Advertisement

ಕೆಐಎಡಿಬಿಯಿಂದ ಹಂಚಿಕೆಯಾದ ಭೂಮಿಯನ್ನು 10 ವರ್ಷಗಳ ಅವಧಿಯ ಲೀಸ್ ಕಂ ಸೇಲ್‌ಗೆ‌ ನೀಡಲು ಸಮ್ಮತಿ

04:22 PM Jan 01, 2022 | Team Udayavani |

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಮೂಲಕ ಕೈಗಾರಿಕಾ ಉದ್ದೇಶಗಳಿಗೆ ಹಂಚಿಕೆಯಾದ ಎರಡು ಎಕರೆಗೂ ಹೆಚ್ಚಿನ ಭೂಮಿಯನ್ನು 10 ವರ್ಷಗಳ ಅವಧಿಯ ಭೋಗ್ಯ ಮತ್ತು ಮಾರಾಟ (ಲೀಸ್ ಕಂ ಸೇಲ್ )ಕ್ಕೆ ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿದೆ.

Advertisement

ಈ ಮೂಲಕ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್.ನಿರಾಣಿ ಅವರು ‘ಹೊಸ ವರ್ಷದ ಬಂಪರ್ ಕೊಡುಗೆ’ ನೀಡಿದ್ದಾರೆ.

ಮುಂಬರುವ 2022ರ ಹೊಸ ವರ್ಷ ಕರ್ನಾಟಕಕ್ಕೆ ಉದ್ದಿಮೆದಾರರು ಹಾಗೂ ಹೂಡಿಕೆದಾರರನ್ನು ಕೈ ಬೀಸಿ ಕರೆಯುತ್ತಿದ್ದು, ರಾಜ್ಯದಲ್ಲಿ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳಿಗೆ ಹಿಂದೆಂದೂ ಸಿಗದಷ್ಟು ಪ್ರೋತ್ಸಾಹ ಹಾಗೂ ಕೈಗಾರಿಕಾ ಸ್ನೇಹಿ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ದೇಶಿತ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗಿದ್ದು, ಇನ್ನು ಮುಂದೆ 10 ವರ್ಷಗಳ ಅವರಿಗೆ ಕೈಗಾರಿಕಾ ಉದ್ದೇಶಗಳಿಗೆ ನೀಡಲಾದ ಜಮೀನನ್ನು ಲೀಸ್ ಕಂ ಸೇಲ್‍ಗೆ ನೀಡಲು ಸಮ್ಮತಿಸಲಾಗಿದೆ.

ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಬಂಡವಾಳ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಸುಲಲಿತ ವಹಿವಾಟು ನಡೆಸಲು ಅನುಕೂಲವಾಗುವಂತೆ ಶೀಘ್ರದಲ್ಲೇ ಹೊಸ ನೀತಿ ನಿಯಮಗಳನ್ನು ರೂಪಿಸಲಾಗುವುದು ಎಂದು ಸಚಿವ ನಿರಾಣಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಹರ್ಯಾಣ: ಭಿವಾನಿ ಗಣಿಗಾರಿಕೆ ಪ್ರದೇಶದಲ್ಲಿ ಭೂಕುಸಿತ, ಇಬ್ಬರ ಸಾವು, ಬಿರುಸಿನ ರಕ್ಷಣಾ ಕಾರ್ಯ

Advertisement

“ಅಸ್ತಿತ್ವದಲ್ಲಿರುವ ನೀತಿಯಿಂದಾಗಿ ರಾಜ್ಯದಲ್ಲಿ ಹೂಡಿಕೆ ಮಾಡಲು ಕೈಗಾರಿಕೆಗಳ ಕಾಳಜಿ ಮತ್ತು ಅನೇಕ ಹೂಡಿಕೆದಾರರ ಹಿಂಜರಿಕೆಯನ್ನು ಪರಿಹರಿಸಿ, ಕೆಐಎಡಿಬಿ ಭವಿಷ್ಯದಲ್ಲಿ ಎಲ್ಲಾ ಜಮೀನುಗಳನ್ನು ಖಾಸಗಿ ಕೈಗಾರಿಕೆಗಳು/ಸಂಸ್ಥೆಗಳಿಗೆ 10 ವರ್ಷಗಳ ಗುತ್ತಿಗೆ ಕಮ್ ಮಾರಾಟದ ಆಧಾರದ ಮೇಲೆ ಹಂಚಲಿದೆ. ಹೊಸ ಯೋಜನೆಗೆ ನಿಯಮಗಳನ್ನು ರೂಪಿಸಲಾಗುತ್ತಿದೆ ಮತ್ತು ಒಂದೆರಡು ವಾರಗಳಲ್ಲಿ ಪೂರ್ಣ ಪ್ರಮಾಣದ ಸರ್ಕಾರಿ ಆದೇಶವನ್ನು ಹೊರಡಿಸುವ ನಿರೀಕ್ಷೆಯಿದೆ” ಎಂಬ‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಐಎಡಿಬಿಯಿಂದ ಕೇವಲ 99 ವರ್ಷಗಳ ಲೀಸ್ ಆಧಾರದ ಮೇಲೆ 2 ಎಕರೆಗಿಂತ ಹೆಚ್ಚಿನ ಭೂಮಿಯನ್ನು ಮಂಜೂರು ಮಾಡುವುದರಿಂದ ಹಲವಾರು ಪ್ರಮುಖ ಖಾಸಗಿ ಕಂಪನಿಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಹಿಂಜರಿಯುತ್ತಿದ್ದವು. ಮಂಜೂರು ಮಾಡಿದ ಭೂಮಿಯನ್ನು ಮಾರಾಟ ಮಾಡಲು ಎಂದಿಗೂ ಅವಕಾಶವಿರಲಿಲ್ಲ.

“ಈ ಹಿಂದಿನ ಷರತ್ತಿನ ಪ್ರಕಾರ, ಕೈಗಾರಿಕೆಗಳಿಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಮತ್ತು ಬಂಡವಾಳದ ಒಳಹರಿವು ಪಡೆಯಲು ಹಾಗೂ ಗುತ್ತಿಗೆ ಪಡೆದ ಭೂಮಿಯನ್ನು ಅಡಮಾನಗೊಳಿಸಲು ತೊಂದರೆಗಳು ಎದುರಾಗಿದ್ದತ್ತು. ಇದರ ಪರಿಣಾಮ ರಾಜ್ಯದಲ್ಲಿ  ಹೂಡಿಕೆಯ ಹರಿವಿಗೆ ಅಡ್ಡಿಯಾಗಿದ್ದರಿಂದ ಇಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,”ಎಂದು ಸಚಿವರು ವಿವರಿಸಿದರು.

ಪ್ರಸ್ತಾವಿತ ತಿದ್ದುಪಡಿಯ ಮೂಲಕ, ಯಾವುದೇ ಕೈಗಾರಿಕಾ ಘಟಕವು ಭೂ ಹಂಚಿಕೆಯ ನಂತರ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ, ಅವರು ಹತ್ತು ವರ್ಷಗಳವರೆಗೆ ಕಾಯದೆ ಕೆಐಎಡಿಬಿಯಿಂದ ಮಾರಾಟ ಪತ್ರದ ಶೀರ್ಷಿಕೆಯನ್ನು ಪಡೆಯಲು ಅರ್ಹತೆ ಪಡೆಯುತ್ತಾರೆ. ಇಲಾಖೆಯು ತನ್ನ ಅಧಿಕಾರಿಗಳ ಮೂಲಕ ಉದ್ಯಮದ 24 ತಿಂಗಳ ಬ್ಯಾಲೆನ್ಸ್‌ ಶೀಟ್‌ ಪರಿಶೀಲಿಸಿ ಎಲ್ಲವೂ ನಿಯಮಬದ್ಧವಾಗಿದ್ದರೆ, ಸೇಲ್‌ ಡೀಡ್‌ ಕೊಡಲಾಗುತ್ತದೆ. ಇದರಿಂದ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಅನುಕೂಲವಾಗುತ್ತದೆ. ಕೆಐಎಡಿಬಿ ನಿಯಮಗಳ ಪ್ರಕಾರ, ಎಂಎಸ್ಎಂಇ ವಲಯಗಳು ಭೂಮಿಯನ್ನು ಹಂಚಿಕೆ ಮಾಡಿದ ದಿನಾಂಕದಿಂದ ಮೂರು ವರ್ಷಗಳೊಳಗೆ ಉದ್ಯಮವನ್ನು ಸ್ಥಾಪಿಸಿ, ಉತ್ಪಾದನೆಯನ್ನು ಪ್ರಾರಂಭಿಸಬೇಕು. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಐದು ವರ್ಷಗಳ ಸಮಯವನ್ನು ‌ನೀಡಲಾಗಿದೆ.

“ತಿದ್ದುಪಡಿಯು ಉದ್ಯಮದ ವಿಸ್ತರಣೆ ಮತ್ತು ಇನ್ನೂ ಹೆಚ್ಚಿನ ಹೂಡಿಕೆಗೆ ಪ್ರೋತ್ಸಾಹಿಸುತ್ತದೆ, ಏಕೆಂದರೆ ಉದ್ಯಮಿಗಳು ಕಂಪನಿಯನ್ನು ಯಶಸ್ವಿಯಾಗಿ ನಡೆಸಿದ ನಂತರ ಮಂಜೂರು ಮಾಡಿದ ಭೂಮಿ ಅವರ ಮಾಲೀಕತ್ವದಲ್ಲಿರುತ್ತದೆ” ಎಂದು ಸಚಿವ ಮುರುಗೇಶ್ ‌ನಿರಾಣಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next