ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೆರೆ, ಕುಂಟೆ, ಕಾಲುವೆ, ಕಲ್ಯಾಣಿಗಳು, ರಾಜಕಾಲುವೆಗಳನ್ನು ಸಂರಕ್ಷಣೆ ಮಾಡಲು ಪ್ರಥಮ ಆದ್ಯತೆ ನೀಡಿ, ಒತ್ತುವರಿ ಮಾಡಿ ಕೊಂಡಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸ ಲಾಗು ವುದು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದರು.
ನಗರದ ವಿವಿಧ ಭಾಗಗಳಲ್ಲಿ ಹರಿಯುತ್ತಿರುವ ಕಾಲುವೆಗಳನ್ನು ವೀಕ್ಷಿಸಿ ಮಾತನಾಡಿ, ಮಳೆ ನೀರು ಸಂರಕ್ಷಣೆ ಮಾಡುವ ಸಲುವಾಗಿ ಕೆರೆ, ಕುಂಟೆ, ಕಾಲುವೆ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಆದ್ಯತೆ ನೀಡಿದೆ. ನಾಗರಿಕರು ಜಲಮೂಲ ಸಂರಕ್ಷಣೆ ಮಾಡಲು ಜಿಲ್ಲಾಡಳಿತ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಒತ್ತುವರಿ ಮಾಡಿದ್ರೆ ತೆರವು ಮಾಡಿ: ಯಾರಾದರೂ ಕೆರೆ, ಕಾಲುವೆ ಅಕ್ರಮ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ನಿರ್ದಾಕ್ಷಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿಥಿಲ ಮನೆಯಲ್ಲಿ ವಾಸ ಬೇಡ: ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಶಿಥಿಲಾವ್ಯವಸ್ಥೆಯಲ್ಲಿರುವ ಮನೆ ಯಲ್ಲಿ ನಾಗರಿಕರು ವಾಸ ಮಾಡಬಾರದೆಂದು ಮನವಿ ಮಾಡಿದರು. ಕಳೆದ ವರ್ಷ ಸುರಿದಿರುವ ಮಳೆಯಿಂದ ಹಾನಿ ಆಗಿರುವ ಮನೆಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಕೆಲವೊಂದು ಮನೆಗೆ ಜಿಪಿಎಸ್ ಮಾಡಿದರೂ ಪರಿಹಾರ ಸಿಕ್ಕಿಲ್ಲ ಎಂಬ ದೂರು ಕೇಳಿ ಬಂದಿದೆ. ಅದನ್ನು ಸಹ ಇತ್ಯರ್ಥ ಮಾಡುವುದಾಗಿ ಡೀಸಿ ಭರವಸೆ ನೀಡಿದರು.
ಚರಂಡಿ ಕಾಲುವೆ ಸ್ವಚ್ಛಗೊಳಿಸಿ: ಜಿಲ್ಲೆಯ ನಗರ, ಗ್ರಾಮೀಣ ಪ್ರದೇಶದಲ್ಲಿರುವ ಕಾಲುವೆಗಳನ್ನು ಸ್ವಚ್ಛಗೊಳಿಸಿ, ಮಳೆ ನೀರು ಸರಾಗವಾಗಿ ಕೆರೆಗಳಿಗೆ ಹರಿಯಲು ಕ್ರಮಕೈಗೊಳ್ಳಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಾಕೃತಿಕ ವಿಪತ್ತಿನ ಹಿನ್ನೆಲೆಯಲ್ಲಿ ನಾಗರಿಕರ ದೂರು ಆಲಿಸುವ ಸಲುವಾಗಿ ಪ್ರತಿ ತಾಲೂಕಿನಲ್ಲಿ ಸಹಾಯವಾಣಿ ಕೇಂದ್ರ ತೆರೆದು, ಸಮಸ್ಯೆ ಇತ್ಯರ್ಥ ಮಾಡಲು ಅಧಿ ಕಾರಿಗಳಿಗೆ ಆದೇಶಿಸಲಾಗಿದೆ ಎಂದು ವಿವರಿಸಿದರು.
ಅಧಿಕಾರಿಗಳ ಜತೆ ಸಭೆ: ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಧಿಕಾರಿ ಎನ್.ಎಮ್.ನಾಗರಾಜ್ ಅವರು, ಶುಕ್ರವಾರ ಜೂಮ್ ಆ್ಯಪ್ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿಯ ತುರ್ತು ಸಭೆ ನಡೆಸಿದರು. ಸಭೆ ನಂತರ ನಗರದ ರಂಗಧಾಮ ಕೆರೆಯಿಂದ ಕಂದವಾರ ಕೆರೆ ಸಂಪರ್ಕಿಸುವ ಡಿವೈನ್ ಸಿಟಿ ಹತ್ತಿರದ ರಾಜಕಾಲುವೆ, ಕಂದವಾರ ಕೆರೆಯಿಂದ ಅಮಾನಿ ಗೋಪಾಲಕೃಷ್ಣಕೆರೆ ಕೆರೆ ಸಂಪರ್ಕಿಸುವ ಕಾಲುವೆ ಪರಿಶೀಲಿಸಿದರು.
ಕೊನೆಯದಾಗಿ ವಿನಾಯಕ ಬಡಾವಣೆಗೆ ಭೇಟಿ ನೀಡಿದ್ದರು. ಜಿಲ್ಲಾ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ಗಣಪತಿಶಾಸ್ತ್ರಿ, ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.