Advertisement

ಮಂಗಳೂರು ಉತ್ತರ ಕರ್ನಾಟಕದೊಂದಿಗೆ ರೈಲ್ವೇ ಜಾಲದಲ್ಲಿ ಜೋಡಿಸಿಕೊಳ್ಳಲಿ

07:20 AM Jan 06, 2019 | |

ಈ ಪ್ರಸ್ತಾವನೆ ರೂಪುಗೊಂಡರೆ ಉತ್ತರ ಕರ್ನಾಟಕದಿಂದ ಶಿಕ್ಷಣ, ಆರೋಗ್ಯ ಸೇವೆ ಮುಂತಾದ ಕಾರಣಗಳಿಂದ ಗಣನೀಯ ಪ್ರಮಾಣದಲ್ಲಿ ವಿದ್ಯಾರ್ಥಿಗಳು, ಜನರು ಮಂಗಳೂರಿಗೆ ಆಗಮಿಸುತ್ತಿದ್ದು, ಅವರಿಗೂ ಸಂಚಾರಕ್ಕೆ ಅನುಕೂಲವಾಗಲಿದೆ. ರೈಲ್ವೇ ಸಚಿವರಿಗೂ ಮನವಿ ಸಲ್ಲಿಸಿದ್ದು ಮುಂದಿನ ಮಾತುಕತೆ ಶೀಘ್ರದಲ್ಲೇ ನಡೆಯಲಿದೆ.

Advertisement

ಮಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಬಲವಾಗುತ್ತಿದೆ. ನಗರದ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದಲೂ ಇದು ಅತಿ ಅಗತ್ಯ. ಮುಖ್ಯವಾಗಿ ಮಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ ಮೂಲಕ ಬೆಳಗಾಂಗೆ, ಅಲ್ಲಿಂದ ಮುಂದಕ್ಕೆ ಮೀರಜ್‌ ವರೆಗೆ ರೈಲು ಸಂಚಾರ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ. ಈಗಾಗಲೇ ವಾಣಿಜ್ಯ ನಗರವಾಗಿ ಗುರುತಿಸಿಕೊಂಡಿರುವ ಹುಬ್ಬಳಿ-ಧಾರವಾಡ ನಗರಗಳ ಜತೆ ಹೆಚ್ಚಿನ ವಾಣಿಜ್ಯ ವ್ಯವಹಾರಕ್ಕೆ ಸಹಕಾರಿಯಾಗಲಿದೆ. ಶಿಕ್ಷಣ, ಆರೋಗ್ಯ ಸೇವೆ ಮುಂತಾದ ಕಾರಣಗಳಿಂದ ಆ ಭಾಗದಿಂದ ಗಣನೀಯ ಪ್ರಮಾಣದಲ್ಲಿ ವಿದ್ಯಾರ್ಥಿಗಳು, ಜನರು ಮಂಗಳೂರಿಗೆ ಆಗಮಿಸುತ್ತಿದ್ದು ಅವರಿಗೂ ಸಂಚಾರಕ್ಕೆ ಅನುಕೂಲವಾಗಲಿದೆ.

ಮಂಗಳೂರಿನಿಂದ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ರೈಲು ಸಂಚಾರ ಆರಂಭದ ಎರಡು ಪ್ರಮುಖ ಸಾಧ್ಯತೆಗಳಿವೆ. ಮಂಗಳೂರಿನಿಂದ ಹಾಸನ ಮಾರ್ಗವಾಗಿ ಹುಬ್ಬಳ್ಳಿ, ಬೆಳಗಾಂ ಭಾಗಕ್ಕೆ ರೈಲು ಸಂಚಾರ ಸಾಧ್ಯವಿದೆ. ಎರಡನೇ ಸಾಧ್ಯತೆ ಕೊಂಕಣ ರೈಲ್ವೇ ಮಾರ್ಗದಲ್ಲಿ ಕಾರವಾರ, ಮಡಂಗಾವ್‌, ದೂದ್‌ಸಾಗರ್‌ ಮೂಲಕ. ಎರಡನೇ ಸಾಧ್ಯತೆಯಲ್ಲಿ ಸುತ್ತಿ ಬಳಸಿ ಸಾಗಬೇಕಾಗಿರುವುದು ಮತ್ತು ಪ್ರಯಾಣದ ಸಮಯವೂ ದೀರ್ಘ‌ವಾಗಿರುವುದರಿಂದ ಇದು ಕಾರ್ಯ ಸಾಧುವಾಗಲಾರದು. ಹಾಸನ ಮಾರ್ಗ ಉತ್ತರ ಕರ್ನಾಟಕಕ್ಕೆ ಅತ್ಯಂತ ಸೂಕ್ತ ಹಾದಿಯಾಗಿ ಪರಿಗಣಿಸಲ್ಪಟ್ಟಿದೆ. ಮಂಗಳೂರು- ಹಾಸನ-ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾಂಗೆ ಸಾಗಬಹುದು ಹಾಗೂ ಇದನ್ನು ಮೀರಜ್‌ವರೆಗೆ ವಿಸ್ತರಿಸಬಹುದಾಗಿದೆ.

ಈಗಾಗಲೇ ಅಂಕೋಲಾದಿಂದ ಹುಬ್ಬಳ್ಳಿಗೆ ರೈಲು ಮಾರ್ಗದ ಸಮೀಕ್ಷೆ ನಡೆದಿದೆ. ಇದಕ್ಕೆ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ದೊರೆಯಬೇಕಾಗಿದೆ. 1997-98 ರಲ್ಲಿ ಕೇಂದ್ರ ರೈಲ್ವೇ ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಯಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಶೇ. 50ಃ50 ಭಾಗಿದಾರಿಕೆಯೊಂದಿಗೆ ನಡೆಯುವ ಈ ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಕ್ರಿಯೆಗಳನ್ನು ಆರಂಭಿಸಿದೆ. ಜ.9 ರಂದು ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆಯುವ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಇದು ಚರ್ಚೆಗೆ ಬರುವ ಸಾಧ್ಯತೆಗಳಿವೆ. ಒಂದೊಮ್ಮೆ ಈ ಯೋಜನೆ ಕಾರ್ಯಗತಗೊಂಡರೆ ಮಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಮತ್ತೊಂದು  ರೈಲ್ವೇ ಹಾದಿ ತೆರೆದುಕೊಳ್ಳಲಿದೆ.

ಮಂಗಳೂರು-ಹಾಸನ ನಡುವೆ ಮೀಟರ್‌ ಗೇಜ್‌ ರೈಲು ಮಾರ್ಗವಿದ್ದ ವೇಳೆ 1994 ರ ವರೆಗೆ ಮಂಗಳೂರಿನಿಂದ ಮೀರಜ್‌ವರೆಗೆ ರೈಲು ಸಂಚಾರವಿತ್ತು. ಮಂಗಳೂರು ಸೆಂಟ್ರಲ್‌ನಿಂದ ಮೀರಜ್‌ ಗೆ ಪ್ರತಿದಿನ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ಹೆಸರಿನ ರೈಲು ಸಂಚರಿಸುತ್ತಿತ್ತು. ಈ ರೈಲು ಮಂಗಳೂರು ಸೆಂಟ್ರಲ್‌ನಿಂದ ಪ್ರತಿದಿನ ರಾತ್ರಿ 11 ಗಂಟೆಗೆ ಹೊರಟು ಹಾಸನ, ಸಕಲೇಶಪುರ, ಅರಸಿಕೆರೆ, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮಾರ್ಗವಾಗಿ ಮೀರಜ್‌ಗೆ ಸಾಗುತ್ತಿತ್ತು. ಮೀರಜ್‌ ಪ್ರಯಾಣಕ್ಕೆ ಒಟ್ಟು 19 ತಾಸು ತಗಲುತ್ತಿತ್ತು. ಅನಂತರ ಈ ರೈಲು ಸಂಪರ್ಕವನ್ನು ಮಂಗಳೂರು-ಹಾಸನ ಮಾರ್ಗದ ಬ್ರಾಡ್‌ಗೇಜ್‌ ಪರಿವರ್ತನೆ ಕಾಮಗಾರಿ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿತ್ತು. ಬಳಿಕ ಅದು ಮಂಗಳೂರಿಗೆ ದಕ್ಕಲಿಲ್ಲ. ಮಹಾಲಕ್ಷ್ಮೀ ಎಕ್ಸ್‌ ಪ್ರಸ್‌ ಅನ್ನು ಮುಂಬಯಿಗೆ ವರ್ಗಾಯಿಸಲಾಯಿತು. ಇದೀಗ ಈ ರೈಲು ಮುಂಬಯಿ ಸಿಎಸ್‌ಟಿ ನಿಲ್ದಾಣದಿಂದ ಕರ್ಜತ್‌, ಲೋನಾವಾಲ, ಪುಣೆ ಜಂಕ್ಷನ್‌, ಸಾಂಗ್ಲಿ, ಮೀರಜ್‌ ಜಂಕ್ಷನ್‌ ಮೂಲಕ ಕೊಲ್ಲಾಪುರಕ್ಕೆ ಸಂಚರಿಸುತ್ತಿದೆ. ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲು ಗಾಡಿಯನ್ನು ಮರು ಆರಂಭಿಸುವಂತೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘ ಸೇರಿದಂತೆ ರೈಲ್ವೇ ಪ್ರಯಾಣಿಕರ ಸಂಘಟನೆಗಳು ಆಗ್ರಹಿಸಿವೆ.

Advertisement

ಸಾಂಗ್ಲಿ, ಮೀರಜ್‌ ನಡುವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು ಸೇರಿದಂತೆ ಕನ್ನಡಿಗರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ಪುಣೆ ಜಂಕ್ಷನ್‌ನಿಂದ ಎರ್ನಾಕುಳಂ ಜಂಕ್ಷನ್‌ನಿಗೆ‌ (ರೈಲು ನಂ.11097) ‘ಪೂರ್ಣ ಎಕ್ಸ್‌ಪ್ರೆಸ್‌’ ವಾರಕ್ಕೆ ಒಮ್ಮೆ ಅಂದರೆ ರವಿವಾರ ಸಂಚಾರ ನಡೆಸುತ್ತಿದೆ. ಈ ರೈಲು ಮಂಗಳೂರು ಜಂಕ್ಷನ್‌, ಉಡುಪಿ, ಭಟ್ಕಳ, ಮಡಂಗಾವ್‌ ಜಂಕ್ಷನ್‌, ಕುಲೆಂ, ಬೆಳಗಾಂ ಮೂಲಕ ಮೀರಜ್‌, ಸಾಂಗ್ಲಿ , ಸತಾರ ಮೂಲಕ ಪುಣೆ ಜಂಕ್ಷನ್‌ಗೆ ಹಾದು ಹೋಗುತ್ತದೆ. ಹೀಗಿರುವಾಗ, ಅರಸಿಕೆರೆ ಮಾರ್ಗವಾಗಿ ಹುಬ್ಬಳ್ಳಿ-ಧಾರವಾಡ ಮೂಲಕ ಮೀರಜ್‌ ಗೆ ನೇರ ರೈಲು ಸಂಪರ್ಕ ಕಲ್ಪಿಸಿದರೆ ಕರಾವಳಿ ಭಾಗದವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲುಗಾಡಿಯನ್ನು ಮಂಗಳೂರು ಮೀರಜ್‌ ನಡುವೆ ಮರು ಆರಂಭಿಸುವುದರಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸಾಂಗ್ಲಿ ಹಾಗೂ ಮೀರಜ್‌ ನಡುವೆ ನೇರ ರೈಲು ಸಂಪರ್ಕ ಸಾಧ್ಯವಾಗುತ್ತದೆ. ಮಂಗಳೂರು-ಧಾರವಾಡ ನಡುವೆಯೂರೈಲ್ವೇ ಪ್ರಯಾಣ ಜಾಲ ಏರ್ಪಡುತ್ತದೆ. ಮಂಗಳೂರು-ಹಾಸನ ಮಾರ್ಗದ ಮೂಲಕ ಸುಮಾರು 14 ತಾಸಿನಲ್ಲಿ ಮಂಗಳೂರಿನಿಂದ ಮೀರಜ್‌ಗೆ ಪ್ರಯಾಣಿಸಬಹುದು.

ಗುಲ್ಬರ್ಗಾ- ಮಂಗಳೂರು 
ಮಂಗಳೂರಿನಿಂದ ಗುಲ್ಬರ್ಗಾಕ್ಕೆ ರೈಲು ಸಂಚಾರದ ಬೇಡಿಕೆ ವ್ಯಕ್ತವಾಗಿದೆ. ಗುಲ್ಬರ್ಗಾದಿಂದ ವಾಡಿ-ಯಾದಗಿರಿ-ರಾಯಚೂರು-ಗುಂಟಕಲ್‌, ಬಳ್ಳಾರಿ, ಚಿಕ್ಕಮಗಳೂರು- ಬೀರೂರ,, ಕಡೂರು, ಅರಸೀಕೆರೆ, ಹಾಸನ- ಸಕಲೇಶಪುರ, -ಸುಬ್ರಹ್ಮಣ್ಯ ರಸ್ತೆ, ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಸಂಚಾರ ನಡೆಸಬಹುದಾಗಿದೆ. ರೈಲ್ವೇ ಇಲಾಖೆ ಈ ಸಲಹೆಯನ್ನು ಪರಿಶೀಲಿಸಬಹುದಾಗಿದೆ. 

ಸಚಿವರಿಂದ ಸ್ಪಂದನೆ
ಮಂಗಳೂರಿನಿಂದ ಹುಬ್ಬಳ್ಳಿ -ಧಾರವಾಡ-ಬೆಳಗಾಂ ಭಾಗಕ್ಕೆ ರೈಲು ಸಂಚಾರ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಮರು ಆರಂಭಿಸಬೇಕು ಎಂದು ರೈಲ್ವೇ ಸಚಿವ ಪಿಯೂಸ್‌ ಗೋಯಲ್‌ ಅವರನ್ನು ನಾನು ಈಗಾಗಲೇ ಭೇಟಿಯಾಗಿ ಮನವಿ ಮಾಡಿದ್ದೇನೆ. ಇದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಆಗುವ ಅನುಕೂಲತೆಗಳನ್ನು ಮನವರಿಕೆ ಮಾಡಲಾಗಿದೆ. ರೈಲ್ವೇ ಸಚಿವರಿಂದ ಇದಕ್ಕೆ ಪೂರಕ ಸ್ಪಂದನೆ ದೊರಕಿದೆ.
– ನಳಿನ್‌ ಕುಮಾರ್‌ ಕಟೀಲ
ಸಂಸದರು, ದ.ಕನ್ನಡ ಲೋಕಸಭಾ ಕ್ಷೇತ್ರ 

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next