ಬೆಂಗಳೂರು: ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬೇಕು, ಇಲ್ಲವಾದಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಚಿಂತನೆ ಮಾಡಬೇಕಾಗುತ್ತದೆ ಎಂದು ಹುಣಸೂರು ಶಾಸಕ ಎಚ್.ವಿಶ್ವನಾಥ್ ಮಾಧ್ಯಮಗಳ ಮೂಲಕ ಜೆಡಿಎಸ್ ನಾಯಕರಿಗೆ ಗುರುವಾರ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್, ನನ್ನ ಅನುಭವವನ್ನು ಕುಮಾರಸ್ವಾಮಿ ಅವರಾಗಲಿ,ಸಿದ್ದರಾಮಯ್ಯ ಆಗಲಿ ಉಪಯೋಗಿಸಿಕೊಂಡಿಲ್ಲ ಎಂದರು.
ನನ್ನ ರಾಜೀನಾಮೆ ಅಂಗೀಕರಿಸಿ. ಇಲ್ಲವಾದಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಚಿಂತನೆ ಮಾಡಬೇಕಾಗುತ್ತದೆ ಎಂದು ಮಾಧ್ಯಮ ಮೂಲಕವೇ ಮನವಿ ಮಾಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಸಿಎಂ ಕುಮಾರಸ್ವಾಮಿ ಗೆ ರಾಜ್ಯಾಧ್ಯಕ್ಷ ಸ್ಥಾನ ವಹಿಸುವುದು ಉತ್ತಮ ಎಂದು ಸಲಹೆ ನೀಡಿದರು.
ಒಬ್ಬನಾಯಕನನ್ನು ರಾಜಕೀಯ ವಾಗಿ ಕೊಲ್ಲುವುದು ಒಳ್ಳೆಯದಲ್ಲ.ಸಿಎಂ ಜತೆ ಕೆಲಸ ಮಾಡಬೇಕೆಂಬ ಆಸೆ ಇತ್ತು,ಆದ್ರೆ ಸನ್ನಿವೇಶ ಆದಕ್ಕೆ ಆಸ್ಪದ ಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡರು.
ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ಮುಖಂಡ ರೋಷನ್ ಬೇಗ್ ಅವರನ್ನು ಅಮಾನತು ಮಾಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಿದ್ದರೆ ನನ್ನ ಕಥೆಯೂ ಇದಕ್ಕಿಂತ ಹೊರತಾಗ್ತಿರಲಿಲ್ಲ ಎಂದರು.
ಸಮನ್ವಯ ಸಮಿತಿಯಲ್ಲಿ ಸೇರ್ಪಡೆ ಮಾಡದೆ ಇದ್ದುದಕ್ಕಾಗಿ ಬೇಸರ ಹೊರ ಹಾಕಿದ ಅವರು ,ಸಮನ್ವಯದ ಅರ್ಥಾನೆ ಗೊತ್ತಿಲ್ಲದ ನೀವ್ಯಾವ ಸೀಮೆ ಅಧ್ಯಕ್ಷಾರೀ ಎಂದು ಸಿದ್ದರಾಮಯ್ಯ ವಿರುದ್ಧ ಮತ್ತೆ ಕಿಡಿಯಾದರು.