ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ರಾಜ್ಯ ಸಚಿವ ಸಂಪುಟ ಹಿಂಪಡೆದಿರುವ ತೀರ್ಮಾನದಲ್ಲಿ ಯಾವುದೇ ರೀತಿಯಲ್ಲೂ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದೆ.
ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ರಾಜ್ಯ ಸರಕಾರ ಕಳೆದ ನವೆಂಬರ್‌ನಲ್ಲಿ ಹಿಂದೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.
ಡಿ ಕೆ.ಶಿವಕುಮಾರ್ ವಿರುದ್ಧದ ತನಿಖೆಗೆ ಸಮ್ಮತಿ ನೀಡುವಾಗ ಯಾವ ಸೆಕ್ಷನ್‌ಗಳಡಿ ಅಪರಾಧವಿದೆ ಎಂದು ಅಂದಿನ ರಾಜ್ಯ ಸರಕಾರ ತಿಳಿಸಿಲ್ಲ. ಒಕ್ಕೂಟ ವ್ಯವಸ್ಥೆಯ ನಿಯಮಗಳ ಪಾಲನೆ ಆಗಿಲ್ಲ. ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಿರುವ ಕ್ರಮವೇ ಕಾನೂನುಬಾಹಿರ. ಆದ್ದರಿಂದ ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಜಾ ಗೊಳಿಸಬೇಕೆಂದು ರಾಜ್ಯ ಸರಕಾರದ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರು.
ಡಿ.ಕೆ.ಶಿವಕುಮಾರ್ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಒಕ್ಕೂಟ ವ್ಯವಸ್ಥೆ ಸಂವಿಧಾನದ ಅತ್ಯಗತ್ಯ ಭಾಗವಾಗಿದೆ. ಮೊದಲು ಕೇಂದ್ರ, ಬಳಿಕ ರಾಜ್ಯ ಸರಕಾರ ಸಿಬಿಐ ತನಿಖೆಗೆ ಅನುಮತಿ ನೀಡಬೇಕು. ಕೇಂದ್ರ ಅನುಮತಿ ನೀಡಿದರೂ ರಾಜ್ಯ ಸರಕಾರದ ಸಮ್ಮತಿ ಇಲ್ಲದೆ ತನಿಖೆ ನಡೆಸುವುದಕ್ಕೆ ಅವಕಾಶವೇ ಇಲ್ಲ ವಾದಿಸಿದರು.
ಸಿಬಿಐ ಕೇಂದ್ರ ಸರಕಾರದ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಸಿಬಿಐ ಯಾವ ರಸ್ತೆಗೆ, ಯಾರ ಮನೆಗೆ ಹೋಗಬೇಕು, ಎಲ್ಲಿಗೆ ಹೋಗಬೇಕೆಂದು ಕೇಂದ್ರ ಸರಕಾರ ನಿರ್ಧರಿಸುತ್ತಿದೆ. ಉಳಿದಂತೆ ತನಿಖೆಯನ್ನು ಮಾತ್ರ ಸಿಬಿಐ ನಡೆಸುತ್ತಿದೆ. ಹೀಗಾಗಿ ಸಿಬಿಐ ತನಿಖೆಯು ಒಕ್ಕೂಟ ವ್ಯವಸ್ಥೆಗೆ ಸಹಾಯಕವಾಗಿಲ್ಲ ಎಂದು ವಾದಿಸಿದರು.
ಸಿಬಿಐ ಪರ ವಕೀಲರು ವಾದ ಮಂಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿತು.