ಸುರ್ಜೇವಾಲಾ ಕಿಡಿ ಕಾರಿದರು.

Advertisement

ಗ್ಯಾರಂಟಿಗಳ ಮೇಲೆ ದಾಳಿ

ಹೀನಾಯ ಸೋಲಿನಿಂದ ಹತಾಶರಾಗಿರುವ ಪ್ರಧಾನಿ, ಗೃಹ ಸಚಿವ ಅಮಿತ್ ಶಾ ಮತ್ತು ಇಡೀ ಬಿಜೆಪಿ ನಾಯಕತ್ವವು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ದಾಳಿ ಮಾಡಲು ರಾಗ್‌ಡಾಲ್ ಗವರ್ನರ್ ಹಿಂದೆ ಅಡಗಿದೆ. ಇದು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಅಥವಾ ಅಸ್ಥಿರಗೊಳಿಸುವ ಪ್ರಯತ್ನವಲ್ಲ, 5 ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ದಾಳಿ ಮಾಡುವುದಾಗಿದೆ. ನಾವು ಪ್ರತಿ ವರ್ಷ 53,000 ಕೋಟಿ ರೂಪಾಯಿಗಳನ್ನು ನೇರವಾಗಿ, ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ 4 ಕೋಟಿ ಕನ್ನಡಿಗರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದೇವೆ. ಅದರ ವಿರುದ್ಧ ದಾಳಿ ನಡೆಯುತ್ತಿದೆ” ಎಂದರು.

‘ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ಪ್ರತಿಯೊಂದು ದಾಳಿಯನ್ನು ನಾವು ಎದುರಿಸುತ್ತೇವೆ. ನಾವು ನಮ್ಮ ಎಲ್ಲಾ ಕಾನೂನು ಪರಿಹಾರಗಳನ್ನು ಅನುಸರಿಸುತ್ತೇವೆ, ಕಾನೂನಿನ ಘನತೆ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ನಾವು ಈ ಹೋರಾಟದ ಮಾರ್ಗವನ್ನು ಸಹ ಅನುಸರಿಸುತ್ತೇವೆ. ನಾವು ಈ ಹೋರಾಟದ ತೀರ್ಪನ್ನು ಜನತಾ ನ್ಯಾಯಾಲಯದಲ್ಲಿ ಪಡೆದುಕೊಳ್ಳಲು ನಿರ್ಧರಿಸಿದ್ದೇವೆ” ಎಂದರು.

”ರಾಜ್ಯ ಪಾಲರು ಸಂವಿಧಾನಕ್ಕೆ ವಿರುದ್ಧವಾದ ನಿರ್ಣಯ ಕೈಗೊಂಡಿದ್ದು, ನಮಗೆ ಕಾನೂನೂ ಹೋರಾಟ ಸೇರಿ ರಾಷ್ಟ್ರಪತಿಗಳವರೆಗೆ ಹೋಗಲು ಎಲ್ಲ ಅವಕಾಶ ಇದೆ” ಎಂದರು.

ಇಡೀ ಪಕ್ಷ ಸಿದ್ದರಾಮಯ್ಯ ಜತೆಗೆ
ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ”ಕಾನೂನಿನಲ್ಲಿ ನಮಗೆ ರಕ್ಷಣೆ ಇದೆ. ರಾಜ್ಯಪಾಲರ ನಿರ್ಧಾರ ಸಂವಿಧಾನಕ್ಕೆ ವಿರುದ್ಧವಾಗಿದೆ. ಅವರ ನಿರ್ಧಾರವನ್ನು ವಾಪಾಸ್ ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ರಾಜ್ಯದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನಿಂದ ಹಿಡಿದು ಮುಖಂಡರು,ಸಚಿವರು, ದೇಶದ ಎಲ್ಲ ನಾಯಕರು ಸಿದ್ದರಾಮಯ್ಯ ಅವರೊಂದಿಗೆ ಗಟ್ಟಿಯಾಗಿ ನಿಲ್ಲುತ್ತೇವೆ” ಎಂದರು.

ಎಲ್ಲರಿಗೂ ಧನ್ಯವಾದ ತಿಳಿಸಿದ ಸಿಎಂ

ಸುರ್ಜೇವಾಲಾ, ಡಿ.ಕೆ.ಶಿವಕುಮಾರ್ ಅವರು ಮಾತನಾಡಿದ ಬಳಿಕ ಸಿಎಂ ಸಿದ್ಧರಾಮಯ್ಯ ಅವರು ಹೆಚ್ಚು ಮಾತನಾಡದೆ ಕಾಂಗ್ರೆಸ್ ನ ಎಲ್ಲ ನಾಯಕರಿಗೆ ಧನ್ಯವಾದ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next