ಬೀದರ: ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಬಾಬುರಾವ್ ಹೊನ್ನಾ, ಜಿಲ್ಲಾಧ್ಯಕ್ಷೆ ಲಕ್ಷ್ಮೀ ದಂಡೆ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ ಬಳಿಕ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಸುಮಾರು 1.40 ಲಕ್ಷ ಜನರು ಅಂಗನವಾಡಿಗಳಲ್ಲಿ ಕೆಲಸ ಮಾಡುತ್ತಿದ್ದು, ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತ ಬಂದರೂ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಲ್ಲ ದೂರಿದರು.
ಸರ್ಕಾರಿ ನೌಕರರಿಗೆ ಅನ್ವಯಿಸುವ ವೇತನ ಶ್ರೇಣಿಯಂತೆ ಕನಿಷ್ಟ ಪ್ರತಿ ತಿಂಗಳು 26,000 ರೂ. ನಿಗದಿಪಡಿಸಬೇಕು. ಕನಿಷ್ಟ ನಿವೃತ್ತಿ ವೇತನ ರೂ. 10,000 ಕೊಡಬೇಕು. ಸೇವಾ ಹಿರಿತನದ ಆಧಾರದ ಮೇಲೆ ಮೇಲ್ವಿಚಾರಕಿಯರ ಹುದ್ದೆಗಳಲ್ಲಿ ಶೇ.75 ಹುದ್ದೆಗಳನ್ನು ಅಂಗವಾಡಿ ಕಾರ್ಯಕರ್ತೆಯರಿಗೆ ಮೀಸಲಿಡಬೇಕು. ಇಎಸ್‌ಐ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಬೇಕು. ಸೇವೆಯಿಂದ ತೆಗೆದುಹಾಕಿರುವ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಬೇಕು. ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಸುಲೋಚನಾ ಪೂಜಾರಿ, ಬಸಮ್ಮಾ ಹಾರೂರಗೇರಿ, ಶಕುಂತಲಾ ಅಮಲಾಪುರ, ಇಂದುಮತಿ, ಸುಜಾತಾ ಲಖ್ಖನ್ ಸೇರಿದಂತೆ ಇತರರಿದ್ದರು.