Advertisement

ಯಂತ್ರ ಸಂಪರ್ಕ ದೂರವಾಗಿ ಮನುಷ್ಯ ಸಂಪರ್ಕ ಬೆಳೆಯಲಿ

12:13 AM Apr 21, 2019 | sudhir |

ಉಡುಪಿ: ಇಂದು ಯಂತ್ರ ಕೇಂದ್ರೀಕೃತವಾದ ಚಟುವಟಿಕೆ ಹೆಚ್ಚಾಗಿವೆ. ಇದರಿಂದಾಗಿ ಮನುಷ್ಯ ಮನುಷ್ಯರ ನಡುವಿನ ಸಂಪರ್ಕ ದೂರವಾಗಿದೆ. ಮತ್ತೆ ಮನುಷ್ಯ ಸಂಪರ್ಕ ಬೆಳೆಸುವ ಕೆಲಸವಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ, ಹಿರಿಯ ಕಲಾವಿದ ಪ್ರೊ| ಎಂ.ಎಲ್‌.ಸಾಮಗ ಹೇಳಿದರು.

Advertisement

ಮಣಿಪಾಲದ ಡಾ| ಟಿಎಂಎ ಪೈ ಆ್ಯಂಪಿ ಥಿಯೇಟರ್‌ನಲ್ಲಿ ಮಣಿಪಾಲ್‌ ಗ್ರೂಪ್‌ ವತಿಯಿಂದ ಆಯೋಜಿಸಲಾದ 6ನೇ ವರ್ಷದ ಮಕ್ಕಳ ಬೇಸಗೆ ಶಿಬಿರ “ಚೈತ್ರ ಚಿತ್ತಾರ -2019’ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಬಟನ್‌ಗಳೊಂದಿಗಿನ ಬದುಕು. ಇಂದಿನ ಮಕ್ಕಳ ಆಟಿಕೆಗಳನ್ನು ಕೂಡ ಯಂತ್ರಗಳಿಂದ ಆಕರ್ಷಕವಾಗಿ ಮಾಡಲಾಗುತ್ತದೆ. ಆದರೆ ಅದರಿಂದ ಮನುಷ್ಯ ಸಂಪರ್ಕದ ಖುಷಿ ಸವಿಯುವುದು ಅಸಾಧ್ಯ ಎಂದವರು ತಿಳಿಸಿದರು.

ಅಂದು ಅಜ್ಜನ ಕೋಲು ಎಲ್ಲವೂ…
ಹಿಂದಿನ ಕಾಲದ ಮಕ್ಕಳ ಆಟಕ್ಕೂ ಈಗಿನ ಮಕ್ಕಳ ಆಟಗಳಿಗೂ ಅಜಗಜಾಂತರ. ಆಗಿನ ಆಟದ ಮಜಾವೇ ಬೇರೆ. ಮಕ್ಕಳಿಗೆ ತಮ್ಮ ಅಜ್ಜನ ಒಂದು ಊರುಗೋಲು ಸಿಕ್ಕಿದರೆ ಸಾಕಿತ್ತು. ಅದನ್ನು ಹಿಡಿದು “ಅಜ್ಜನ ಕೋಲಿದು ನನ್ನಯ ಕುದುರೆ…ಹೆಜ್ಜೆ ಹೆಜ್ಜೆಗೆ ಕುಣಿಯುವ ಕುದುರೆ’ ಎಂದು ಆಡುತ್ತಾ ಅದರಲ್ಲೇ ವಿವಿಧ ರೀತಿಯ ಆಟಗಳನ್ನು ಆಡುತ್ತಿದ್ದರು. ಅದ್ಭುತ ಕಲ್ಪನೆಯನ್ನು ಮಾಡಿಕೊಳ್ಳುತ್ತಾ ಅದರಲ್ಲಿಯೇ ಕಳೆದು ಹೋಗುತ್ತಾ ಸಂಭ್ರಮಿಸುತ್ತಿದ್ದರು. ಇಂಥ ಆಟಗಳು ಹಲವಾರು ಮಕ್ಕಳು ಒಂದೇ ಕಡೆ ಸೇರಿ ಜತೆ ಜತೆಯಾಗಿ ಆಟವಾಡಲು ಅವಕಾಶ ಮಾಡಿಕೊಡುತ್ತಿದ್ದವು. ಆಗ ಮನುಷ್ಯ ಸಂಬಂಧ ಬೆಳೆಯುತ್ತಿತ್ತು. ಅಂಥ ಚಟುವಟಿಕೆಗಳು ಮತ್ತೆ ಬೆಳೆಯಬೇಕಾಗಿದೆ ಎಂದವರು ಹೇಳಿದರು.

ಶಿಬಿರದ ಸಂಯೋಜಕ, ನಿರ್ದೇಶಕ ಜಿ.ಪಿ. ಪ್ರಭಾಕರ್‌ ತುಮರಿ, ಮಣಿಪಾಲ್‌ ಟೆಕ್ನಾಲಜಿ ಎಚ್‌ಆರ್‌ ಸೀನಿಯರ್‌ ಮ್ಯಾನೇಜರ್‌ ಪ್ರಕಾಶ್‌ ಜಿ. ಪ್ರಭು ಉಪಸ್ಥಿತರಿದ್ದರು. ಎಚ್‌ಆರ್‌ ಡೆಪ್ಯುಟಿ ಮ್ಯಾನೇಜರ್‌ ಉಷಾರಾಣಿ ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

10 ದಿನಗಳ ಈ ಶಿಬಿರದಲ್ಲಿ ಗೀತ ಸಂಗೀತ, ಕರಾಟೆ ಕೌಶಲ, ಕಲಾಪೂರ್ಣ ಆಕೃತಿ ರಚನೆ, ಕಾಗದ ಕರಕೌಶಲ, ವಿಜ್ಞಾನ ಮಾದರಿ, ಹೊರಾಂಗಣ ಭೇಟಿ, ಕರಕುಶಲ ವೈಭವ, ನೃತ್ಯ ಸಂಭ್ರಮ, ಬಣ್ಣದ ಲೋಕ, ಭಾರತ ದರ್ಶನ, ಪ್ರಾಯೋಗಿಕ ತಯಾರಿ, ನಾಟಕ ತಾಲೀಮು, ಮಕ್ಕಳ ಚಲನಚಿತ್ರ ಪ್ರದರ್ಶನ, ನಮ್ಮ ಆರೋಗ್ಯ, ಪುರಾಣ ಪ್ರಪಂಚ-ರಸಪ್ರಶ್ನೆ, ಕಥಾ ಕಥನ, ಗಣಿತ ಲೋಕ, ಹಾವು-ನಾವು ಮೊದಲಾದ ಚಟುವಟಿಕೆಗಳು ನಡೆಯಲಿವೆ. ಈಗಿನ ಒತ್ತಡ ಮತ್ತು ಸ್ಪರ್ಧೆಗಳಿಗೆ ಮಕ್ಕಳನ್ನು ಭಾವನಾತ್ಮಕವಾಗಿ ಸಿದ್ಧಗೊಳಿಸುವ ಉದ್ದೇಶ ಕೂಡ ನಮ್ಮದಾಗಿದೆ ಎಂದು ಪ್ರಭಾಕರ್‌ ತುಮರಿ ತಿಳಿಸಿದರು.

ಆಗ ಗೆಳೆಯರ ಹಿಂಡು, ಈಗ ಒಬ್ಬಂಟಿ
ಮುಖ್ಯ ಅತಿಥಿಯಾಗಿದ್ದ ರಂಗಭೂಮಿ ಕಲಾವಿದ ಸಂತೋಷ್‌ ಶೆಟ್ಟಿ ಹಿರಿಯಡಕ ಮಾತನಾಡಿ, “ನಾವು ಹಿಂದೆ ಸಣ್ಣವರಿರುವಾಗ ಆಟಕ್ಕೆಂದು ಮನೆಯಿಂದ ಹೊರಗೆ ಹೋದಾಗ ಹತ್ತಾರು ಮಂದಿ ಗೆಳೆಯರ ಹಿಂಡೇ ಸಿಗುತ್ತಿತ್ತು. ಆದರೆ ಈಗಿನ ಮಕ್ಕಳು ಆಟವಾಡಬೇಕೆಂದು ಮನೆಯಿಂದ ಹೊರಗೆ ಹೊರಟರೂ ಅವರಿಗೆ ಗೆಳೆಯರು ಸಿಗುತ್ತಿಲ್ಲ. ಒಬ್ಬಂಟಿಯಾಗಿರಬೇಕಾಗುತ್ತಿದೆ. ಮಕ್ಕಳ ಜೀವಂತಿಕೆ, ಸಹಜತೆ ಉಳಿಸಿಕೊಳ್ಳುವುದು ಅಗತ್ಯ. ಇಂದಿನ ಸ್ಪರ್ಧಾತ್ಮಕ ಧಾವಂತದಲ್ಲಿ ಸಹಜ ಸಂಬಂಧಗಳು ಶಿಥಿಲಗೊಳ್ಳದಂತೆ ನೋಡಿಕೊಳ್ಳುವ ಅನಿವಾರ್ಯ ಇದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next