Advertisement

ಪ್ರವಾಸಿಮಿತ್ರರ ಸೇವೆ ಮುಂದುವರಿಕೆಗೆ ಸಮ್ಮತಿ

02:42 PM Apr 30, 2022 | Team Udayavani |

ಹೊಸಪೇಟೆ: ಪ್ರವಾಸಿಗರ ಸುರಕ್ಷತೆ ಮತ್ತು ರಕ್ಷಣೆಗಾಗಿ ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವಾಸಿಮಿತ್ರರ ಸೇವೆಯನ್ನು ಮುಂದುವರಿಸಿ ಪ್ರವಾಸೋದ್ಯಮ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

Advertisement

ಕಳೆದ ಒಂದು ತಿಂಗಳಿಂದ ಸರ್ಕಾರದ ಆದೇಶಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿದ್ದ ಪ್ರವಾಸಿಮಿತ್ರರ ಸೇವೆ ಮುಂದುವರಿಸಲು ಆದೇಶ ಹೊರಡಿಸಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಆರಕ್ಷಕ ಮಹಾನಿರ್ದೇಶಕರು ಹಾಗೂ ಗೃಹರಕ್ಷಕ ದಳದ ಮಹಾ ಸಮಾದೇಷ್ಟರು ಮತ್ತು ಪೌರರಕ್ಷಣೆ ಇವರಿಗೆ ಪತ್ರ ಬರೆದಿದ್ದಾರೆ.

ಕಳೆದ ಏಳೆಂಟು ವರ್ಷದಿಂದ ರಾಜ್ಯದ 30 ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 930 ಜನ ಪ್ರವಾಸಿಮಿತ್ರ ಸಿಬ್ಬಂದಿ ಸೇವೆ ಕಳೆದ ಮಾ. 31ಕ್ಕೆ ಕೊನೆಗೊಂಡಿತ್ತು. ಏಪ್ರಿಲ್‌ ಅಂತ್ಯಕ್ಕೆ ಬಂದಿದ್ದರೂ ಸರ್ಕಾರದಿಂದ ಯಾವುದೇ ಆದೇಶ ಹೊರ ಬಿದ್ದಿರಲ್ಲಿಲ್ಲ.ಇದರಿಂದ ಪ್ರವಾಸಿಮಿತ್ರರು ಚಿಂತಗೀಡಾಗಿದ್ದರು. ಇದೀಗ ಸರ್ಕಾರದ ಆದೇಶ ಹೊರಬಿದ್ದಿದ್ದು, ನೆಮ್ಮದಿ ನಿಟ್ಟಿಸಿರು ಬಿಟ್ಟಿದ್ದಾರೆ.

ಯಾರಿವರು ಪ್ರವಾಸಿ ಮಾರ್ಗದರ್ಶಿ

ಹೆಚ್ಚು, ಹೆಚ್ಚು ಪ್ರವಾಸಿಗರು, ಪ್ರವಾಸಿ ತಾಣಗಳತ್ತ ಮುಖ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕಳೆದ 2015ರಲ್ಲಿ ಕಾಂಗ್ರೆಸ್‌ ಸರ್ಕಾರ, ಪ್ರವಾಸಿಮಿತ್ರ ಯೋಜನೆಯನ್ನು ರಾಜ್ಯಕ್ಕೆ ಪರಿಚಯಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಗೃಹರಕ್ಷಕ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿ ಅಣಿಗೊಳಿಸಲಾಗಿತ್ತು.

Advertisement

ಈ ಯೋಜನೆ ಅಡಿಯಲ್ಲಿ ಮೊದಲ ಹಂತದಲ್ಲಿ 472 ಎರಡನೇ ಹಂತದಲ್ಲಿ 458 ಒಟ್ಟು 930 ಗೃಹರಕ್ಷಕ ಸಿಬ್ಬಂದಿ ರಾಜ್ಯ ವಿವಿಧ ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ನಿಯೋಜಿಸಿತ್ತು. ಪ್ರವಾಸೋದ್ಯಮ ಇಲಾಖೆಯಿಂದ ತರಬೇತಿ ಪಡೆದ 930 ಸಿಬ್ಬಂದಿಗಳಲ್ಲಿ 500 ಗೃಹರಕ್ಷಕರ ಸೇವೆಯನ್ನು ರಾಜ್ಯದ 30 ಜಿಲ್ಲೆಗಳ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸರದಿ ಆಧಾರ ಮೇಲೆ ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಯಿಸುವ ಷರತ್ತಿಗೊಳ್ಳಪಟ್ಟು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಬೆಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕರ್ತವ್ಯ ಭತ್ಯೆ ಸೇರಿ ಒಟ್ಟು 455 ರೂ. ಇತರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಪತ್ರಿ ತಿಂಗಳು 380 ರೂ ಹಾಗೂ 80 ರೂ ಗಳನ್ನು ಸ್ವಚ್ಚತೆ ಭತ್ಯೆ ಕೂಡ ಕಳೆದ ಮಾರ್ಚ್‌ 2022 ವರೆಗೆ ಪಾವತಿ ಮಾಡಿದೆ.

ದಿನಭತ್ಯೆ ಹೆಚ್ಚಳ

ಇತ್ತೀಚಿಗೆ ರಾಜ್ಯ ಸರ್ಕಾರ, ಗೃಹರಕ್ಷಕ ಸಿಬ್ಬಂದಿಗೆ 380 ರೂ. ಇದ್ದ ದಿನಭತ್ಯೆಯನ್ನು 600 ರೂಗಳಿಗೆ ಹೆಚ್ಚಿಸಿದೆ. ಏಪ್ರಿಲ್‌ ತಿಂಗಳಿಂದ ಸಿಬ್ಬಂದಿಗೆ ದಿನಭತ್ಯೆ 600 ರೂ.ನೀಡಬೇಕಿದೆ.

ತಡವಾಯಿತು ಏಕೆ

ಕೋವಿಡ್‌ ನಾಲ್ಕನೇ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಮಿತ್ರ ಸಿಬ್ಬಂದಿಯನ್ನು ಪ್ರವಾಸಿ ತಾಣಗಳಲ್ಲಿ ನಿಯೋಜನೆ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಒಂದೊಮ್ಮೆ ಇವರನ್ನು ಕರ್ತವ್ಯಕ್ಕೆ ನಿಯೋಜಿಸಿಕೊಂಡರೆ, ಸರ್ಕಾರದ ಮೇಲೆ ಹೊರೆ ಬೀಳಲಿದೆ ಎಂಬ ಯೋಚನೆ ಕೂಡ ಸರ್ಕಾರದ ಮುಂದಿತ್ತು. ಇದೆಲ್ಲವನ್ನೂ ಬದಿಗಿಟ್ಟ ಸರ್ಕಾರ ಪ್ರವಾಸಿಮಿತ್ರರನ್ನು ಮುಂದುವರೆಸಿದೆ. ಸ್ಮಾರಕಗಳ ಮಾಹಿತಿ, ಸುರಕ್ಷತೆ ಬಗ್ಗೆ ಜಾಗತಿ ಮೂಡಿಸುತ್ತಿದ್ದ ಪ್ರವಾಸಿಮಿತ್ರ ಸಿಬ್ಬಂದಿಗಳಿಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ.

ಪ್ರವಾಸಿಗರು ಹೈರಾಣ

ತೆರೆದ ವಸ್ತು ಸಂಗ್ರಾಲಯದ ಎಂದು ಕರೆಸಿಕೊಳ್ಳುವ ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರಿಗೆ ಮಾಹಿತಿ ಕೊರತೆ ಎದುರಾಗಿದೆ. ಹಂಪಿ ಪ್ರಮುಖ ಸ್ಮಾರಕಗಳನ್ನು ಕಾಲ್ನಡಿಗೆಯಲ್ಲಿ ತೆರಳಿ ವೀಕ್ಷಣೆ ಮಾಡಬೇಕಿರುವುದರಿಂದ ಪ್ರವಾಸಿಗರು ದಾರಿ ತೋರುವವರಿಲ್ಲ. ಪ್ರಮುಖ ಸ್ಮಾರಕಗಳ ಕುರಿತು ಮಾಹಿತಿ ಹಾಗೂ ಸರಿಯಾದ ಮಾರ್ಗ, ಕಡಿಮೆ ಅಂತರದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲದೇ ಸುಡ ಬಿಸಿಲಿನಲ್ಲಿ ಪ್ರವಾಸಿಗರು ಹೈರಾಣಾಗುತ್ತಿದ್ದಾರೆ.

ರಾಜ್ಯದ 30 ಜಿಲ್ಲೆಗಳ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಸರದಿ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ 830 ಪ್ರವಾಸಿಮಿತ್ರ ಸಿಬ್ಬಂದಿಗೆ ಏಪ್ರಿಲ್‌ ತಿಂಗಳು ಕೊನೆಗೊಳ್ಳುತ್ತಿದ್ದರೂ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿದ್ದಿಲ್ಲ. ಇದೀಗ ಪ್ರವಾಸಿಮಿತ್ರರ ಸೇವೆ ಮುಂದುವರಿಕೆ ಸರ್ಕಾರ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. -ಟಿ.ಹನುಮಂತರೆಡ್ಡಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಪ್ರವಾಸಿಮಿತ್ರ ಸಂಘ, ಬೆಂಗಳೂರು.

ಹಂಪಿಯ ಪ್ರಮುಖ ಪ್ರವಾಸಿತಾಣಗಳಲ್ಲಿ ಪ್ರವಾಸಿಮಿತ್ರರ ಸೇವೆಯನ್ನು ಮುಂದುವರಿಸಲು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಆದೇಶ ನೀಡಿದ್ದಾರೆ. ಶೀಘ್ರದಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗುವುದು. – ತಿಪ್ಪೇಸ್ವಾಮಿ, ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಮಲಾಪುರ.

– ಪಿ. ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next