Advertisement

ಸೂರು ಇಲ್ಲದೆ ಕಣ್ಣೀರು ಹಾಕುವ ಬಡವರನ್ನು ಪರಿಗಣಿಸಿ

09:43 AM Jan 19, 2019 | Team Udayavani |

ಚಿತ್ರದುರ್ಗ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡವರನ್ನು ಮತ ಬ್ಯಾಂಕ್‌ ಮಾಡಿಕೊಂಡಿದ್ದಾರೆ. ನಿವೇಶನ ರಹಿತ ಬಡವರು ಸೂರಿಲ್ಲದೆ ಕಣ್ಣೀರು ಹಾಕುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಮಂಡ್ಯದ ವೆಂಕಟಗಿರಿಯಯ್ಯ ಹೇಳಿದರು.

Advertisement

ಇಲ್ಲಿನ ತ.ರಾ.ಸು ರಂಗಮಂದಿರದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಜಿಲ್ಲಾ ಶಾಖೆ ವತಿಯಿಂದ ಶುಕ್ರವಾರ ನಡೆದ ಚಿತ್ರದುರ್ಗ ನಗರದ ನಿವೇಶನ ರಹಿತ ನಿವಾಸಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಶ್ರಯ ಯೋಜನೆಯಡಿ ಎಲ್ಲ ಬಡವರಿಗೂ ಮನೆಗಳನ್ನು ಕಟ್ಟಿಸಿಕೊಟ್ಟರು. ಅಂದಿನಿಂದ ಇಲ್ಲಿಯತನಕ ಬೇರೆ ಯಾವ ಮುಖ್ಯಮಂತ್ರಿಯೂ ಅಂತಹ ಜನೋಪಕಾರಿ ಕೆಲಸ ಮಾಡಲಿಲ್ಲ ಎಂದರು.

ಎಲ್ಲಿಯ ತನಕ ಮತಗಳನ್ನು ಮಾರಿಕೊಳ್ಳುತ್ತೀರೋ ಅಲ್ಲಿಯತನಕ ಯಾವುದೇ ಮೂಲಭೂತ ಸೌಲಭ್ಯಗಳು ದೊರೆಯುವುದಿಲ್ಲ ಹಾಗೂ ಪ್ರಶ್ನಿಸುವ ಹಕ್ಕುಗಳನ್ನೇ ಕಳೆದುಕೊಳ್ಳಲಿದ್ದೇವೆ.

ಮದ್ಯ, ಸೀರೆ, ಪಂಚೆ, ಬಿರಿಯಾನಿ, ನೂರು, ನೂರು, ಐದು ನೂರು ರೂ.ಗಳಿಗೆ ಮತಗಳನ್ನು ಮಾರಾಟ ಮಾಡಿದರೆ ನಮ್ಮ ಪ್ರಶ್ನಿಸುವ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಆಗ ನಿವೇಶನ, ಮನೆ, ವಸತಿ ಸೇರಿದಂತೆ ಯಾವ ಸೌಲಭ್ಯಗಳನ್ನು ಕೇಳುವ ಹಕ್ಕು ಕಳೆದುಕೊಳ್ಳಲಿದ್ದೇವೆ. ಇನ್ನೂ ನೂರು ವರ್ಷ ಕಳೆದರೂ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ಎಚ್ಚರಿಸಿದರು.

Advertisement

ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗಿದೆ. ಬಡವರಿಗೆ, ಶೋಷಿತರಿಗೆ ಇಂದಿಗೂ ಸ್ವಂತ ನಿವೇಶನ, ಮನೆ, ವಸತಿ ಸೌಲಭ್ಯಗಳಿಲ್ಲದೆ ಕಷ್ಟದಲ್ಲಿ ಬದುಕು ಜನ ಇದ್ದಾರೆಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಾಚಿಕೆಯಾಗಬೇಕು. ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೊಸ ವರ್ಷ ಆಚರಣೆಗೆ ಹೊರದೇಶಕ್ಕೆ ಹೋದರು. ಪ್ರಧಾನಿ ನರೇಂದ್ರಮೋದಿ ಸೂಟು ಬೂಟು ಧರಿಸಿ ವಿದೇಶಗಳನ್ನು ಸುತ್ತುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯವನ್ನಾಳಿದ ಒಕ್ಕಲಿಗರು, ಲಿಂಗಾಯಿತ ಸಮುದಾಯದಲ್ಲಿಯೂ ನಿವೇಶನ ಮನೆ ಇಲ್ಲದವರು ಸಾಕಷ್ಟು ಮಂದಿ ಇದ್ದಾರೆ ಎನ್ನುವುದಾದರೆ ದಲಿತರು, ಶೋಷಿತರು, ಅಲ್ಪಸಂಖ್ಯಾತರ ಪಾಡೇನು ಎಂದು ಜನಪ್ರತಿನಿಧಿಗಳನ್ನು ತಡೆದು ಪ್ರಶ್ನಿಸಬೇಕಾಗಿದೆ ಎಂದರು. ದೌರ್ಜನ್ಯ ದಬ್ಟಾಳಿಕೆ ನಡೆಸುವವರ ಕೈಗೆ ಈಗಾಗಲೇ ಅಧಿಕಾರ ಕೊಟ್ಟಿದ್ದೇವೆ. ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಅರ್ಹರಿಗೆ ಮತ ನೀಡಬೇಕು. ಮೀಸಲಾತಿ ವಿರೋಧಿಗಳು, ಸಂವಿಧಾನ ಸುಡುವ, ತಿರುಚುವ ವ್ಯಕ್ತಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ದೇಶಕ್ಕೆ ಸಂವಿಧಾನ ಕೊಡುಗೆ ನೀಡಿದರು. ದಲಿತರು ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು ಎಲ್ಲರಿಗೂ ಮೂಲ ಸೌಲಭ್ಯಗಳು ಸಿಗಬೇಕೆಂಬ ಬಹುದೊಡ್ಡ ಆಸೆ ಯಿಟ್ಟುಕೊಂಡಿದ್ದರು. ಆದರೆ ಇಂದು ದೇಶವನ್ನಾಳುತ್ತಿರುವವರು ಬಡವರ ಯಾವ ಕಷ್ಟಗಳನ್ನು ಕೇಳುತ್ತಿಲ್ಲದಿರುವುದೇ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮಾಡನಾಯಕನಹಳ್ಳಿ ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಉಪಾಧ್ಯಕ್ಷ ಕೃಷ್ಣಪ್ಪ ಬೆಲ್ಲದಮಡು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌. ಗಾಳೆಮ್ಮನವರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಮಹದೇವಿ ಮುಕ್ರಿ, ಟಿ.ಬಸವರಾಜ್‌, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ಜಿಲ್ಲಾಧ್ಯಕ್ಷ ಕೆ.ಜಿ.ಅನಂತಮೂರ್ತಿನಾಯ್ಕ, ಹೆಗ್ಗೆರೆ ರಂಗಪ್ಪ, ಪಿ.ಎಂ.ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next