ಬೆಂಗಳೂರು: ನಿಷೇಧಿತ ಅಲ್ ಕಾಯಿದಾ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದಲ್ಲದೆ, ಕಾಶ್ಮೀರದ ಮೂಲದ ಅಫ್ಘಾನಿಸ್ಥಾನಕ್ಕೆ ಹೊರಡಲು ಸಿದ್ಧವಾಗಿ ನಗರ ಪೊಲೀಸರು ಮತ್ತು ಕೇಂದ್ರದ ತನಿಖಾ ಸಂಸ್ಥೆಗಳ ಬಲೆಗೆ ಬಿದ್ದಿದ್ದ ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಮತ್ತು ತಮಿಳುನಾಡಿನ ಜುಬಾನಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ವರ್ಗಾಯಿಸಲಾಗಿದೆ.
ಇದರ ಬೆನ್ನಲ್ಲೇ ದಿಲ್ಲಿಯ ಎನ್‌ಐಎ ಅಧಿಕಾರಿಗಳು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಆರೋಪಿ ಜತೆ ಅಸ್ಸಾಂ ಮತ್ತು ಕರ್ನಾಟಕದಲ್ಲಿ ಯಾರೆಲ್ಲ ಸಂಪರ್ಕದಲ್ಲಿದ್ದರು. ಅವರ ಉದ್ದೇಶವೇನು ಎಂಬ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಎನ್‌ಐಎ ತಿಳಿಸಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.
ಅಸ್ಸಾಂ ಮೂಲದ ಅಖ್ತರ್ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ತಿಲಕನಗರದ ಬಿಟಿಬಿ ಲೇಔಟ್‌ನ 3ನೇ ಕ್ರಾಸ್‌ನ ಫನಿ ಮಸೀದಿ ಸಮೀಪದ ಬಾಡಿಗೆ ಮನೆಯಲ್ಲಿ ಮೂವರ ಜತೆ ವಾಸವಾಗಿದ್ದ. ಫುಡ್‌ಡೆಲಿವರಿ ಬಾಯ್ ಆಗಿದ್ದ ಶಂಕಿತ, ಸಾಮಾಜಿಕ ಜಾಲತಾಣ ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ ಹಾಗೂ ಟೆಲಿಗ್ರಾಂಗಳಲ್ಲಿ ಸಕ್ರಿಯವಾಗಿದ್ದ. ಟೆಲಿಗ್ರಾಂನಲ್ಲಿ “ದಿ ಈಗಲ್ ಆಫ್ ಕೊರಸನ್ ಆ್ಯಂಡ್ ಹಿಂಡರ್-ಈಗಲ್’ ಎಂಬ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದ. ಅದರಲ್ಲಿ ಅಸ್ಸಾಂ ಮತ್ತು ನಗರದ ಕೆಲವರನ್ನು ಸೇರಿಸಿಕೊಂಡು ಉಗ್ರ ಪ್ರೇರಿತ ಪೋಸ್ಟ್‌ಗಳನ್ನು ಮಾಡುತ್ತಾ ಯುವಕರನ್ನು ಮೂಲಭೂತವಾದಿಗಳಾಗಿ ಪರಿವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಅಖ್ತರ್ ಹುಸೇನ್ ಲಷ್ಕರ್, ಯುವಕರ ಮೂಲಕ ಧರ್ಮಯುದ್ಧ (ಹೋಲಿವಾರ್)ಗಳನ್ನು ಮಾಡಿಸಲು ಪ್ರಚೋದನೆ ನೀಡಿದ್ದ. ಕೇಂದ್ರ ಸರಕಾರ ಜಾರಿಗೆ ತಂದಿದ್ದ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ, ದೇಶದಲ್ಲಿ ಮುಸ್ಲಿಂ ಸಮುದಾಯದ ಮೇಲಿನ ಕಿರುಕುಳ ಹಾಗೂ ಜಮ್ಮು – ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದರಿಂದ ಆಕ್ರೋಶಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಪೋಸ್ಟ್‌ಗಳನ್ನು ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.