ಕೆ.ಆರ್.ನಗರ: ತಾಲೂಕನ್ನು ಬಯಲು ಮುಕ್ತ ಶೌಚಾಲಯವನ್ನಾಗಿ ಮಾಡುವ ಸಲುವಾಗಿ ಇಲ್ಲಿರುವ 34 ಗ್ರಾಪಂ ವ್ಯಾಪ್ತಿಯಲ್ಲಿ 2017-18 ಸಾಲಿನಲ್ಲಿ ಸುಮಾರು 12,642 ಸಾವಿರ ಶೌಚಾಲಯ ನಿರ್ಮಿಸುವ ಗುರಿ ನೀಡಲಾಗುತ್ತಿದೆ ಎಂದು ತಾಪಂ ಎಒ ಜಿ.ಸಿ.ನಿರಂಜನಮೂರ್ತಿ ಹೇಳಿದರು.
ತಾಲೂಕಿನ ಹಳಿಯೂರು ಗ್ರಾಪಂನಲ್ಲಿ ನಡೆದ ಸ್ವತ್ಛ ಭಾರತ್ ಮಿಷನ್ ಯೋಜನೆಯ ಅನುಷ್ಠಾನಕ್ಕಾಗಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿ, ಬಯಲು ಮುಕ್ತ ಶೌಚಾಲಯ ನಿರ್ಮಾಣಕ್ಕೆ ಜನತೆ ಗ್ರಾಪಂನೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಶೌಚಾಲಯ ನಿರ್ಮಿಸಿ ಕೊಳ್ಳಲು ಎಸ್ಸಿ, ಎಸ್ಟಿ ಅವರಿಗೆ 15 ಸಾವಿರ ರೂ. ಜತಗೆ ಗೌರವ್ ಯೋಜನಡಿ ಇದೇ ಸಮುದಾಯದವರಿಗೆ ಶೌಚಾಲಯ ಮತ್ತು ಸ್ನಾನದ ಮನೆ ನಿರ್ಮಾಣ ಮಾಡಿಕೊಂಡರೆ 20 ಸಾವಿರ ರೂ ಹಾಗೂ ಸಾಮಾನ್ಯ ವರ್ಗದ ಜನರಿಗೆ 12 ಸಾವಿರ ರೂಗಳನ್ನು ನೀಡುತ್ತಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಈಗಾಗಲೇ ತಾಲೂಕಿನಲ್ಲಿ ಗ್ರಾಪಂಗಳಿಗೆ ನೀಡಲಾಗಿರುವ ಶೌಚಾಲಯ ನಿರ್ಮಾಣದ ಗುರಿಯನ್ನು ನಿಗದಿತ ಅವಧಿಯೊಳಗೆ ಮುಟ್ಟುವ ಸಲುವಾಗಿ ಪ್ರತಿ ಗ್ರಾಪಂಗೂ ನೋಡಲ್ ಅಧಿಕಾರಿ, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಆಯಾ ಗ್ರಾಮದ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗರಾಜು ಮಾತನಾಡಿ, ನಮ್ಮ ಗ್ರಾಪಂಗೆ 1575 ಶೌಚಾಲಯ ನಿರ್ಮಾಣದ ಗುರಿ ನೀಡಲಾಗಿತ್ತು. ಈಗಾಲೇ 1445 ಶೌಚಾಲಯ ನಿರ್ಮಿಸಿದ್ದು ಉಳಿದ 130 ಶೌಚಾಲಯವನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಗುರಿ ತಲುಪಲು ಪ್ರಯತ್ನ ಮಾಡಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಡಿ ಇರುವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿ ಅಲ್ಲದೇ ಜಂಟಿ ಖಾತೆಯನ್ನು ಪ್ರತ್ಯೇಕವಾಗಿ ಮಾಡಿಸಿ ಇಲ್ಲದಿದ್ದರೆ ಖಾತ್ರಿ ಯೋಜನೆಯ ಅನುದಾನ ಬಿಡುಗಡೆಯಾಗುವುದಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಸ್ವತ್ಛ ಭಾರತ್ ಯೋಜನೆಯ ಸಂಯೋಜಕ ಎ.ಜಿ.ಮಂಜುನಾಥ್ ಮಾತನಾಡಿ, ಶೌಚಾಲಯ ಇಲ್ಲದೇ ಆಗುತ್ತಿರುವ ದುಷ್ಟಪರಿಣಾಮದ ಬಗ್ಗೆ ಮತ್ತು ಹರಡುತ್ತಿರುವ ಕಾಯಿಲೆಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. ಹಳಿಯೂರು ಎಸ್‌ಬಿಐ ಶಾಖೆಯಿಂದ ವರ್ಗವಣೆಗೊಂಡ ಮ್ಯಾನೇಜರ್ ಯೋಗೇಶ್ ಸಾಖ್ಯ ಅವರನ್ನು ಸನ್ಮಾನಿಸಿದರು.
ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಎಚ್‌ಚಿಕೆ ಭಾಸ್ಕರ್, ಸದಸ್ಯರಾದ ಹೆಚ್.ಆರ್.ಕೃಷ್ಣಮೂರ್ತಿ, ರಾಮಮ್ಮ, ನಂದಿನಿ, ಮಂಜುಳಾ, ಸುಶೀಲಾ, ಗೌರಮ್ಮ, ಕುಮಾರಸ್ವಾಮಿ, ಜಯರಾಮ್, ಎಚ್.ಎಲ್.ಮಹದೇವ್, ಪದ್ಮ, ರೇಣುಕಮ್ಮ, ರಿಜಾÌನಮುಸ್ತಾಕ್, ಎಚ್.ಎಸ್.ಅಜಯ್ ಕುಮಾರ್, ಚಲುವೇಗೌಡ, ತ್ರಿವೇಣಿ, ಡಿ.ಎಸ್.ಮಂಜುನಾಥ್, ತಾಪಂ ವ್ಯವಸ್ಥಾಪಕಿ ಅನಿತಾ, ಗ್ರಾಪಂ ಬಿಲ್ ಕಲೆಕ್ಟರ್ ಶ್ರೀನಿವಾಸ್, ಸಿಬ್ಬಂದಿ ಹರೀಶ್, ಸುರೇಶ್ ಇತರರು ಇದ್ದರು.