ಚಾಮರಾಜನಗರ: ವಿದ್ಯಾರ್ಥಿನಿಯರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಭಾರತ ಸೇವಾದಳ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಎಂ.ರಾಮಚಂದ್ರ ಸಲಹೆ ನೀಡಿದರು. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಮಹಿಳಾ ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿಸಿದರು.
ಮಹಿಳೆಯರಿಗೆ ಜಾಗೃತಿ ಶಿಬಿರ: ಭಾರತ ಸೇವಾದಳ ಪ್ರತಿಯೊಬ್ಬರಲ್ಲೂ ರಾಷ್ಟೀಯ ಭಾವೈಕ್ಯತೆ ಮೂಡಿಸುತ್ತದೆ. ಮಹಿಳೆಯರಿಗಾಗಿ ಜಾಗೃತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಮಹಿಳೆಯು ತಾಯಿಯಾಗಿ, ಕುಟುಂಬದ ಶಕ್ತಿಯಾಗಿ ನಿರ್ವಹಣೆ ಮಾಡುತ್ತಾಳೆ. ಪ್ರತಿಯೊಬ್ಬ ಸಾಧನೆ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದು, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಇದ್ದಾರೆ. ಮಹಿಳೆಯರು ಜಾಗೃತರಾಗಬೇಕಿದೆ ಎಂದರು.
ವಿದ್ಯಾರ್ಥಿನಿಯರು ಮೊಬೈಲ್‌ಗೆ ಮಾರುಹೋಗದೆ, ತುರ್ತು ಸಂದರ್ಭದಲ್ಲಿ ಸೇವಾ ಮನೋಭಾವನೆ ಮಾಡಬೇಕು. ವಿದ್ಯಾರ್ಥಿಗಳಾಗಿರುವ ನೀವು ಮುಂದಿನ ದಿನಗಳಲ್ಲಿ ಕೆಎಎಸ್, ಐಎಎಸ್ ಮಾಡುವ ಅವಕಾಶವಿದೆ. ತಾವು ತಮ್ಮ ವಿದ್ಯಾರ್ಥಿಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶಾಭಿಮಾನ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಹೆಣ್ಣುಮಕ್ಕಳಿಗೆ ಶಿಕ್ಷಣವೇ ವರದಾನ: ಕಾಲೇಜಿನ ಪ್ರಾಂಶುಪಾಲೆ ಡಾ.ಎಚ್.ಎಸ್.ಪ್ರೇಮಲತಾ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣವೇ ವರದಾನವಾಗಿದೆ. ಆತ್ಮವಿಶ್ವಾಸ ಬದುಕಿಗೆ ಶಿಕ್ಷಣಬೇಕಿದೆ. ಮನೆ ಬೆಳಗುವಳು, ಕುಟುಂಬ ಕಟ್ಟುವವಳು, ಸಂಸ್ಕೃತಿ ಕಟ್ಟುವವಳು ಹೆಣ್ಣು, ಮನುಕುಲದ ತಾಯಿಯಾದ ಹೆಣ್ಣಿನ ಮೇಲೆ ಭ್ರೂಣ ಹತ್ಯೆದಿಂದ ಹಿಡಿದು ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಹೆಣ್ಣುಮಗಳು ಘನತೆಯಿಂದ ಬದುಕುವ ಸಂವಿಧಾನಾತ್ಮಕ ಮೂಲಭೂತ ಹಕ್ಕುವಿದೆ. ಸಮಾನತೆ ದೊರೆಯುವ ಶಿಕ್ಷಣ ಬೇಕು. ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ ಅವಶ್ಯಕವಾಗಿದೆ. ಶಿಕ್ಷಣದಿಂದ ಜಾಗೃತರಾಗಬೇಕಿದೆ ಎಂದು ತಿಳಿಸಿದರು.
ಓದುವ ಪ್ರವೃತ್ತಿ ಬೆಳೆಸಿಕೊಳ್ಳಿ: ಭಾರತ ಸೇವಾದಳ ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿನಿಯರು ದಿನಪತ್ರಿಕೆಗಳನ್ನು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಒಳ್ಳೆಯ ಶಿಕ್ಷಣ ಪಡೆದು ಸರ್ವತೋಮುಖ ಅಭಿವೃದ್ಧಿ ಹೊಂದಿ ಸಮಾಜದಲ್ಲಿ ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಡಿ.ಆರ್.ಶೇಷಾಚಲ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಉಪನ್ಯಾಸ ನೀಡಿದರು. ನಿವೃತ್ತಿ ಹೊಂದಿದ್ದ ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಜೆ.ಜಾರ್ಜ್‌ಪಿಲಿಫ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಶಂಕರ್, ಭಾರತ ಸೇವಾ ದಳ ಜಿಲ್ಲಾ ಸಂಘಟಕ ಕೆ.ಈರಯ್ಯ, ಕಾಲೇಜು ಉಪಾನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.