Advertisement

ಸಂಪರ್ಕ ರಸ್ತೆಗೆ ಕೊನೆಗೂ ಅಭಿವೃದ್ಧಿ  ಭಾಗ್ಯ

10:08 AM Jul 15, 2018 | Team Udayavani |

ಮಹಾನಗರ : ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ (ಕಂಕನಾಡಿ) ಪಂಪ್‌ವೆಲ್‌ ಹಾಗೂ ಪಡೀಲ್‌ ಭಾಗದಿಂದ ಬರುವ ವಾಹನಗಳು ನಿತ್ಯ ಇಕ್ಕಟ್ಟಿನ ರಸ್ತೆಯಲ್ಲಿ ಸಂಚರಿಸಬೇಕಾಗಿತ್ತು. ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಯಲ್ಲಿ ನಿತ್ಯ ವಾಹನದಟ್ಟಣೆಯಿಂದ ಸಮಸ್ಯೆಗಳಾಗುತ್ತಿದ್ದವು. ಇದೀಗ ಎಚ್ಚೆತ್ತು ಕೊಂಡ ಮಹಾನಗರ ಪಾಲಿಕೆ ಸುಸಜ್ಜಿತ ರೀತಿಯಲ್ಲಿ ರಸ್ತೆ ವಿಸ್ತರಿಸಲು ಮುಂದಾಗಿದೆ. ಈಗಾಗಲೇ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮೊದಲ ಹಂತದ ಕಾಮಗಾರಿ ಈಗಾಗಲೇ ಆರಂಭ ಕೂಡ ಆಗಿದೆ. ಜತೆಗೆ ಎರಡನೇ ಹಂತದ ಕಾಮಗಾರಿ ಶೀಘ್ರದಲ್ಲಿ ಚಾಲನೆ ಪಡೆಯಲಿದೆ.

Advertisement

ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಮುಖ್ಯ ರಸ್ತೆಗೆ ಸಾಗುವ ರಸ್ತೆ ಅಗಲ ಕಿರಿದಾಗಿ ಸಂಚಾರಕ್ಕೆ ತೊಡಕಾಗಿತ್ತು. ಹೀಗಾಗಿ ಎರಡೂ ಭಾಗದಿಂದ ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸಲು ಇಲ್ಲಿ ಸಾಧ್ಯ ವಾಗುವುದಿಲ್ಲ. ವಾಹನಗಳ ದಟ್ಟಣೆ ಉಂಟಾಗಿ ಇಲ್ಲಿ ಕೆಲವು ಪ್ರಯಾಣಿಕರು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೆ ರೈಲು ತಪ್ಪಿದ ಘಟನೆಗಳು ಕೂಡ ನಡೆದಿವೆ. ಹೀಗಾಗಿ ಈ ರಸ್ತೆಯ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು.

ಮಂಗಳೂರು ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ, ಈ ರೈಲು ನಿಲ್ದಾಣಕ್ಕೆ ಜನರು ಆಗಮಿಸುವ ಹಿನ್ನೆಲೆಯಲ್ಲಿ ಇಲ್ಲಿನ ರಸ್ತೆಯ ಅವ್ಯವಸ್ಥೆಯಿಂದ ರೋಸಿಹೋಗಿದ್ದರು. ಒಂದು ಆಟೋ ರಿಕ್ಷಾ ಸಾಗಿದರೆ ಅದೇ ವೇಳೆಗೆ ಬೇರೆ ವಾಹನಗಳು ಸಾಗುವುದು ಕೂಡ ದುಸ್ತರವಾಗಿತ್ತು. ರಸ್ತೆ ವಿಸ್ತರಣೆಗೆ ಆಗ್ರಹಿಸಿ ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆ ಕೂಡ ನಡೆಸಿದ್ದರು. ಈ ಸಂಬಂಧ ರೈಲ್ವೇ ಇಲಾಖೆ ಕೂಡ ಪಾಲಿಕೆಯನ್ನು ಹಲವು ಬಾರಿ ಸಂಪರ್ಕಿಸಿತ್ತು. ಜೆ.ಆರ್‌. ಲೋಬೋ ಅವರು ಶಾಸಕರಾಗಿದ್ದ ಸಂದರ್ಭ ಈ ಭಾಗದ ಜನರು ರಸ್ತೆಗಾಗಿ ಜಾಗ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆಸಿ, ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಬಳಿಕ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿತ್ತು. ಇದೀಗ ಕಾಮಗಾರಿ ವೇಗ ಪಡೆದುಕೊಂಡಿದೆ.

4.50 ಕೋಟಿ ರೂ. ಕಾಮಗಾರಿ
ಪಾಲಿಕೆಯು ಮುಖ್ಯ ರಸ್ತೆಯಿಂದ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದವರೆಗಿನ ಸುಮಾರು 750 ಕಿ.ಮೀ. ಉದ್ದದ ರಸ್ತೆಯ ವಿಸ್ತರಣೆ, ಲೋಕೋಪಯೋಗಿ ಇಲಾಖೆ ಯಿಂದ ರಸ್ತೆ ಕಾಂಕ್ರೀಟ್‌ ಕಾಮಗಾರಿ ಸಹಿತ ಸುಮಾರು ನಾಲ್ಕೂ ವರೆ ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿದೆ. ರಸ್ತೆ ವಿಸ್ತರಣೆಗೆ ಅಗತ್ಯ ಖಾಸಗಿ ಭೂಮಿ ನೀಡಲು ಮಾಲಕರು ಬಹುತೇಕ ಒಪ್ಪಿಗೆ ನೀಡಿದ್ದು, ಮೂರೂವರೆ ಮೀಟರ್‌ ರಸ್ತೆ ಯನ್ನು ಇದೀಗ 12 ಮೀ.ಗೆ ವಿಸ್ತರಿಸಲಾಗುತ್ತಿದೆ. ರೈಲು ನಿಲ್ದಾಣದ ಪ್ರವೇಶದ್ವಾರದ ರಸ್ತೆ ಈಗ ನಾಲ್ಕೂವರೆ ಮೀಟರ್‌ ವಿಸ್ತೀರ್ಣವಿದ್ದು, ಇನ್ನಷ್ಟು ವಿಸ್ತರಿಸಲು ಜಾಗ ನೀಡುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ.

ಕಾಮಗಾರಿ ಆರಂಭ
ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣದ ರಸ್ತೆ ವಿಸ್ತ ರಣೆ ಹಲವು ವರ್ಷಗಳ ಬೇಡಿಕೆಯಾಗಿತ್ತು, ಆದರೆ ಜಾಗ ಹಾಗೂ ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಪಾಲಿಕೆಯ ಪ್ರೀಮಿಯಂ ಎಫ್‌ ಎಆರ್‌ ಮೂಲಕ 120 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ವಿವಿಧ ರಸ್ತೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ರಸ್ತೆ ವಿಸ್ತ ರಣೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಇದೀಗ ಟೆಂಡರು ಕರೆದು ಈ ರಸ್ತೆಯ ಕಾಮಗಾರಿ ಆರಂಭಿಸಲಾಗಿದೆ. 
 -  ಮಹಮ್ಮದ್‌ ನಝೀರ್‌, ಮನಪಾ ಆಯುಕ್ತ

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next