Advertisement

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

08:17 AM Mar 29, 2024 | Suhan S |

ರಾಮನಗರ:  ಬೆಂಗಳೂರು ಗ್ರಾಮಾಂತರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್‌ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ಮತ್ತಿತರ ವಿವರಗಳನ್ನೂ ಘೋಷಿಸಿಕೊಂಡಿದ್ದಾರೆ.

Advertisement

ಸಂಸದ ಡಿ.ಕೆ.ಸುರೇಶ್‌ 106 ಕೋಟಿ ರೂ. ಮೌಲ್ಯದ ಚರಾಸ್ತಿ, 486.33 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ 150 ಕೋಟಿ ರೂ. ಸಾಲವನ್ನೂ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ ಮತ್ತು ವಿಮಾ ಪಾಲಿಸಿ ಸೇರಿ 1.66 ಕೋಟಿ ರೂ. ಠೇವಣಿ ಇರಿಸಿದ್ದು, ವಿವಿಧ ಸಂಸ್ಥೆಗಳಲ್ಲಿ 2.14 ಕೋಟಿ ರೂ. ಷೇರು ಬಂಡವಾಳ ಹೊಂದಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಲುಲೂ ಮಾಲ್‌, ಗ್ಲೋಬಲ್‌ ಮಾಲ್‌ನಲ್ಲಿ ಅವರು ಪಾಲುದಾರಿಕೆ ಹೊಂದಿದ್ದಾರೆ. ಅವರ ಒಟ್ಟಾರೆ ವಾಣಿಜ್ಯ ಬಳಕೆ ಆಸ್ತಿಗಳ ಮೌಲ್ಯ 35.41 ಕೋಟಿ ರೂ. ಇದೆ. 210 ಕೋಟಿ ರೂ. ಮೌಲ್ಯದ ಕೃಷಿ ಭೂಮಿ, ನಿವೇಶ

ನಗಳನ್ನು ಹೊಂದಿದ್ದಾರೆ. ಕನಕಪುರ ತಾಲೂಕಿನ ರಾಂಪುರ ದೊಡ್ಡಿ ಗ್ರಾಮದಲ್ಲಿ, ಬೆಂಗಳೂರಿನ ಸದಾಶಿವ ನಗರದಲ್ಲಿ, ಕೆಂಗೇರಿ ಪಂತರಪಾಳ್ಯದಲ್ಲಿ ವಾಸ ಯೋಗ್ಯ ಕಟ್ಟಡಗಳಿದ್ದು, ಅವುಗಳ ಮೌಲ್ಯವೇ 27.13 ಕೋಟಿ ರೂ. ಆಗಿದೆ.

ಸುರೇಶ್‌  4.77 ಲಕ್ಷ ರೂ. ನಗದು  ಹೊಂದಿದ್ದಾರೆ. ಅಣ್ಣ ಡಿ.ಕೆ.ಶಿವಕುಮಾರ್‌ಗೆ 30 ಕೋಟಿ ರೂ. ಸಾಲ ನೀಡಿರುವುದು ಸಹಿತ 86.79 ಕೋಟಿ ರೂ. ಸಾಲವನ್ನು ವಿವಿಧ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ನೀಡಿದ್ದಾರೆ. 1.260 ಕೆಜಿ ಚಿನ್ನ, 4.860 ಕೆ.ಜಿ. ಬೆಳ್ಳಿ,  73 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು ಮತ್ತು ಆಭರಣಗಳನ್ನು ಹೊಂದಿದ್ದಾರೆ.

Advertisement

ಪ್ರಕರಣಗಳ ಉಲ್ಲೇಖ:

ದ್ವಿತೀಯ ಪಿಯುಸಿವರೆಗೆ ಓದಿರುವ  ಸುರೇಶ್‌ ವಿರುದ್ಧ ಕೋವಿಡ್‌ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಎರಡು, ನೀತಿಸಂಹಿತೆ ಉಲ್ಲಂಘನೆ ಸಂಬಂಧಿಸಿ ರಾಜರಾಜೇಶ್ವರಿ ನಗರದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಆದಾಯ ತೆರಿಗೆ, ಬಿಬಿಎಂಪಿಗೆ ಆಸ್ತಿ ತೆರಿಗೆ ಸಹಿತ 64.44 ಕೋಟಿ ರೂ. ತೆರಿಗೆ ಪಾವತಿಸಬೇಕಾಗಿದೆ. ಈ ಪೈಕಿ 7.16 ಕೋಟಿ ರೂ. ತೆರಿಗೆ ಪಾವತಿಸಿದ್ದು, 57.27 ಕೋಟಿ ರೂ.  ಬಾಕಿ ಇದೆ. ತೆರಿಗೆ ಪಾವತಿಗೆ ಸಂಬಂಧಿಸಿ  ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಕರಣವಿದೆ.

ಹೆಚ್ಚಿದ ಆಸ್ತಿ ಮೌಲ್ಯ:

ಸಂಸದ ಡಿ.ಕೆ.ಸುರೇಶ್‌ ಮೌಲ್ಯ ಪ್ರತಿ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿದೆ. 2013ರಲ್ಲಿ ಆಸ್ತಿ ಮೌಲ್ಯ 47.29 ಕೋಟಿ ರೂ. ಇತ್ತು. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದಾಗ 85.87 ಕೋಟಿ ರೂ. ಗಳಿಗೆ ಹೆಚ್ಚಿತ್ತು. 2019ರಲ್ಲಿ 338.89 ಕೋಟಿ ರೂ. ಇದ್ದದ್ದು 592 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಸಾಲವೂ ಹೆಚ್ಚಳ:

ಆಸ್ತಿ ಜತೆಗೆ ಅವರ ಸಾಲವೂ ಹೆಚ್ಚಳವಾಗಿದೆ. 2013ರಲ್ಲಿ 17.70 ಕೋಟಿ ರೂ. ಇದ್ದ ಸಾಲ, 2014ರಲ್ಲಿ 18.48 ಕೋಟಿ ರೂ. ಇತ್ತು. 2019ರಲ್ಲಿ 51,93 ಕೋಟಿ ರೂ. ಇದ್ದ ಸಾಲ, ಈಗ 150 ಕೋಟಿ ರೂ. ಗಳಿಗೆ ತಲುಪಿದೆ.

ಕುಟುಂಬದವರಿಗೆ ಸಾಲ:

ಸಂಸದ ಸುರೇಶ್‌ 86.37 ಕೋಟಿ ರೂ. ಸಾಲ ನೀಡಿದ್ದಾರೆ. ಈ ಪೈಕಿ ತಮ್ಮ ಕುಟುಂಬದವರಿಗೆ ಹೆಚ್ಚಿನ ಸಾಲ ನೀಡಿದ್ದಾರೆ ಎಂಬುದು ವಿಶೇಷ. ಅಣ್ಣ ಡಿ.ಕೆ.ಶಿವಕುಮಾರ್‌ಗೆ 30 ಕೋಟಿ ರೂ., ಅಣ್ಣನ ಮಗಳು ಐಶ್ವರ್ಯ ಡಿಕೆಎಸ್‌ ಹೆಗ್ಡೆಗೆ 7.94 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ., ಅಣ್ಣನ ಮಗ ಆಕಾಶ್‌ ಕೆಂಪೇಗೌಡಗೆ 1.06 ಕೋಟಿ ರೂ., ತಮ್ಮ ಸಂಬಂಧಿ ಡಾ| ಸುಮಾ ರಂಗನಾಥ್‌ಗೆ 30 ಲಕ್ಷ ರೂ. ಸಾಲ ನೀಡಿದ್ದಾರೆ.

ಸಂಸದ ಸುರೇಶ್‌ ಆಸ್ತಿ ನೋಟ :

106 ಕೋ. ರೂ.- ಚರಾಸ್ತಿ ಮೌಲ್ಯ

486.33 ಕೋ. ರೂ- ಸ್ಥಿರಾಸ್ತಿ ಮೌಲ್ಯ

150 ಕೋ. ರೂ.- ಒಟ್ಟು ಸಾಲ

1.66 ಕೋ. ರೂ.- ಠೇವಣಿಗಳು

2.14 ಕೋ. ರೂ.- ಷೇರುಗಳಲ್ಲಿ ಹೂಡಿಕೆ

210 ಕೋ. ರೂ.- ಕೃಷಿ ಭೂಮಿ, ನಿವೇಶನ ಮೌಲ್ಯ

Advertisement

Udayavani is now on Telegram. Click here to join our channel and stay updated with the latest news.

Next