Advertisement
ಪಾಲಿಕೆ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆಗೆ ಸಿದ್ಧತೆ ನಡೆದಿದ್ದು, ಜಯಂತಿ ಅಂಗವಾಗಿ ಪಾಲಿಕೆಯಿಂದ ನೀಡುವ ಕೆಂಪೇಗೌಡ ಪ್ರಶಸ್ತಿ ಆಕಾಂಕ್ಷಿಗಳು ಪ್ರಭಾವಿಗಳಿಂದ ಶಿಫಾರಸು ತರುತ್ತಿದ್ದು, ತಮ್ಮನ್ನು ಪ್ರಶಸ್ತಿಗೆ ಪರಿಗಣಿಸುವಂತೆ ಕೋರುವವರ ಸಂಖ್ಯೆ ಹೆಚ್ಚಾಗುತ್ತಿದೆ.
Related Articles
Advertisement
ಪಾಲಿಕೆಯಿಂದ ಪ್ರತಿ ವರ್ಷ ಬೆಂಗಳೂರು ಕರಗ ನಡೆಯುವ ದಿನದಂದು ಕೆಂಪೇಗೌಡ ದಿನಾಚರಣೆ ಆಚರಿಸಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಆದರೆ, ಈ ಬಾರಿ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಿದ್ದ ಕಾರಣ ಕೆಂಪೇಗೌಡ ದಿನಾಚರಣೆ ಮುಂದೂಡಲಾಗಿತ್ತು.
ಪ್ರಶಸ್ತಿಗೆ ಅರ್ಹರ ಆಯ್ಕೆಗೆ ಮೇಯರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಆಡಳಿತ ಪಕ್ಷದ ನಾಯಕ ಶಿವರಾಜ್, ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಆಯುಕ್ತ ಮಂಜುನಾಥಪ್ರಸಾದ್ ಸದಸ್ಯರಾಗಿದ್ದಾರೆ.
ಶಿಫಾರಸ್ಸು ಮಾಡಿದ ಪ್ರಮುಖರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕ್ರೀಡಾ ಕ್ಷೇತ್ರದಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡುವಂತೆ ಶಿಫಾರಸು ಪತ್ರ ಕಳುಹಿಸಿದ್ದಾರೆ. ಜತೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರಂಗಭೂಮಿ ಕ್ಷೇತ್ರದ ಒಬ್ಬ ಸಾಧಕರಿಗೆ ಪ್ರಶಸ್ತಿ ನೀಡುವಂತೆ ತಿಳಿಸಿದ್ದಾರೆ. ಅದೇ ರೀತಿ ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಸೇರಿ ಹಲವು ಪ್ರಮುಖರು ಶಿಫಾರಸು ಪತ್ರ ನೀಡಿದ್ದಾರೆೆ.
ಜಯಂತಿ ವಿಳಂಬಕ್ಕೆ ಸಿಎಂ ಕಾರಣ: ಮುಖ್ಯಮಂತ್ರಿಯವರ ಸಮಯ ಪಡೆದು ಈ ಹಿಂದೆ ಜು.18ರಂದು ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸಿಎಂ ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬರಲಾಗದು ಎಂದು ಪತ್ರ ಕಳುಹಿಸಿದ್ದರು. ಆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಮುಖ್ಯಮಂತ್ರಿಗಳ ದಿನಾಂಕ ದೊರೆತ ಕೂಡಲೆ ದಿನ ಅಂತಿಮಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.